twitter
    For Quick Alerts
    ALLOW NOTIFICATIONS  
    For Daily Alerts

    ಗುಂಡ್ಯಾ ನೀರುಕರೆಂಟು ಕುರಿತ ಸಿನಿಮಾ

    By Staff
    |

    Kesari Haravoo
    "ಸದಭಿರುಚಿಯ ಚಲನಚಿತ್ರಗಳನ್ನು ಮಾತ್ರ ಮಾಡುತ್ತೇನೆ. ಹಣಕ್ಕಿಂತ ನಮಗೆ ಗುಣಮಟ್ಟದ ಚಿತ್ರ ಮುಖ್ಯ. ಜನರಿಗೆ ಮನರಂಜನೆ ನೀಡಲು ಬೇಕಾದಷ್ಟು ಚಿತ್ರಗಳು ಬರುತ್ತವೆ. ಆದರೆ ದೈನಂದಿನ ಸಮಸ್ಯೆಗಳು, ಸುತ್ತಮುತ್ತಲಿನ ಪರಿಸರ, ಇಂದಿನ ಜೀವನ, ಮುಂದಿನ ಅನಾಹುತಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಸಣ್ಣ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ ಎಂದು ಎನಿಸಿದೆ". -ಕೇಸರಿ ಹರವೂ

    *ಮಹೇಶ್ ಮಲ್ನಾಡ್

    ಅದಕ್ಕಾಗಿ ಈ ರೀತಿ ಚಿತ್ರಗಳನ್ನು ಮಾಡಲು ಮುಂದಾಗಿದ್ದ್ದು, ಡಾಕ್ಯುಮೆಂಟರಿ ಸಿನಿಮಾ ಮಾಡ್ತಾ ಇದ್ದಾರೆ ಅಂದ್ರೆ ಹಣ ಸಿಗದಿದ್ದರೂ, ಸಬ್ಸಿಡಿ, ಅವಾರ್ಡ್ ಅಂತೂ ಗ್ಯಾರಂಟಿ ಬಿಡು ಅನ್ನೋ ಮಾತು ಇತ್ತೀಚೆಗೆ ಚಾಲ್ತಿಯಲ್ಲಿದೆ. ನಮಗೆ ನಾವು ಮಾಡುವ ಸಿನಿಮಾ ಬರೀ ಬುದ್ಧಿಜೀವಿಗಳು ಮಾತ್ರ ನೋಡಬೇಕು ಎಂಬ ಅಲಿಖಿತ ನಿಯಮ ಏನು ಹಾಕಿರೋಲ್ಲ. ಎಲ್ಲಾ ಜನರು ನೋಡ್ಭೇಕು, ಜ್ಞಾನವೃದ್ಧಿ ಆಗಲಿ, ಮನರಂಜನೆಗೆ ಮಾತ್ರ ಚಲನಚಿತ್ರ ಮೀಸಲಲ್ಲ ಅನ್ನೋದು ಎಲ್ಲರಿಗೂ ಅರ್ಥ ಆಗಲಿ ಅನ್ನೋದು ನಮ್ಮ ಉದ್ದೇಶ. ಬಹು ದಿನಗಳಿಂದ ಮಾತಿಗೆ ಸಿಗದ ಗೆಳೆಯ, ಅಕಸ್ಮಾತ್ ಕಣ್ಮುಂದೆ ಸಿಕ್ಕಾಗ ಎಲ್ಲವನ್ನು ಹೇಳಿಕೊಳ್ಳುವಂತೆ ಹೇಳಿಕೊಂಡರು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಮಂಡಳಿ ಅಧ್ಯಕ್ಷರಾಗಿದ್ದ ನಿರ್ದೇಶಕ, ನಿರ್ಮಾಪಕ ಕೇಸರಿ ಹರವೂ.

    ಭೂಮಿಗೀತ ಚಲನಚಿತ್ರ ನಿರ್ದೇಶಿಸಿ ವಿಮರ್ಶಕ ಮೆಚ್ಚುಗೆ, ಪ್ರಶಸ್ತಿ ಗಳಿಸಿದ ನಂತರ ಸರೋಜಿನಿ(ಧಾರಾವಾಹಿ), ಅಘನಾಶಿನಿ ಮುಂತಾದ ಸಾಮಾಜಿಕ ಕಳಕಳಿ ಕಿರು ಚಿತ್ರಗಳನ್ನು ನಿರ್ದೇಶಿಸಿದರು. ಕುವೆಂಪು ಅವರ ಶಿಷ್ಯ ಹಿರಿಯ ಸಾಹಿತಿ ದೇ ಜವರೇಗೌಡ ಅವರ ಬದುಕು ಬರಹ ಕುರಿತ ಕಿರು ಚಿತ್ರವನ್ನು ಮುಗಿಸಿದ ಬೆನ್ನಲ್ಲೇ ಮತ್ತೊಂದು ಮಹತ್ವದ ಹಾಗೂ ಪರಿಸರ ಕಾಳಜಿಯ ಕಿರು ಚಿತ್ರ ನಿರ್ಮಿಸಿ, ನಿರ್ದೇಶಿಸಲು ಹೊರಟಿದ್ದಾರೆ. ನೀವೇನಾದರೂ, ತೇಜಸ್ವಿಯ ಜುಗಾರಿ ಕ್ರಾಸ್, ಜೋಗಿಯ ಚಿಟ್ಟೆ ಹಾದಿ ಹಿಡಿದು ಕಾದಂಬರಿಗಳನ್ನು ಓದಿದ್ದರೆ ಅದರಲ್ಲಿ ಗುಂಡ್ಯ ಎಂಬ ಹೆಸರಿನ ಊರಿನ ಪ್ರಸ್ತಾಪವಾಗುತ್ತದೆ. ಅದರ ಜೊತೆಗೆ ಆ ಊರಿನ ಸುತ್ತಮುತ್ತಲಿನ ಅಗಾಧವಾದ ಕಾಡು, ಪ್ರಾಣಿ ಪಕ್ಷಿ, ಜಲರಾಶಿ ಹಾಗೂ ಅದನ್ನು ಕಬಳಿಸಲು ಯತ್ನಿಸುತ್ತಿರುವ ಮಾನವ ಮೃಗಗಳ ವಿಚಾರ ಬಂದು ಹೋಗಿರುತ್ತದೆ.

    ಕಾಡೇ ಅಂತಹದ್ದು, ಎಷ್ಟೋ ನಿಗೂಢವೋ ಅಷ್ಟೇ ಸರಳ. ಎಲ್ಲರ ಅಂಕೆಗೆ ಬೇಗನೆ ಸಿಕ್ಕಿ ಬೀಳುತ್ತದೆ. ಈಗ ಇದೇ ಗುಂಡ್ಯ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗೆ ಅಸ್ಥಿಭಾರ ಹಾಕಲಾಗಿದೆ. ಆದರೆ ಈ ಯೋಜನೆಯಿಂದ ಅಲ್ಲಿನ ಕಾಡುಮೃಗಗಳು, ಕ್ರಿಮಿ ಕೀಟಗಳು, ಅರಣ್ಯವಾಸಿಗಳು, ಸುತ್ತಮುತ್ತಲಿನ ಜನಜೀವನ ದೂರದ ರಾಜಧಾನಿಯಲ್ಲೋ ಪರದೇಶದಲ್ಲೋ ಕೂತು ಕಂಪ್ಯೂಟರ್ ನಲ್ಲಿ ಈ ಲೇಖನ ಓದುತ್ತಿರುವ ನೂರಾರು ಮಂದಿಗಳ ಮೇಲೆ ಈ ಯೋಜನೆ ಹೇಗೆ ಪರಿಣಾಮ ಬೀರುತ್ತದೆ. ಅಲ್ಲಿನ ಕಾಡನ್ನು ರಕ್ಷಿಸುವ ಸಲುವಾಗಿ ಸ್ವಯಂ ಪ್ರೇರಿತರಾಗಿ ಸಂಘರ್ಷಕ್ಕಿಳಿದಿರುವ ಮಲೆನಾಡು ಜನಪರ ಹೋರಾಟ ಸಮಿತಿಯ ಉದ್ದೇಶವೇನು, ಸರ್ಕಾರ ಈ ಯೋಜನೆಯ ಅಗತ್ಯತೆಯ ಬಗ್ಗೆ ಜನರಿಗೆ ತಿಳಿಸುವ ಅವಶ್ಯಕತೆ ಇದೆಯೇ?. ಯೋಜನೆ ಬೇಕೆ ಬೇಡವೇ ಎನ್ನುವುದಕ್ಕಿಂತ ಮಾಡಿದರೇ ಏನಾಗಬಹುದು ಎಂಬುದನ್ನು ಸ್ಪಷ್ಟವಾಗಿ ಜನರ ಮುಂದಿಡಲು ಮಲೆನಾಡು ಜನಪರ ಹೋರಾಟ ಸಮಿತಿ ಹಾಗೂ ಕೇಸರಿ ಹರವೂ ಅವರು ನಿರ್ಧರಿಸಿ, ಕಿರು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

    "ಇದು ಪಕ್ಕಾ ಲಾಭರಹಿತವಾದ ಯೋಜನೆ. ಗುಂಡ್ಯಾ ಜಲವಿದ್ಯುತ್ ಯೋಜನೆಯಿಂದ ಜನಜೀವನದ ಮೇಲಾಗುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ನೈತಿಕ ಪರಿಣಾಮ ಹಾಗೂ ತೊಂದರೆಗಳನ್ನು ಜನರಿಗೆ ತಿಳಿಸುವುದು ಈ ಚಿತ್ರದ ಉದ್ದೇಶ" ಎನ್ನುತ್ತಾರೆ ಕೇಸರಿ. ಸುಮಾರು 45 ರಿಂದ 50 ನಿಮಿಷದ ಚಿತ್ರವನ್ನು ಸಕಲೇಶಪುರ, ಶಿರಾಡಿ ಘಾಟ್, ಉದ್ದೇಶಿತ ಜಲವಿದ್ಯುತ್ ಯೋಜನಾ ಸ್ಥಳ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಎಲ್ಲ ಸರಿ ಹೋಗಿದ್ದಾರೆ ಈಗಾಗಲೇ ಚಿತ್ರದ ಮೊದಲ ಪ್ರತಿ ಸಿದ್ಧವಾಗಿ ತಿಂಗಳುಗಳೆ ಕಳೆದು ಹೋಗುತ್ತಿತ್ತು. ಆದರೆ, ಎಲ್ಲಾ ಒಳ್ಳೆ ಕೆಲಸಗಳಿಗೆ ಆರಂಭ ವಿಘ್ನ ಬರುವಂತೆ, ಆರ್ಥಿಕವಾಗಿ ಸ್ವಲ್ಪಮಟ್ಟಿನ ತೊಂದರೆಗೆ ಈ ಯೋಜನೆ ಸಿಕ್ಕು ಸ್ವಲ್ಪ ವಿಳಂಬವಾಗುತ್ತಿದೆ ಎಂದರು ನಿರ್ಮಾಪಕರೂ ಆದ ಕೇಸರಿ.

    ಈ ಚಿತ್ರದ ಯೋಜನಾ ವೆಚ್ಚ ಸುಮಾರು 2.9 ಲಕ್ಷ ರೂ. ಮಲೆನಾಡು ಜನಪರ ಹೋರಾಟ ಸಮಿತಿ ಹಾಗೂ ಕೆಲ ಆಸಕ್ತ ಸಹೃದಯ ಸಹಕಾರದಿಂದ ಯೋಜನೆ ಮತ್ತೆ ಕಾರ್ಯರೂಪ ಪಡೆಯುತ್ತಿದೆ. ಚಿತ್ರ ಪೂರ್ಣಗೊಂಡ ನಂತರ ಖಾಸಗಿಯಾಗಿ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸುವ ಉದ್ದೇಶವಿದೆ. ರಾಜ್ಯದಲ್ಲಿ 100 ಕ್ಕೂ ಹೆಚ್ಚು ಪ್ರದರ್ಶನವಲ್ಲದೆ, ಭಾರತದಾದ್ಯಂತ ಚಿತ್ರದ ಪ್ರದರ್ಶನ ಹಮ್ಮಿಕೊಳ್ಳಲಾಗುವುದು. ಪ್ರತಿ ಪ್ರದರ್ಶನಕ್ಕೆ ಸುಮಾರು 2 ಸಾವಿರದಷ್ಟು ಖರ್ಚು ಬೀಳಲಿದೆ. ಸದಭಿರುಚಿಯ ಚಲನಚಿತ್ರಗಳನ್ನು ಪೋಷಿಸಿ, ಬೆಳಸುವ ಹೊಸ ಪೀಳಿಗೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಅಂತಹ ಸಂಘಟನೆಗಳಿಂತ ಹೆಚ್ಚಿನ ಸಹಕಾರವನ್ನು ನಿರೀಕ್ಷಿಸಲಾಗಿದೆ. ಚಿತ್ರದ ಮೂಲ ಉದ್ದೇಶ ಜನರಿಗೆ ಮಾಹಿತಿ ಹಾಗೂ ಅರಿವು ಮೂಡಿಸುವುದು ಇದರಲ್ಲಿ ಯಾವುದೇ ಲಾಭ ಮಾಡುವ ಹುನ್ನಾರವಿಲ್ಲ ಎಂದು ನಿರ್ದೇಹಕ ಕೇಸರಿ ಸ್ಪಷ್ಟಪಡಿಸಿದರು.

    ಸೂಚನೆ: ಗುಂಡ್ಯಾಜಲವಿದ್ಯುತ್ ನ ಪರಿಣಾಮಗಳನ್ನು ತಿಳಿಸುವ ಸದಭಿರುಚಿಯ ಪರಿಸರ ಕಾಳಜಿಯ ಈ ಚಿತ್ರವನ್ನು ಆರಂಭಿಸಿ ಸುಮಾರು ಮೂರುವರ್ಷಗಳು ಕಳೆದಿವೆ. ಮಲೆನಾಡು ಹೋರಾಟ ಸಮಿತಿ ಅವರಲ್ಲದೆ, ಅನೇಕ ಸಹೃದಯ ಕಲಾಭಿಮಾನಿಗಳು ತಮ್ಮ ಕೈಲಾದ ಮಟ್ಟಿಗೆ ಹಣ ಸಹಾಯ ಮಾಡಿರುತ್ತಾರೆ. ಈವರೆಗೂ ಸುಮಾರು 85 ಸಾವಿರದಷ್ಟು ಹಣ ಸಂಗ್ರಹವಾಗಿದೆ ಎಂದು ಪೋಷಕರ ದೊಡ್ಡ ಪಟ್ಟಿಯನ್ನು ನೀಡಿದರು ನಿರ್ದೇಶಕರು. ಈ ಯೋಜನೆಗೆ ಒಟ್ಟು 2.95 ಲಕ್ಷ ವೆಚ್ಚವಾಗಲಿದ್ದು, ಆಸಕ್ತ ಕಲಾಭಿಮಾನಿಗಳು ನಿರ್ದೇಶಕರಿಗೆ [email protected] ಮೇಲ್ ಮಾಡಿ ಸಹಾಯ ಮಾಡಬಹುದಾದ ಬಗೆಯನ್ನು ಅರಿಯಬಹುದು. ಇದನ್ನು ಸಹಾಯ ಎಂದು ತಿಳಿದು ಮಾಡಬೇಕಿಲ್ಲ. ಸಮಾನ ಮನಸ್ಕರು ನಮ್ಮ ಯೋಜನೆಗೆ ಕೈಜೋಡಿಸಿದರೆ ಸಾಕು ಎಂದು ನನ್ನ ವಾಕ್ಯಕ್ಕೆ ತಿದ್ದುಪಡಿ ಮಾಡಿದರು ಕೇಸರಿ.

    Tuesday, July 21, 2009, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X