»   » 'ಜೋಗಿ' ನಾಯಕಿ ಜೆನ್ನಿಫರ್ ಕೊತ್ವಾಲ್ ಎಲ್ಲಿ?

'ಜೋಗಿ' ನಾಯಕಿ ಜೆನ್ನಿಫರ್ ಕೊತ್ವಾಲ್ ಎಲ್ಲಿ?

Posted By: *ಜಯಂತಿ
Subscribe to Filmibeat Kannada

ಅಮೃತಕನ್ನಡದ ಸಾರ್ವಕಾಲಿಕ ಸೂಪರ್‌ಹಿಟ್ ಚಿತ್ರಗಳಲ್ಲಿ ಒಂದಾದ 'ಜೋಗಿ'ಯ ನಾಯಕಿ ಜೆನ್ನಿಫರ್ ಕೊತ್ವಾಲ್ ಎಲ್ಲಿ ಹೋದಳು? ಸಿನಿಮಾಗಳಲ್ಲಿ ಇರಲಿ, ಜೋಸ್ಕೋ ಆಭರಣ ಮಳಿಗೆ ಜಾಹಿರಾತುಗಳಿಂದಲೂ ಆಕೆ ನಾಪತ್ತೆಯಾಗಿದ್ದಾಳೆ. ಜೆನ್ನಿ ಕಾಲ ಮುಗಿಯಿತಾ? ಈ ಪ್ರಶ್ನೆಗೆ ಉತ್ತರವೆನ್ನುವಂತೆ ಜೆನ್ನಿ ಮರಳಿ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದಾಳೆ.

ಬಿಸಿಲೆ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತಿಗೆ ಸಿಕ್ಕ ಜೆನ್ನಿ- ಹೊರರಾಜ್ಯಗಳಲ್ಲಿ ತಾವು ಕನ್ನಡ ಚಿತ್ರರಂಗದ ಪ್ರತಿನಿಧಿ ಎಂದರು. ಇದೇನಿದು ತಮಾಷೆಯ ಮಾತು! ನಾನು ನಿಜವನ್ನೇ ಹೇಳುತ್ತಿದ್ದೇನೆ ಎನ್ನುವುದಕ್ಕೆ ಜೆನ್ನಿ ಹೇಳಿದ್ದು ಕೆಳಗಿನ ಕಥೆ: ಹೈದರಾಬಾದ್‌ನಲ್ಲೊಂದು ದಕ್ಷಿಣ ಭಾರತ ಚಿತ್ರರಂಗವನ್ನು ಪ್ರತಿನಿಧಿಸುವ ಸಿನಿಮಾ ಕಾರ್ಯಕ್ರಮ. ಸೌತ್ ಸ್ಕೋಪ್ ಎನ್ನುವ ಸಿನಿಪತ್ರಿಕೆ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ದಕ್ಷಿಣಭಾರತದ ಕಲಾವಿದರು ಭಾಗವಹಿಸಿದ್ದರಂತೆ. ಸಿನಿಮಾ ಪತ್ರಿಕೆ ಕಾರ್ಯಕ್ರಮ ಎಂದಮೇಲೆ ಹಾಡುಕುಣಿತ ಇಲ್ಲದಿದ್ದರೆ ಹೇಗೆ?

ಈ ಹಬ್ಬದಲ್ಲಿ, ಜೆನ್ನಿಫರ್ ಜೋಗಿ ಚಿತ್ರದ ಜೋಗಯ್ಯ ಹಾಡಿಗೆ ಕುಣಿದರಂತೆ. ಈ ಹಾಡಿನ ಮೂಲಕ ನಾನು ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಿದ್ದೆ ಎಂದರು ಜೆನ್ನಿ. ಹಾಗೆನ್ನುವಾಗ ಆಕೆಯ ಮೊಗದಲ್ಲಿ ಹೆಮ್ಮೆ ತುಳುಕುತ್ತಿತ್ತು.ನನಗೆ ಆರೋಗ್ಯ ಚೆನ್ನಾಗಿರಲಿಲ್ಲ. ವಿಪರೀತ ಬೆನ್ನುನೋವು ಕಾಡುತ್ತಿತ್ತು. ಆದರೂ ಜೋಗಿ ಚಿತ್ರದ ಹಾಡಿಗೆ ಹುಮ್ಮಸ್ಸಿನಿಂದ ನರ್ತಿಸಿದೆ. ಆ ಗೀತೆಯೇ ಹಾಗಿದೆಯಲ್ಲ? ನೋಡಿದವರೆಲ್ಲ ನನ್ನ ನೃತ್ಯ ಚೆನ್ನಾಗಿ ಬಂತು ಎಂದು ಹೊಗಳಿದರು. ಇದಿಷ್ಟು ಜೆನ್ನಿ ಹೇಳಿದ ಕಥೆ.

ಸದ್ಯ ಎರಡು ಕನ್ನಡ ಚಿತ್ರಗಳಲ್ಲಿ ಜೆನ್ನಿಫರ್ ನಟಿಸುತ್ತಿದ್ದಾರೆ. ಮೊದಲನೆಯದು ಬಿಸಿಲೆ. ಸಂದೀಪ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಕಾರ್ಪೊರೇಟ್ ರಂಗುಗಳಿವೆಯಂತೆ. ಒಂದಷ್ಟು ಸಾಫ್ಟ್‌ವೇರ್ ಗೆಳೆಯರು ಒಟ್ಟಾಗಿ ಈ ಚಿತ್ರ ನಿರ್ಮಿಸುತ್ತಿರುವುದೇ ಕಾರ್ಪೊರೇಟ್ ಬಣ್ಣಗಳಿಗೆ ಕಾರಣ. ಬಿಸಿಲೆ ಚೆನ್ನಾಗಿ ಮೂಡಿಬಂದಿದೆ ಎನ್ನುವುದು ಜೆನ್ನಿ ಅನಿಸಿಕೆ.

ಜೆನ್ನಫರ್ ಅಭಿನಯದ ಮತ್ತೊಂದು ಕನ್ನಡ ಚಿತ್ರ ಎರಡನೇ ಹೆಂಡತಿ. ದಿನೇಶ್‌ಬಾಬು ನಿರ್ದೇಶನದ ಈ ಚಿತ್ರದ ಬಗೆಗೂ ಜೆನ್ನಿಗೆ ನಿರೀಕ್ಷೆಗಳಿವೆ. ಅನಂತನಾಗ್ ಹಾಗೂ ಸುಹಾಸಿನಿ ಮುಖ್ಯಪಾತ್ರಗಳಲ್ಲಿದ್ದರೂ ಚಿತ್ರದಲ್ಲಿ ನನಗೂ ಸಾಕಷ್ಟು ಅವಕಾಶವಿದೆ ಎಂದರು ಜೆನ್ನಿ. ಇವೆರಡೂ ಸಿನಿಮಾ ತೆರೆಕಂಡರೆ ಕನ್ನಡದಲ್ಲಿ ಮತ್ತಷ್ಟು ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಆಕೆಯದ್ದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada