»   »  ಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!

ಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!

Subscribe to Filmibeat Kannada

*ಜಯಂತಿ

Hemanth Hegde
ಸಿನಿಮಾ ಮಂದಿಯ ಹುಚ್ಚುತನ ಒಂದೆರಡಲ್ಲ. ಈ ಸಲ ನಿರ್ದೇಶಕ ಹೇಮಂತ ಹೆಗಡೆ ಇನ್ನೊಂದು ಹುಚ್ಚು ಹತ್ತಿಸಿಕೊಂಡಿದ್ದಾರೆ. ಉಡುಪಿ ಹತ್ತಿರದ ಒತ್ತಿನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಅರುವತ್ತೆರಡು ಅಡಿ ಮೂರ್ತಿಯನ್ನು ನಿರ್ಮಿಸಲು ಅವರು ನಿರ್ಧರಿಸಿದ್ದಾರೆ. ಅವರೇ ನಿರ್ದೇಶಿಸುತ್ತಿರುವ 'ಹೌಸ್‌ಫುಲ್' ಚಿತ್ರಕ್ಕೂ, ಈ ಮೂರ್ತಿಗೂ ಸಂಬಂಧವಿದೆ.

ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಬಾಕಿ ಇರುವುದು ಹಾಡುಗಳು. ಆ ಪೈಕಿ ಒಂದು ಹಾಡನ್ನು ಚಾಪ್ಲಿನ್ ಮೂರ್ತಿ ಎದುರಲ್ಲೇ ಚಿತ್ರಿಸುತ್ತಾರೆ. ಅಕ್ಟೋಬರ್‌ನಿಂದ ಮೂರ್ತಿ ನಿರ್ಮಾಣಕ್ಕೆ ಅನುಮತಿ ಪಡೆಯುವ ಕಸರತ್ತಿನಲ್ಲೇ ಅವರು ಮುಳುಗಿದ್ದರು. ಈಗ ಅನುಮತಿ ಸಿಕ್ಕಿದೆ. ಕಲಾ ನಿರ್ದೇಶಕ ಚೇತನ್ ಮುಂಡಾಡಿ ಚಾಪ್ಲಿನ್ ಮೂರ್ತಿ ನಿರ್ಮಾಣದ ವಿನ್ಯಾಸ ಮಾಡಲಿದ್ದಾರೆ. ಸ್ಟಿಕ್ ಹಿಡಿದು ನಿಂತ ಚಾಪ್ಲಿನ್‌ನ ಜನಪ್ರಿಯ ಮೂರ್ತಿಯೇ ಇದಕ್ಕೆ ಆಧಾರ. ಇಷ್ಟೆತ್ತರದ ಚಾಪ್ಲಿನ್ ಮೂರ್ತಿ ಇದುವರೆಗೆ ಎಲ್ಲೂ ಇಲ್ಲ. ಹಾಗಾಗಿ ಇದು ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರಲಿದೆ. ಮಾರ್ಚ್ 28ರಂದು ಮೂರ್ತಿ ಅನಾವರಣಗೊಳಿಸುವ ಉದ್ದೇಶ ಹೇಮಂತ್ ಹೆಗಡೆ ಅವರದ್ದು.

ಗಿನ್ನೆಸ್ ದಾಖಲೆಯ ವಿವರಗಳನ್ನು ನೋಡಿಕೊಳ್ಳುವ ಅಧಿಕಾರಿಗಳ ಪೈಕಿ ಡೇವಿಡ್ ಬ್ರೌನ್ ಎಂಬುವರು ಬಂದು ಮೂರ್ತಿ ನೋಡಲಿದ್ದಾರೆ. ಅವರ ಅನುಮೋದನೆಯ ನಂತರ ಚಾಪ್ಲಿನ್ ಮೂರ್ತಿ ಗಿನ್ನೆಸ್ ಪುಸ್ತಕದಲ್ಲಿ ಗುರುತಾಗಲಿದೆ. ಅಂದಹಾಗೆ, ಇಂಥದೊಂದು ಮೂರ್ತಿ ನಿರ್ಮಿಸಲು ಮೂವತ್ತೈದು ಕೋಟಿ ರೂಪಾಯಿ ಖರ್ಚಾಗಲಿದೆ. ಇದನ್ನು ಶಾಶ್ವತವಾಗಿ ಒತ್ತಿನೆಣೆಯಲ್ಲಿ ಇರಿಸಲಾಗುತ್ತದೆ. ಕಾಂಕ್ರೀಟ್‌ನ ಮೂರ್ತಿಯ ಮುಖಭಾಗವನ್ನು ಮಾತ್ರ ಫೈಬರ್‌ನಿಂದ ನಿರ್ಮಿಸುತ್ತಾರೆ.

ಇಷ್ಟಕ್ಕೂ ಚಾಪ್ಲಿನ್ ಮೂರ್ತಿಯೇ ಯಾಕಾಗಬೇಕು ಅನ್ನೋದು ಪ್ರಶ್ನೆ. ಚಿತ್ರಕ್ಕೆ ಅದು ಹೊಂದುತ್ತದೆ ಎಂಬುದು ಹೇಮಂತ್ ಹೆಗಡೆ ಸಬೂಬು. ಸಿನಿಮಾಗೆ ಹಾಕಿದ ಬಂಡವಾಳ ಬರುವುದೇ ಅಪರೂಪ ಎನ್ನುವ ಈ ದಿನಗಳಲ್ಲಿ ಅವರದ್ದು ಹುಚ್ಚು ಸಾಹಸವೇ ಅಲ್ಲವೇ?

ಇಷ್ಟೇ ಅಲ್ಲ, ತಮ್ಮ ಸಿನಿಮಾದಲ್ಲಿ ನಟಿಸುವಂತೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರನ್ನು ಕರೆತರುವ ವಿಫಲ ಯತ್ನವನ್ನೂ ಹೇಮಂತ್ ನಡೆಸಿದ್ದಾರೆ. ಸಿಧು ಒಂದು ದಿನಕ್ಕೆ ಕೇಳಿದ ಸಂಭಾವನೆ ಕೇವಲ ಹದಿನೈದು ಲಕ್ಷ ರೂಪಾಯಿ! ಅದನ್ನು ಕೇಳಿ ಬೆವೆತ ಹೇಮಂತ್, ಮುಂಬೈನ ಟಿವಿ ನಟ ಅಮರ್‌ಜಿತ್ ಸಿಂಗ್ ಕೈಲಿ ಸಿಧು ಮಾಡಬೇಕಿದ್ದ ಪಾತ್ರವನ್ನು ಮಾಡಿಸಿದ್ದಾರೆ.

ಹೌಸ್ ಫುಲ್ ಚಿತ್ರ ಮುನ್ನಡೆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada