For Quick Alerts
  ALLOW NOTIFICATIONS  
  For Daily Alerts

  ಸಾರಥಿಗಾಗಿ ಕಾಸ್ಟ್ ಕಟ್ ಮಾಡುವರೆ ಚಂದ್ರು?

  By *ಜಯಂತಿ
  |

  ದರ್ಶನ್ ನಾಯಕತ್ವದಲ್ಲಿ ಕೆ.ಸಿ.ಎನ್. ಚಂದ್ರಶೇಖರ್ ಸಿನಿಮಾ ಮಾಡುತ್ತಾರೆ ಎಂದು ಬಹುದಿನಗಳಿಂದ ಗಾಂಧಿನಗರದಲ್ಲಿ ಕೇಳಿಬರುತ್ತಿದ್ದ ಮಾತು ಕೊನೆಗೂ ಕಾರ್ಯರೂಪಕ್ಕೆ ಬಂದಿದೆ. ನವೆಂಬರ್ 19ರ ಗುರುವಾರ ಸಾರಥಿ ಸೆಟ್ಟೇರಿದೆ. ದರ್ಶನ್ ನಾಯಕತ್ವದ ಸಾರಥಿ ಚಿತ್ರಕ್ಕೆ ಅವರ ಸೋದರ ದಿನಕರ್ ತೂಗುದೀಪ್ ನಿರ್ದೇಶಕರು. ಚಿತ್ರದಲ್ಲಿ ದರ್ಶನ್ ಆಟೋ ಚಾಲಕ. ನಾಯಕಿ ಇನ್ನೂ ಪಕ್ಕಾ ಆಗಿಲ್ಲ.

  ಸಂಪತ್ತಿಗೆ ಸವಾಲ್ ಚಿತ್ರದ ಮಂಜುಳಾ ಅವರನ್ನು ನೆನಪಿಸುವ ಗತ್ತಿನ ಪಾತ್ರ ಸಾರಥಿಯ ನಾಯಕಿಯದಂತೆ. ಈ ಸವಾಲಿನ ಪಾತ್ರಕ್ಕೆ ಯಾರು ಆಯ್ಕೆಯಾಗಬಹುದು? ಅವರ್ ಬಿಟ್ ಇವರ್ ಬಿಟ್... ಕಾದು ನೋಡಿ ಎಂದರು ದಿನಕರ್. ಸಿದ್ಧತೆಗಳೆಲ್ಲ ಮುಗಿದಿವೆ. ನಾಯಕಿ ಸಿಕ್ಕ ತಕ್ಷಣ ಚಿತ್ರೀಕರಣ ಶುರು ಎಂದರು ನಿರ್ದೇಶಕರು. ಹಾಗಿದ್ದರೆ ತರಾತುರಿಯಲ್ಲಿ ಮುಹೂರ್ತ ನಡೆಸಿದ್ದು ಯಾಕೆ? ಒಳ್ಳೆಯ ದಿನವೆಂದು ಪೂಜೆ ನಡೆಸಿದ್ದೇವೆ ಅಷ್ಟೇ ಎಂದರು ನಿರ್ಮಾಪಕ ಚಂದ್ರು. ನಂತರದ ಮಾತಿಗೆಲ್ಲ ಚಂದ್ರು ಅವರೇ ಗುರಿ.

  ಕಳೆದೊಂದು ವರ್ಷದಿಂದ ಸಿನಿಮಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿರ್ಮಾಪಕ ಸಂಘ ಕಾಸ್ಟ್ ಕಟಿಂಗ್ ಮಂತ್ರ ಜಪಿಸುತ್ತಿರುವುದು ಸರಿಯಷ್ಟೇ. ಈಚೆಗೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಸಂಘ- ಕಲಾವಿದರ ಸಂಭಾವನೆ ಕಡಿತದ ನಿರ್ಣಯ ಕೈಗೊಂಡಿದೆ. ಕಲಾವಿದರ ಸಂಭಾವನೆ ಎಂದರೆ ನಾಯಕ ನಟರ ಸಂಭಾವನೆ ಎಂದೇ ಅರ್ಥ. ಹಾಗಾಗಿ, ಈ ಆಪರೇಷನ್ ಕಾಸ್ಟ್ ಕಟಿಂಗ್ ಸಾರಥಿ ಚಿತ್ರದಲ್ಲಿ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ?

  ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಾಪಕರ ಸಂಘದ ಅಧ್ಯಕ್ಷರು. ಸಂಘದ ನೀತಿ ನಿಲುವುಗಳನ್ನು ರೂಪಿಸುವುದರಲ್ಲಿ ಅವರ ಪಾತ್ರ ದೊಡ್ಡದು. ಹಾಗಾಗಿ ಅವರ ನಿರ್ಮಾಣದ ಚಿತ್ರದಲ್ಲಿ ಕಾಸ್ಟ್ ಕಟಿಂಗ್ ಯಾವ ಪ್ರಮಾಣದಲ್ಲಿ ಜಾರಿಗೆ ಬಂದಿದೆ? ದರ್ಶನ್ ಸಂಭಾವನೆಯಲ್ಲಿ ಎಷ್ಟು ಕಡಿತ ಮಾಡಲಾಗಿದೆ? ಎನ್ನುವ ಪ್ರಶ್ನೆಗಳು ಸಹಜವೇ.ಚಂದ್ರು ನೇರವಾಗಿ ಉತ್ತರಿಸಲೇ ಇಲ್ಲ. ಅನಗತ್ಯ ವೆಚ್ಚ ಮಾಡುವುದಿಲ್ಲ ಎಂದು ನಿರ್ದೇಶಕರು ಆಶ್ವಾಸನೆ ನೀಡಿದ್ದಾರೆ ಎಂದಷ್ಟೇ ಹೇಳಿ ಮತ್ತೆ ಮಾತುಮಾತಿಗೂ ನಕ್ಕರು.

  ನಿರ್ಮಾಪಕರ ನೆರವಿಗೆ ಬಂದದ್ದು ನಾಯಕ ನಟ ದರ್ಶನ್. ಚಂದ್ರು ಅವರ ಮೇಲಿನ ಪ್ರೀತಿಯಿಂದ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹೋಂಬ್ಯಾನರ್ ಚಿತ್ರದಲ್ಲಿ ನಟಿಸುವಷ್ಟೇ ಪ್ರೀತಿಯಿಂದ ನಟಿಸುತ್ತಿದ್ದೇನೆ. ನಮ್ಮ ಸ್ವಂತ ಚಿತ್ರಕ್ಕೆ ಹಾಕುವ ಶ್ರಮಕ್ಕಿಂತಲೂ ಶೇ.10ರಷ್ಟು ಹೆಚ್ಚು ಶ್ರಮವನ್ನು ಈ ಸಿನಿಮಾದಲ್ಲಿ ತೊಡಗಿಸುತ್ತಿದ್ದೇನೆ ಎಂದರು. ಸಂಭಾವನೆ ವಿಷಯ ಮಾತ್ರ ಅವರುಬಾಯಿಬಿಡಲಿಲ್ಲ.

  ಈ ಮೊದಲು ಕೆಸಿಎನ್ ಅವರ ಭೂಪತಿ ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ಆ ಚಿತ್ರ ಅಷ್ಟೇನೂ ಚೆನ್ನಾಗಿ ಹೋಗಿರಲಿಲ್ಲ. ಆ ಋಣಸಂದಾಯಕ್ಕೆ ಈ ಚಿತ್ರವಾ? ಉತ್ತರಿಸಬೇಕಾದ ದರ್ಶನ್ ಕೂಡ ನಗುವಿನ ಮೊರೆಹೋದರು. ಹೋಂ ಬ್ಯಾನರ್ ಚಿತ್ರ ಎನ್ನುವ ದರ್ಶನ್ ಮಾತಿಗೆ ಮತ್ತೊಂದು ಆಯಾಮವೂ ಇತ್ತು. ದರ್ಶನ್ ಸೋದರ ದಿನಕರ್, ಸಾರಥಿ ನಿರ್ದೇಶಕ. ತಮ್ಮ ಸೋದರ ನಿರ್ದೇಶಕನಾಗಿ ಗಟ್ಟಿನೆಲೆ ಕಂಡುಕೊಳ್ಳಲಿ ಎನ್ನುವ ದರ್ಶನ್‌ರ ಹಂಬಲ ಕೂಡ ಅವರು ಕೆಸಿಎನ್ ಚಿತ್ರವನ್ನು ಒಪ್ಪಿಕೊಂಡ ಕಾರಣಗಳಲ್ಲೊಂದು ಇದ್ದಂತಿದೆ.

  ಅದೇನೇ ಇರಲಿ, ನಿರ್ಮಾಪಕರ ಸಂಘದ ಅಧ್ಯಕ್ಷರು ಪಾರದರ್ಶಕತೆ ಕಾಪಾಡಿಕೊಳ್ಳುವುದು ಉದ್ಯಮದ ಹಿತದೃಷ್ಟಿಯಿಂದ ಒಳಿತಲ್ಲವೇ? ಸಾರಥಿಯಾಗಿ ಅವರೇ ಪಾರದರ್ಶಕವಾಗಿಲ್ಲದಿದ್ದರೆ ಹೇಗೆ? ಶ್ವೇತನಾಗ ಡಬ್ಬಿಂಗ್ ವಿವಾದದ ಸಂದರ್ಭದಲ್ಲೂ ಚಂದ್ರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ವರ್ತಿಸಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ತಾವು ಅಮಾಯಕರು ಎಂದಿದ್ದ ಚಂದ್ರು ನೈತಿಕ ಹೊಣೆ ಹೊತ್ತು ನಿರ್ಮಾಪಕರ ಸಂಘಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು. ಏನಾಯಿತು ಆ ರಾಜೀನಾಮೆ?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X