»   » ನಮಿತಾಗೆ ಸೀರೆ ಉಡೋದಂದ್ರೆ ಏನೋ ಒಂಥರಾ

ನಮಿತಾಗೆ ಸೀರೆ ಉಡೋದಂದ್ರೆ ಏನೋ ಒಂಥರಾ

Posted By: Super
Subscribe to Filmibeat Kannada

ಮೈತುಂಬ ಸೀರೆ, ಹಣೆಯಲಿ ನಗುವ ಕಾಸಿನಗಲದ ಕುಂಕುಮ, ಕೈತುಂಬ ಘಣಘಣಿಸುವ ಬಳೆ, ಕಾಲಲ್ಲಿ ಝಿಲ್ಲೆನ್ನತ ನಲ್ಲನ ಸೆಳೆಯುವ ಕಾಲ್ಗೆಜ್ಜೆ ತೊಟ್ಟ ಯಾವ ಹೆಣ್ಣು ತಾನೆ ಅಂದವಾಗಿ ಕಾಣುವುದಿಲ್ಲ? ಅಥವಾ ಕಾಣಬಯಸುವುದಿಲ್ಲ? ಚಿತ್ರನಟಿಯರು ಚಿತ್ರದಲ್ಲಿ ಮತ್ತಾವುದೇ ದಿರಿಸು ಧರಿಸಿ ಏನೇ ವೈಯಾರ, ಬಿನ್ನಾಣ ತೋರಲಿ ಸೀರೆ ಉಡಲು ಮಾತ್ರ ಬಿಂಕ ತೋರುವುದಿಲ್ಲ.

ಆದರೆ, ಈ ಹೂವಿನ ಹುಡುಗಿ, ಇಂದ್ರಾಣಿ, ನೀಲಕಂಠೆ ದಕ್ಷಿಣ ಭಾರತದ ಬಿಸಿ ಮತ್ತು ಬಿಜಿ ತಾರೆ ನಮಿತಾಳಿಗೆ ಸೀರೆ ಉಡಲು ಅದೇನೋ ಇರುಸುಮುರುಸಂತೆ. ಸೀರೆ ಉಟ್ಟರೆ ತಾನು ಚೆನ್ನಾಗಿ ಕಾಣುವುದಿಲ್ಲವೆಂದಲ್ಲ ಅಥವಾ ತನ್ನ ಇಮೇಜ್ ಹಾಳಾಗುವುದೆಂದಲ್ಲ, ಬದಲಿಗೆ ತಾನು ಸೀರೆ ಉಡುವುದರಿಂದ ಪ್ರೇಕ್ಷಕರ ಅಭಿರುಚಿಯೇ ಹಾಳಾಗುತ್ತಿದೆ ಎಂಬ ಸದಭಿರುಚಿಯ ಯೋಚನೆ ನಮಿತಾಳದು.

"ನಾನು ಸೀರೆಯನ್ನು ಉಡಲು ಇಚ್ಛೆಪಡುವುದಿಲ್ಲ. ನಾನು ಸೀರೆ ಉಟ್ಟರೆ, ನನ್ನ ಅದ್ಭುತ ಅಂಗಸೌಷ್ಟವದಿಂದ ಲಕ್ಷಾನುಲಕ್ಷ ಅಭಿಮಾನಿಗಳು ಹುಚ್ಚೇಳುವಂತಾಗುತ್ತಿದೆ. ಇದು ನನಗೆ ಬೇಕಿಲ್ಲ. ಆದ್ದರಿಂದಲೇ ಸೀರೆ ಉಡುತ್ತಿಲ್ಲ" ಎಂದು ಹೇಳಿಕೆ ನೀಡಿ ಸಾರ್ವಜನಿಕ ಸಮಾರಂಭಗಳಲ್ಲಿ ಸೀರೆ ಉಡದಿರುವ ಬಗ್ಗೆ ಸಮರ್ಥಿಸಿಕೊಂಡಿದ್ದಾಳೆ ಪ್ರಸಿದ್ಧಿ ಮತ್ತು ಅಂಗಸೌಷ್ಟವದಿಂದ ಅಡ್ಡಾದಿಡ್ಡಿ ಬೆಳೆದಿರುವ ನಮಿತಾ.


ತನ್ನ ಸೌಂದರ್ಯಕ್ಕಿಂತ ಆಕೆಯನ್ನು ಸೀರೆಯಲ್ಲಿ ನೋಡುತ್ತ ನೋಡುತ್ತ ಸೌಂದರ್ಯ ಸೂರೆ ಹೊಡೆಯುವ ಪ್ರೇಕ್ಷಕ ಹಾಳಾಗಬಾರದು ಎಂಬ ಆಕೆಯ ಜಿಜ್ಞಾಸೆಯನ್ನು ಮೆಚ್ಚತಕ್ಕದ್ದೆ. ಆದರೆ ಈ ಹೇಳಿಕೆ ನೀಡಿ, ಚಿತ್ರದಲ್ಲಿ ಮಾತ್ರವಲ್ಲ ನಮಿತಾಳನ್ನು ಸೀರೆಯಲ್ಲಿಯೇ ನೋಡಬಯಸುವ ಕೋಟ್ಯಂತರ ಅಭಿಮಾನಿಗಳಿಗೆ ನಮಿತಾ ಭಾರೀ ನಿರಾಸೆ ಮೂಡಿಸಿದ್ದಾಳೆ.

ಈಗ ತಾನೆ ಬಿಡುಗಡೆಯಾಗಿರುವ ಜಗನ್ಮೋಹಿನಿ ಚಿತ್ರ ಆಕೆಯ ಅಭಿಮಾನಿಗಳ ಮೇಲೆ ಸಮ್ಮೋಹನಾಸ್ತ್ರ ಬೀಸಿದೆ. ಜನ ಕೂಡ ಆಕೆಯನ್ನು ನೋಡಲು ಸುನಾಮಿಯಂತೆ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ಜೊತೆ ನೀಲಕಂಠ, ದರ್ಶನ್ ಜೊತೆ ಇಂದ್ರ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಬಿಪಿ ಏರಿಸಿರುವ ನಮಿತಾ ಸದ್ಯದಲ್ಲಿಯೇ ರಸಿಕ ರವಿಚಂದ್ರ ಜೊತೆಯಲ್ಲಿ ಹೂ ಚಿತ್ರದಲ್ಲಿ ನಟಿಸಲಿದ್ದಾರೆ. ಸೀರೆ ಉಟ್ಟ ನಾರಿಯನ್ನು ಅಂದ್ರೆ ನಟಿಮಣಿಯರನ್ನು ಅದ್ಭುತವಾಗಿ ತೋರಿಸುವುದರಲ್ಲಿ ರವಚಂದ್ರನ್ ಗೆ ರವಿಚಂದ್ರನ್ ರೇ ಸಾಟಿ. ಇನ್ನು ಸೀರೆ ಉಡಬಯಸದ ನಮಿತಾಳನ್ನು ರವಿ ಹೇಗೆ ತೋರುವರೋ ಕಾದು ನೋಡಬೇಕು.

English summary
South Indian Actress, who has acted in many Kannada movies too, does not like to wear saree at all.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada