ಸುದೀಪ್, ರೆಬಲ್ ಸ್ಟಾರ್ ಚಿತ್ರ ಬಿಡುಗಡೆ ಮುಂದಕ್ಕೆ
ಸುದೀಪ್ ಮತ್ತು ರೆಬಲ್ ಸ್ಟಾರ್ ಅಂಬರೀಷ್ ಮುಖ್ಯಭೂಮಿಕೆಯುಳ್ಳ ಚಿತ್ರ 'ವೀರಪರಂಪರೆ' ಬಿಡುಗಡೆ ಮುಂದೂಡಲ್ಪಟ್ಟಿದೆ. ಚಿತ್ರವನ್ನು ಮುಂದೂಡುವಂತೆ ನಿರ್ಮಾಪಕರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ ಸಿಸಿ) ಒತ್ತಡ ಹೇರಿದ ಪರಿಣಾಮ ಚಿತ್ರದ ನಿರ್ದೇಶಕ ಎಸ್ ನಾರಾಯಣ್ ಚಿತ್ರವನ್ನು ಮುಂದೂಡಿದ್ದಾರೆ.
'ವೀರಪರಂಪರೆ' ಚಿತ್ರ ಅಕ್ಟೋಬರ್ 29ಕ್ಕೆ ರಾಜ್ಯದಾದ್ಯಂತ ತೆರೆಕಾಣಲಿದೆ. ಹೊರ ರಾಜ್ಯಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ನಾರಾಯಣ್ ಪ್ರಯತ್ನಿಸುತ್ತಿದ್ದಾರೆ. ಆದರೆ ಎಲ್ಲೆಲ್ಲಿ ಬಿಡುಗಡೆಯಾಗಲಿದೆ ಎಂಬ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಅಂದಹಾಗೆ ಈ ಚಿತ್ರದ ನಾಯಕಿ ಐಂದ್ರಿತಾ ರೇ.
ಕನ್ನಡ ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಕೆ ಸಿ ಎನ್ ಚಂದ್ರಶೇಖರ್ ಹಾಗೂ ಕೆಎಫ್ ಸಿಸಿ ಅಧ್ಯಕ್ಷ ಬಸಂತ್ ಕುಮಾರ್ ದೂರವಾಣಿ ಮೂಲಕ 'ವೀರಪರಂಪರೆ' ಚಿತ್ರವನ್ನು ಒಂದು ವಾರ ಮುಂದೂಡುವಂತೆ ತಿಳಿಸಿದ್ದರು. ಅಕ್ಟೋಬರ್ 22ರಂದು ಬಿಡುಗಡೆಯಾಗಬೇಕಿದ್ದ 'ವೀರಪರಂಪರೆ' ಅ.29ಕ್ಕೆ ಮುಂದೂಡಲ್ಪಟ್ಟಿದೆ.
ಒಂದು ವಾರದ ಹಿಂದಷ್ಟೆ ಬಿಡುಗಡೆಯಾಗಿರುವ ಸುದೀಪ್ ಅಭಿನಯದ 'ಕಿಚ್ಚಹುಚ್ಚ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈಗ ವೀರಪರಂಪರೆ ಬಿಡುಗಡೆ ಮಾಡಿದರೆ ನಮ್ಮ ಚಿತ್ರಕ್ಕೆ ಹೊಡೆತ ಬೀಳುತ್ತದೆ ಎಂದು ಕಿಚ್ಚ ಹುಚ್ಚ ನಿರ್ಮಾಪಕ ಕೆ ಮಂಜು ಕ್ಯಾತೆ ತೆಗೆದಿದ್ದರು. ಹಾಗಾಗಿ ವೀರಪರಂಪರೆ ಒಂದು ವಾರ ತಡವಾಗಿ ತೆರೆಗೆ ಅಪ್ಪಳಿಸುತ್ತಿದೆ.


Click it and Unblock the Notifications











