»   » ಕನ್ನಡಕಣ್ಣಿಗೆ ಇನ್ನೊಂದು ಕನ್ನಡ ಟಿವಿ?

ಕನ್ನಡಕಣ್ಣಿಗೆ ಇನ್ನೊಂದು ಕನ್ನಡ ಟಿವಿ?

Subscribe to Filmibeat Kannada
ಸತೀಶ್ ಜಾರಕಿಹೊಳಿ

ಕನ್ನಡ ಟಿವಿ ಮಾರುಕಟ್ಟೆಗೆ ಹೊಸ ಹೊಸ ಚಾನಲ್ಲುಗಳು ಸೇರ್ಪಡೆಯಾಗುವುದೆಂಬ ಸುದ್ದಿಗಳು ಆಗಾಗ ಕನ್ನಡನಾಡಿನಲ್ಲಿ ಹರಡುವುದುಂಟು. ಅನೇಕ ಬಾರಿ ಅಂಥ ಸುದ್ದಿಗಳು ಗಾಳಿ ಸುದ್ದಿಗಳಾಗಿ ಸ್ಯಾಟಲೈಟ್ ನೆರವಿಲ್ಲದೆ ಆವಿಯಾಗಿ ಹೋಗುವುದೂ ಉಂಟು. ನಾಲಕ್ಕು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಗಳ ಮನ್ನಾ ದಿನಗಳಲ್ಲಿ ಇಂಥದೊಂದು ಸುದ್ದಿ ದಟ್ಟವಾಗಿತ್ತು. ಕಡೆಯಪಕ್ಷ 12 ನೂತನ ಟಿವಿ ವಾಹಿನಿಗಳು ಕರ್ನಾಟಕಕ್ಕೆ ಲಗ್ಗೆ ಹಾಕುವ ಚಾನ್ಸ್ ಇದೆ ಎಂಬ ಸುದ್ದಿ ಪಸರಿಸಿಕೊಂಡಿತ್ತು. ಆಮೇಲೆ ಏನಾಯಿತು ಎನ್ನುವುದು ನಿಮಗೆಲ್ಲಾ ಗೊತ್ತು.

ಮತ್ತೆ ಈಗ ಅಂಥ ಇನ್ನೊಂದು ಸುದ್ದಿ ಕಳೆದ ಎರಡು ತಿಂಗಳಿನಿಂದ ವಾಹಿನಿ ಮತ್ತು ದೃಶ್ಯ ಮಾಧ್ಯಮ ಕಚೇರಿಗಳ ಮೊಗಸಾಲೆಗಳಿಂದ ಕೇಳಿ ಬರುತ್ತಿದೆ. ಯಾವ ಟಿವಿ ಕಂಪನಿಯೂ ಯಾವುದೇ ಬಗೆಯ ಜಾಹಿರಾತುಗಳನ್ನು ಪ್ರಕಟಿಸದಿದ್ದರೂ ಸಹ ಬಾಯಿಂದ ಬಾಯಿಗೆ ಹೊಸ ಚಾನಲ್ ಸುದ್ದಿ ಹರಡಿ ದಕ್ಷಿಣ ಭಾರತದಲ್ಲೆಲ್ಲ ಗುಲ್ಲಾಗಿದೆ.

ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅಚ್ಚ ಕನ್ನಡದ ಇನ್ನೊಂದು ಟಿವಿ ಚಾನಲ್ ತೆರೆಯಲಿದ್ದಾರೆಂದೂ ಅದಕ್ಕಾಗಿ ಟಿವಿ ತಂಡದ ನೇಮಕಾತಿ ಭರದಿಂದ ಸಾಗಿದೆ ಎಂಬ ಸುದ್ದಿ ಈಗ ಜೋರಾಗಿ ಕೇಳಿ ಬರುತ್ತಿದೆ. ಜೆಡಿಎಸ್ ನಾಯಕರ ಪತ್ನಿ ನಡೆಸುತ್ತಿರುವ ಕಸ್ತೂರಿ ಚಾನಲ್ ಗಿಂತ ಮುಂಚಿತವಾಗಿಯೇ ಜಾರಕಿಹೊಳಿಗೆ ಲೈಸನ್ಸ್ ಸಿಕ್ಕಿತ್ತು. ಕನ್ನಡ ಟಿವಿ ಚಾನಲ್ಲುಗಳಲ್ಲಿ ಪಳಗಿದ ಪತ್ರಕರ್ತ ಹಾಗೂ ತಂತ್ರಜ್ಞರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳುವ ಇರಾದೆಯನ್ನು ಸಮಯ ಟಿವಿ ಆಡಳಿತ ಮಂಡಳಿ ಹೊಂದಿರುವುದರಿಂದ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಟಿವಿ ಸಿಬ್ಬಂದಿ ವರ್ಗದಲ್ಲಿ ಅನೇಕ ಮಂದಿ ಸಮಯ ಸಂಪಾದಕರಿಗೆ ಅರ್ಜಿಗಳನ್ನು ಇ-ಮೇಲ್ hr@samayatv.com ಮೂಲಕ ಗುಜರಾಯಿಸಿರುವುದು ದಟ್ಸ್ ಕನ್ನಡ ವಾಹಿನಿಯ ವರದಿಗಾರನ ಗಮನಕ್ಕೆ ಬಂದಿದೆ.

ಹೊಸತನಕ್ಕೆ ತುಡಿಯುವ ಮತ್ತು ಹಾಲಿ ಕೆಲಸದಿಂದ ಬೇಸತ್ತಿರುವ ಕನ್ನಡ ಟಿವಿ ಪತ್ರಕರ್ತರು ಸಮಯ ಟಿವಿಗೆ ಧಾವಿಸಲು ತುದಿಗಾಲಲ್ಲಿ ನಿಂತಿರುವುದಂತೂ ನಿಜ. ಕೆಲವಾರು ಕನ್ನಡ ಟಿವಿಗಳಲ್ಲಿ ಕೊಳೆಯುತ್ತಿರುವ ಬುದ್ದಿವಂತ ಕೆಲಸಗಾರರಿಗೆ ಎರಡು ಮೂರು ವರ್ಷಗಳಾದರೂ ಸಂಬಳ ಸಾರಿಗೆ ಪುನರ್ ವಿಮರ್ಶೆ ಆಗದಿರುವುದು ಬೇರೆ ಟಿವಿಗೆ ಜಂಪ್ ಆಗುವುದಕ್ಕೆ ಕಂಡುಬರುವ ಪ್ರಬಲ ಕಾರಣ. ಜತೆಗೆ ಕೆಲವು ಕನ್ನಡ ಟಿವಿ ಸುದ್ದಿ ಕೋಣೆಗಳಲ್ಲಿ ದುಡಿಯುವ ಪತ್ರಕರ್ತರಿಗೆ ಫ್ರೀಡಂ ಕಡಿಮೆ ಇರುವುದು ಅಷ್ಟೇ ನಿಜ. ಸ್ಥಿತಿ ಹೀಗಿರುವಾಗ ಪಕ್ಕದ ಚಾನಲ್ಲಿಗೆ ಪೈಪೋಟಿ ಕೊಡುವ ಕೆಲಸ ಮಾಡಿ ತೋರಿಸಿ ಸೈ ಎನ್ನಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಟಿವಿ ಚಾನಲ್ಲಿನ ನುರಿತ ಒಬ್ಬ ಉದ್ಯೋಗಿ ದಟ್ಸ್ ಕನ್ನಡಕ್ಕೆ ಮರುಪ್ರಶ್ನೆ ಹಾಕುತ್ತಾರೆ. ಟಿಆರ್ಪಿ ಮನೆ ಹಾಳಾಗಲಿ, ತಮ್ಮ ವೃತ್ತಿ ಜೀವನದ ಟಿಆರ್ ಪಿ ಮೇಲೇಳುವುದು ಯಾವಾಗ ಎನ್ನುವುದೇ ಅವರ ಚಿಂತೆ.

ಸಮಯ ಟಿವಿ ಅಲ್ಲದೆ ರಾಜ್ ಟಿವಿ ಮತ್ತು ಇನ್ನಾವುದೋ ಕಾಮಧೇನು ಎಂಬ ಚಾನಲ್ಲು ಕನ್ನಡದಲ್ಲಿ ಕಣ್ತೆರೆಯುವ ಸುದ್ದಿಯೂ ಗಿರಕಿ ಹೊಡೆಯುತ್ತಿದೆ. ಹೀಗಾಗಿ ಹೊಸ ಚಾನಲ್ಲಿಗೆ ವಲಸೆ ಹೋಗಲು ಪತ್ರಕರ್ತರ ಒಂದು ದೊಡ್ಡ ಪಡೆ ಸಿದ್ಧವಾಗಿ ಕುಳಿತಿದೆ. ಕೇವಲ ಟಿವಿ ಪತ್ರಕರ್ತರಲ್ಲದೆ ಮುದ್ರಣ ಮಾಧ್ಯಮ ಮತ್ತು ಅಂತರ್ ಜಾಲದಲ್ಲಿ ನೌಕರಿ ಮಾಡುತ್ತಿರುವ ಉದ್ಯೋಗಿಗಳೂ ಹೊಸ ಚಾನಲ್ಲು ಹಾಸುವ ಚಾಪೆಗಾಗಿ ಕಾದು ಕುಳಿತಿದ್ದಾರೆ.

ನೌಕರಿ ಬದಲಾಯಿಸುವ ತವಕದಲ್ಲಿರುವವರಲ್ಲಿ ಕನ್ನಡ ನಾಡಿನಿಂದ ಹೊರಗೆ ಉದ್ಯೋಗ ಮಾಡುತ್ತಿರುವ ಕನ್ನಡ ಪತ್ರಕರ್ತರ ಸಂಖ್ಯೆ ಗಣನೀಯವಾಗಿದೆ. ಸಂಬಳ ಸಾರಿಗೆ ಚೆನ್ನಾಗಿದ್ದರೂ ಚೆನ್ನೈ ನಲ್ಲಿ ಬದುಕು ದೂಡುವುದು ಕಷ್ಟ ಎನ್ನುತ್ತಾರೆ ಒಬ್ಬ ಹಿರಿಯ ಪತ್ರಕರ್ತೆ. ಚೆನ್ನೈನ ತಮಿಳು ಬಾಯಿಗಳ ನಡುವೆ ಬದುಕುವುದಕ್ಕಿಂತ 5 ಸಾವಿರ ಸಂಬಳ ಕಡಿಮೆ ಆದರೂ ಬೆಂಗಳೂರಿಗೆ ಹಾರಬೇಕು ಎಂಬ ತವರಿನ ಹಂಬಲ ಅವರದ್ದು. ಇನ್ನು ಆಂಧ್ರಪ್ರದೇಶದಲ್ಲಿ ನೌಕರಿ ಮಾಡುತ್ತಿರುವ ಕೆಂಪು ಮೂತಿಯ ಉದಯೋನ್ಮುಖ ಪತ್ರಕರ್ತರಂತೂ ಕಿಸೆಯಲ್ಲಿ ಬೆಂಗಳೂರಿನ ರೈಲು ಟಿಕೆಟ್ ಇಟ್ಟುಕೊಂಡೇ ತಮ್ಮತಮ್ಮ ಹವಾನಿಯಂತ್ರಿತ ಕಚೇರಿಗಳಿಗೆ ಬಿಸಿಲಲ್ಲೇ ನಿತ್ಯ ನಡೆದು ಹೋಗುತ್ತಿದ್ದಾರೆ.

ಟಿವಿ 9 ಕೂಡ ಹೊಸ ಚಾನಲ್ಲು ತೆರೆಯುತ್ತಿರುವುದು ಬಹುತೇಕ ನಿಶ್ಚಿತ. ಈ ವರ್ಷಾಂತ್ಯದೊಳಗೆ ಆರಂಭಿಸಲಿರುವ ಅದರ ಇಂಗ್ಲಿಷ್ ಚಾನಲ್ಲಿಗೆ ನೇಮಕಾತಿಗಳು ಭರದಿಂದ ಸಾಗಿದೆ. ಇಂಗ್ಲಿಷ್ ಮಾತಾಡಬಲ್ಲ ಎಳೆಯ ತರುಣ ತರುಣಿಯರಿಂದ ತುಂಬಿ ತುಳುಕುತ್ತಿರುವ ಟಿವಿ9 ಬೆಂಗಳೂರು ಕಚೇರಿ ಒಮ್ಮೊಮ್ಮೆ ಕೆಫೆ ಕಾಫಿ ಡೇ ಶಾಪಿನಂತೆ ಕಾಣುತ್ತದೆ. ಇಷ್ಟೆಲ್ಲ ಊಹಾಪೋಹಗಳ ನಡುವೆ ಸಮಯ ಟಿವಿ ಕನ್ನಡ ಅವತರಣಿಕೆ ಆರಂಭವಾಗುತ್ತದೋ ಅಥವಾ ಗಣೇಶ ಹಾಲು ಕುಡಿದ ಸುದ್ದಿಯಂತಾಗುವುದೋ ಎನ್ನುವುದನ್ನು ಅರಿಯಲು ಬ್ರೇಕಿಂಗ್ ನ್ಯೂಸ್ ಅಪ್ ಡೇಟುಗಳಿಗಾಗಿ ಕಾಯಿರಿ ಎಂದು ದಟ್ಸ್ ಕನ್ನಡ ಅಪ್ಪಣೆ ಕೊಡಿಸುತ್ತದೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada