twitter
    For Quick Alerts
    ALLOW NOTIFICATIONS  
    For Daily Alerts

    ಅಂತರ್ ಜಾಲ ಪತ್ರಿಕೋದ್ಯಮಕ್ಕೆ ಕೆಎನ್ ಎನ್

    By *ಶಾಮಿ
    |

    ಕನ್ನಡ ಚಿತ್ರರಂಗದ ಸುದ್ದಿ ವಿದ್ಯಮಾನ ಮತ್ತು ಚಿತ್ರ ವಿಮರ್ಶೆಗಳಿಗೆ ನೂರಕ್ಕೆ ನೂರು ಮೀಸಲಾದ ಅಂತರ್ ಜಾಲ ತಾಣಗಳು ಕಡಿಮೆ. ಉದ್ಯಮ ಮತ್ತು ಅದರ ಮಾರುಕಟ್ಟೆಯೇ ಚಿಕ್ಕದಾಗಿರುವಾಗ ಹೆಚ್ಚು ಸಂಖ್ಯೆಯಲ್ಲಿ ಚಿತ್ರತಾಣಗಳನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಸಿನಿಮಾ ವ್ಯಾಕರಣ, ಕನ್ನಡ ಸಿನಿಮಾ ರಂಜನೆ ಮತ್ತು ಕನ್ನಡ ಚಿತ್ರಜಗತ್ತಿನ ವ್ಯಾಪಾರಿ ಸಾಧ್ಯತೆಗಳ ಒಳನೋಟ ಮತ್ತು ಹೊರನೋಟಗಳನ್ನು ಬಿಂಬಿಸುವ ಸೈಟುಗಳು ಲಭ್ಯವಾಗುವುದಾದರೆ ಪ್ರತಿದಿನ ನೋಡಬಹುದೋ ಏನೋ.

    ಕಳಪೆ ಚಿತ್ರಗಳನ್ನು ತೆಗೆಯುವ ಉಮೇದು ಹಾಗೂ ಸೀಮಿತ ಮಾರುಕಟ್ಟೆಯ ದೌರ್ಬಲ್ಯಗಳ ಜತೆಗೆ ಆಧುನಿಕ ಮಾಧ್ಯಮದ ಸಾಧ್ಯತೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳಲು ಒಲ್ಲದ ಕನ್ನಡ ಚಿತ್ರಕರ್ಮಿಗಳ ದಂಡು ಇರುವತನಕ ಇಂಟರ್ ನೆಟ್ಟಿನಲ್ಲಿ ಕನ್ನಡ ಚಿತ್ರಗಳ ಹಬ್ಬ ಆಗುವುದಿಲ್ಲ. ಕೋಟಿಗಟ್ಟಳೆ ಹಣವನ್ನು ಹಿಂದೆ ಮುಂದೆ ನೋಡದೆ ಸಿನಿಮಾದಲ್ಲಿ ಸುರಿಯುವ ಧನವಂತರೇನಕರು ಕೂಡ ಬಿಬಿಎಂಪಿ ಕಾನೂನು ಮೀರಿ ಕಾಂಪೌಂಡ್ ಮೇಲೆ ಅಂಟಿಸಲಾಗುವ ಭಿತ್ತಿಚಿತ್ರಗಳಿಂದಾಚೆಗೆ ಕನ್ನಡ ಚಿತ್ರದ ಪ್ರಚಾರ ಮಾಡುವ ಇಂಟರ್ ನೆಟ್ ಬಾಗಿಲುಗಳನ್ನು ತಟ್ಟುವುದಿಲ್ಲ.

    ಕನ್ನಡ ಚಿತ್ರರಂಗದ ವರ್ತಮಾನಗಳನ್ನು ವೆಬ್ ಸೈಟಿನಲ್ಲಿ ಬಿಂಬಿಸಲು ಮೊದಲು ಆರಂಭಿಸಿದವರು ಕೆ ಎಂ ವೀರೇಶ್. ಸ್ಥಿರ ಚಿತ್ರ ಛಾಯಾಗ್ರಾಹಕರಾಗಿ ಆನಂತರ ಕೆಲವು ಕಾಲ ಸುದ್ದಿ ಚಿತ್ರ ಛಾಯಾಚಿತ್ರಗ್ರಾಹಕರಾಗಿ ವೃತ್ತಿಪರರಾಗಿದ್ದ ವೀರೇಶ್ ಹತ್ತು ಕಳೆದ ವರ್ಷಗಳಿಂದ ಚಿತ್ರಲೋಕ ಡಾಟ್ ಕಾಂ ನಡೆಸಿಕೊಂಡು ಬರುತ್ತಿದ್ದಾರೆ. ಇದು ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ಸೋಜಿಗಗಳಲ್ಲಿ ಒಂದು. ನೀವು ನೋಡಿಲ್ಲದಿದ್ದರೆ ಆ ವೆಬ್ ತಾಣವನ್ನು ಈಗ ನೋಡಿ. ನಿರ್ಮಾಪಕ, ನಿರ್ದೇಶಕ, ಕಲಾವಿದರಲ್ಲದೆ ವಾಣಿಜ್ಯ ಮಂಡಳಿಯ ಸದಸ್ಯರ ಮನೆಮನೆಗೆ ತೆರಳಿ ಅಂತರ್ ಜಾಲದಲ್ಲಿ ಕನ್ನಡ ಚಿತ್ರಗಳ ಹರಿವನ್ನು ಲ್ಯಾಪ್ ಟಾಪ್ ನಲ್ಲಿ ತೋರಿಸಿ ಪರಿಚಯಿಸಿದ ಆಸಾಮಿ ವೀರೇಶ್.

    ಎರಡು ದಶಕಗಳಿಗೂ ಮೀರಿ ಕನ್ನಡ ಚಲನಚಿತ್ರ ಛಾಯಾಚಿತ್ರಕಾರರಾಗಿ ಕೆಲಸ ಮಾಡುತ್ತಿರುವ ಇನ್ನೊಬ್ಬ ಉತ್ಸಾಹಿ ಕೆ ಎನ್ ನಾಗೇಶ್ ಕುಮಾರ್. ಅವರೂ ಇದೀಗ ಕನ್ನಡ ಚಲನಚಿತ್ರ ಸುದ್ದಿ ಸರೋವರಕ್ಕೆ ಧುಮುಕಿದ್ದಾರೆ. ಚಿತ್ರರಂಗದ ವಾರ್ತೆಗಳು, ನಟ ನಟಿಯರ ತಾಜಾ ಚಿತ್ರಗಳ ಸಮೇತ ಅವರು ಹೊರಡಿಸಿರುವ ಅಂತರ್ ಜಾಲ ತಾಣವನ್ನು ( www.cinecircle.in) ನೀವು ಗಮನಿಸಬೇಕು. ಪತ್ರಿಕೆಗಳು ಸಮಾಜದ ಕನ್ನಡಿ ಎಂದು ಕರೆಯುತ್ತಾರೆ. ಈ ಕನ್ನಡಿಗಳಲ್ಲಿ ನಿಮಗೆ ಕನ್ನಡ ಚಿತ್ರರಂಗದ ದರ್ಶನವಾಗಲಿ.

    Thursday, April 22, 2010, 16:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X