»   »  ನೆರೆ ಮರೆತು 'ಮನಸಾರೆ' ನೋಡಿದ ಶ್ರೀರಾಮುಲು

ನೆರೆ ಮರೆತು 'ಮನಸಾರೆ' ನೋಡಿದ ಶ್ರೀರಾಮುಲು

Subscribe to Filmibeat Kannada

ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಜನತೆ ತತ್ತರಿಸಿದ್ದಾರೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನ ದಿನ ದೂಡುವಂತಾಗಿದೆ. ಆದರೆ ಆರೋಗ್ಯ ಸಚಿವ ಶ್ರೀರಾಮು ಮಾತ್ರ ಈ ಎಲ್ಲಾ ಸಮಸ್ಯೆಗಳನ್ನು ಮೂರು ಗಂಟೆಗಳ ಕಾಲ ಮರೆತು 'ಮನಸಾರೆ' ಚಿತ್ರ ನೋಡಿ ಮನಸಾರೆ ಆನಂದಿಸಿದರು.

ಗದಗ ಜಿಲ್ಲೆಯ ಶ್ರೀಕೃಷ್ಣ ಚಿತ್ರಮಂದಿರಕ್ಕೆ ಆಗಮಿಸಿದ ಅವರು ನೆರೆ ಪೀಡಿತರ ಸಮಸ್ಯೆಗಳನ್ನು ಕ್ಷಣಕಾಲ ಮರೆತರು. ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಶ್ರೀರಾಮುಲು ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿದ್ದು ಪ್ರೇಕ್ಷಕರನ್ನು ಅಚ್ಚರಿಯಲ್ಲಿ ಮುಳುಗಿಸಿತು.

ಮೊನ್ನೆ ನೆರೆ ಪೀಡಿತ ಗ್ರಾಮಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿದಾಗ ಗೈರುಹಾಜರಾಗಿದ್ದ ಶ್ರೀರಾಮುಲು ಸೋಮವಾರ ಮಧ್ಯಾಹ್ನ ಹೆಲಿಕಾಫ್ಟರ್ ಹತ್ತಿ ಜಿಲ್ಲೆಗೆ ಆಗಮಿಸಿದರು. ಸಿಎಂ ಕೋಪಕ್ಕೆ ತುತ್ತಾಗಿ ಎತ್ತಂಗಡಿಯಾಗಿದ್ದ ಜಿಲ್ಲಾಧಿಕಾರಿ ಎನ್ ವಿ ಪ್ರಸಾದ್ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ಮಾತನಾಡಿದರು.

ನಂತರ ಇಲ್ಲಿ ನಿರ್ಮಿಸುತ್ತಿರುವ ಸ್ವಂತ ಮನೆಯ ಕಾಮಗಾರಿಯನ್ನು ಖುದ್ದು ವೀಕ್ಷಿಸಿದರು. ಬಳಿಕ ಬಾಡಿಗೆ ಮನೆಯಲ್ಲಿ ಅನುಯಾಯಿಗಳೊಂದಿಗೆ ಕೆಲ ಸಮಯ ಕಳೆದರು. ಸಂಜೆ 6 ಗಂಟೆಯಾಗುತ್ತಿದ್ದಂತೆ ಶ್ರೀಕೃಷ್ಣ ಚಿತ್ರಮಂದಿರಕ್ಕೆ ಬಂದು 'ಮನಸಾರೆ' ಚಿತ್ರವನ್ನು ರಾತ್ರಿ 9ರ ತನಕ ನೋಡಿ ಆನಂದಿಸಿದರು.

ಮಂಗಳವಾರ(ಅ.20) ಕೆಲ ಸಭೆಗಳಲ್ಲಿ ಭಾಗವಹಿಸಬೇಕಾಗಿದ್ದ ಅವರು ನಸುಕಿನ ಜಾವ ನಾಲ್ಕು ಗಂಟೆಗೇ ಹೆಲಿಕಾಫ್ಟರ್ ಹತ್ತಿ ಬಳ್ಳಾರಿಗೆ ಹೊರಟು ಹೋದರು. ಒಟ್ಟಿನಲ್ಲಿ ಆರೋಗ್ಯ ಸಚಿವರು ಚಿತ್ರಮಂದಿರದಲ್ಲಿ ಮನಸಾರೆ ನೋಡಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada