»   » ಆಪ್ತರಕ್ಷಕ ನೋಡಲು ಮುಂದಾದ ಮುಖ್ಯಮಂತ್ರಿ

ಆಪ್ತರಕ್ಷಕ ನೋಡಲು ಮುಂದಾದ ಮುಖ್ಯಮಂತ್ರಿ

Posted By:
Subscribe to Filmibeat Kannada

'ಆಪ್ತರಕ್ಷಕ' ಚಿತ್ರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಗಮನಸೆಳೆದಿದ್ದು ಅವರು ಚಿತ್ರವನ್ನು ವೀಕ್ಷಿಸಲು ಮುಂದಾಗಿದ್ದಾರೆ. ಆಪ್ತರಕ್ಷಕ ಚಿತ್ರವನ್ನು ನೋಡಲು ಹಾತೊರೆಯುತ್ತಿರುವ ಅವರು ಎರಡುವರೆ ಗಂಟೆಗಳ ಕಾಲ ಚಿತ್ರವನ್ನು ನೋಡಿ ರಿಲ್ಯಾಕ್ಸ್ ಆಗಲು ಬಯಸಿದ್ದಾರೆ.

ಈ ವಿಷಯವನ್ನು ಚಿತ್ರದ ನಿರ್ಮಾಪಕ ಕೃಷ್ಣಪ್ರಜ್ವಲ್ ಬುಧವಾರ(ಏ.21) ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆಪ್ತರಕ್ಷಕ ಚಿತ್ರ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿದ ಪ್ರಯುಕ್ತ ಅವರು ಔತಣಕೂಟವನ್ನು ಬೆಂಗಳೂರು ಸಿಟಿ ಇನಿಸ್ಟಿಟ್ಯೂಟ್ ನಲ್ಲಿ ಏರ್ಪಡಿಸಿದ್ದರು. ಸಂಜೆ ಇದ್ದಕ್ಕಿದ್ದಂತೆ ಬಿದ್ದ ಅಕಾಲ ಮಳೆಯ ಕಾರಣ 'ಆಪ್ತರಕ್ಷಕ' ಚಿತ್ರದ ಬಹುತೇಕ ಕಲಾವಿದರ ಗೈರುಹಾಜರಿಯಲ್ಲಿ ಕಾರ್ಯಕ್ರಮ ರಂಗೇರಿತು.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇತ್ತೀಚೆಗೆ ಭೇಟಿ ಮಾಡಲು ಹೋಗಿದ್ದೆ. ಆದಷ್ಟು ಬೇಗ ನಮಗೂ ಚಿತ್ರವನ್ನು ತೋರಿಸಿ ಎಂದು ಮುಖ್ಯಮಂತ್ರಿಗಳು ಆಸಕ್ತಿ ವ್ಯಕ್ತಪಡಿಸಿದ್ದಾಗಿ ಕೃಷ್ಣಪ್ರಜ್ವಲ್ ತಿಳಿಸಿದರು. ಬಹುಶಃ ಮುಖ್ಯಮಂತ್ರಿಗಳು ಏಪ್ರಿಲ್ 23 ಅಥವಾ 24ರಂದು 'ಆಪ್ತರಕ್ಷಕ' ಚಿತ್ರವನ್ನು ವೀಕ್ಷಿಸಬಹುದು ಎಂದು ವಿವರ ನೀಡಿದರು.

ಯಡಿಯೂರಪ್ಪನವರು ಈಗಾಗಲೆ ಬಿಗ್ ಬಿ ಅಮಿತಾಬ್ ಅಭಿನಯದ ವಿಭಿನ್ನ ಚಿತ್ರ 'ಪಾ'ವನ್ನು ತಮ್ಮ ಸಚಿವ ಸಂಪುಟದೊಂದಿಗೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಚಿತ್ರಕ್ಕೆ ರಾಜ್ಯ ಸರಕಾರ ಮನರಂಜನಾ ತೆರಿಗೆಯಲ್ಲಿ ಶೇ.50ರಷ್ಟು ರಿಯಾಯಿತಿ ಪ್ರಕಟಿಸಿದ್ದು ನೆನಪಿರಬಹುದು. ಈಗ 'ಆಪ್ತರಕ್ಷಕ' ಚಿತ್ರವನ್ನು ನೋಡಲು ಮುಖ್ಯಮಂತ್ರಿಗಳು ಉತ್ಸುಕರಾಗಿದ್ದಾರೆ.

ಒಟ್ಟಿನಲ್ಲಿ ಯಡಿಯೂರಪ್ಪ ಅವರು ತಮ್ಮ ಕುಟುಂಬದರೊಂದಿಗೆ ಆಪ್ತರಕ್ಷಕ ಚಿತ್ರವನ್ನು ವೀಕ್ಷಿಸುತ್ತಾರೋ? ಅಥವಾ ಸಚಿವ ಸಂಪುಟದೊಂದಿಗೆ ನೋಡುತ್ತಾರೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಒಂದು ಚಿತ್ರ ಯಶಸ್ವಿ ಐವತ್ತು ದಿನ ಪೂರೈಸಿದ ಬಳಿಕವಾದರೂ ಯಡಿಯೂರಪ್ಪ ರಾಜಕೀಯ ಬಿಟ್ಟು ಮನರಂಜನೆ ಕಡೆಗೆ ಗಮನಹರಿಸಿದ್ದು ಮೆಚ್ಚತಕ್ಕ ವಿಚಾರ ಅಲ್ಲವೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada