»   » ಪೂಜಾ ಗಾಂಧಿ ತಂಗಿ ರಾಧಿಕಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣ

ಪೂಜಾ ಗಾಂಧಿ ತಂಗಿ ರಾಧಿಕಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣ

Posted By: Staff
Subscribe to Filmibeat Kannada
Radhika Gandhi
ಹನ್ನೆರಡನೇ ತರಗತಿಯಲ್ಲಿ ಓದುತ್ತಿರುವ ರಾಧಿಕಾ ಪುಸ್ತಕಗಳನ್ನು ಪಕ್ಕಕ್ಕಿಟ್ಟು ಚಿತ್ರರಂಗ ಎಂಬ ಶಾಲೆಗೆ ಅಡಿಯಿಟ್ಟಿದ್ದಾರೆ. ಮುಂಗಾರಿನಂತೆಯೇ ಹಿಂಗಾರೂ ಸುರಿಯುವುದೋ ಕಾದು ನೋಡಬೇಕು.

ಮುಂಗಾರು ಮಳೆಯ ಬೆನ್ನಲ್ಲೇ ಹಿಂಗಾರು ಮಳೆ ಬರುತಿದೆ.

ಕನ್ನಡ ಚಿತ್ರರಂಗವನ್ನು ನೆನೆಸಿ ಸಂಮೃದ್ಧಿಯಾಗಿಸಿದ 'ಮುಂಗಾರು ಮಳೆ' ಅವಕಾಶಗಳ ಮಳೆ ಸುರಿಸಿದರೂ ಯಶಸ್ಸಿನಲ್ಲಿ ಸಮಪಾಲು ಸಿಗಲಿಲ್ಲವೆಂಬ ಕೊರಗು ಇದ್ದರೂ ಒಂದೇ ಬಳ್ಳಿಯ ಕುಡಿಯಾಗಿರುವ ತಂಗಿ ರಾಧಿಕಾ ಗಾಂಧಿಯನ್ನು ಪೂಜಾ ಗಾಂಧಿ ಕನ್ನಡ ಪರದೆಯ ಮೇಲೆ ತಂದು ನಿಲ್ಲಿಸುತ್ತಿದ್ದಾರೆ.

ಪೂಜಾ ಗಾಂಧಿಗಿಂತಲೂ ಮುದ್ದಾಗಿರುವ ರಾಧಿಕಾ ಗಾಂಧಿ 'ಬಳ್ಳಿ' ಎಂಬ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣ ಮಾಡುತ್ತಿದ್ದಾರೆ.

ಅರಳು ಹುರಿದಂತೆಯಲ್ಲದಿದ್ದರೂ ಕನ್ನಡದ ನಟಿಯರು ನಾಚುವಂತೆ ಕನ್ನಡ ಮಾತನಾಡುತ್ತಿರುವ ಪೂಜಾ ಗಾಂಧಿ ಇಲ್ಲೇ ನೆಲೆಯೂರಲು ಆಸಕ್ತಿ ತೋರಿದ್ದರೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ನೆಂದು, ಬೆಂದು ಬಂದಿದ್ದರು. ಆದರೆ, ರಾಧಿಕಾ ಗಾಂಧಿಗೆ ನೇರವಾಗಿ ಅಕ್ಕ ಪೂಜಾಳಿಂದ ಕನ್ನಡ ಭಾಷೆ ಮತ್ತು ಚಿತ್ರಗಳ ಪಾಠ ಹೇಳಿಸಿಕೊಳ್ಳಲಿದ್ದಾರೆ.

ಹನ್ನೆರಡನೇ ತರಗತಿಯಲ್ಲಿ ಓದುತ್ತಿರುವ ರಾಧಿಕಾ ತಮ್ಮ ಹೆಸರನ್ನೂ ಅಕ್ಕನಂತಲೇ ಬದಲಾಯಿಸುತ್ತಾರೋ ನೋಡಬೇಕು. ಯಾಕೆಂದರೆ ರಾಧಿಕಾ ಎಂಬ 'ಖ್ಯಾತ' ನಟಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಆವರಿಸಿಕೊಂಡಿದ್ದಾರೆ. ಮೊದಲು ಸಂಜನಾ ಗಾಂಧಿಯಾಗಿದ್ದ ಪೂಜಾ ತಮ್ಮನ್ನು ಮತ್ತೊಬ್ಬ ಸಂಜನಾ ಎಂದು ತಿಳಿದುಕೊಂಡಾರೆಂದು ತಮ್ಮ ಮೂಲ ಹೆಸರನ್ನೇ ಉಳಿಸಿಕೊಂಡರು. ಈ ರಾಧಿಕಾಳನ್ನು 'ಹಠವಾದಿ' ರಾಧಿಕಾಳೊಂದಿಗೆ ಸಮೀಕರಿಸಿ ನೋಡುವ ಅಪಾಯವಿರುವುದರಿಂದ ಪೂಜಾಳ ತಂಗಿ ರಾಧಿಕಾಳೂ ಹೆಸರು ಬದಲಿಸಿಕೊಂಡರೆ ಅಚ್ಚರಿಯಿಲ್ಲ!

'ಬಳ್ಳಿ' ಚಿತ್ರದಲ್ಲಿ ಜಾಹೀರಾತು ಸಂಸ್ಥೆಯೊಂದರ ಮುಖ್ಯಸ್ಥನಾಗಿರುವ ರಂಜನ್ ಎಂಬ ನವಯುವಕನ ನಾಯಕಿಯಾಗಿ ರಾಧಿಕಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬ್ರಾಹ್ಮಣ ಯುವತಿಯಾಗಿ ರಾಧಿಕಾ ಕಾಣಿಸಿಕೊಳ್ಳಲಿದ್ದಾರೆ.

ಮನ್ಮಥ, ಮಿಲನ ಚಿತ್ರಗಳಲ್ಲಿ ಗೆಸ್ಟ್ ಪಾತ್ರಗಳಲ್ಲಿ ಪೂಜಾ ನಟಿಸಿದ್ದರೂ ಉಪೇಂದ್ರರ 'ಬುದ್ಧಿವಂತ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಕೋಡಗನ ಕೋಳಿ ನುಂಗಿತ್ತ', ಗಣೇಶ್‌ರೊಂದಿಗೆ ನಟಿಸುತ್ತಿರುವ 'ಕೃಷ್ಣ', 'ಟಾಟಾ ಬಿರ್ಲಾ', 'ಹನಿ ಹನಿ' ಮುಂತಾದ ಚಿತ್ರಗಳು ಪೂಜಾ ಕೈಯಲ್ಲಿವೆ.

ಕನ್ನಡ ಚಿತ್ರದಲ್ಲಿ ನೆಲೆಯೂರುತ್ತಿರುವ ಪೂಜಾಗೆ ಸುನೈನಾ ಎಂಬ ಮತ್ತೊಬ್ಬ ತಂಗಿಯೂ ಇದ್ದಾಳೆ. ಆದರೆ ಆಕೆಗೆ ನಟನೆಯಲ್ಲಿ ಆಸಕ್ತಿಯಿಲ್ಲ.

'ಮುಂಗಾರು ಮಳೆ'ಯ ನಂತರ 'ಹಿಂಗಾರು ಮಳೆ'ಯೂ ಹಣದ ಹೊಳೆಯನ್ನೇ ಹರಿಸುತ್ತದೋ ಕಾದು ನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada