»   »  ನವ್ಯಾ, ರೇಖಾರಿಗೆ ಬಾಸ್ ಆದ ದರ್ಶನ್

ನವ್ಯಾ, ರೇಖಾರಿಗೆ ಬಾಸ್ ಆದ ದರ್ಶನ್

Subscribe to Filmibeat Kannada

ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಲೆಯಾಳಿ ಚೆಲುವೆ ನವ್ಯಾ ನಾಯರ್ ಅವರ ಯಶಸ್ವಿ ಜೋಡಿಯ ಮತ್ತೊಂದು ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸುವ ಹಂತಕ್ಕೆ ಬಂದಿದೆ. ದರ್ಶನ್ ದ್ವಿಪಾತ್ರದಲ್ಲಿ ಕಾಣಿಸುತ್ತಿರುವುದು ಈ ಚಿತ್ರದ ವಿಶೇಷ. ಕನ್ನಡ ಚಿತ್ರರಂಗದ ಭರವಸೆಯ ನಿರ್ಮಾಪಕ ರಮೇಶ್ ಯಾದವ್ ಅವರು ಈ ಚಿತ್ರವನ್ನು ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಗೆ ತರಲು ಶತ ಪ್ರಯತ್ನ ಮಾಡುತ್ತಿದ್ದಾರೆ.

ಕನ್ನಡ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ರಮೇಶ್‌ಯಾದವ್ ಮೂವೀಸ್ ಕೂಡ ಒಂದು. ಪ್ರಸ್ತುತ ಆ ಸಂಸ್ಥೆಯ 17ನೇ ಕಾಣಿಕೆಯಾಗಿ ಹೊರಹೊಮ್ಮುತ್ತಿರುವ ಚಿತ್ರ 'ಬಾಸ್'. ಬೆಂಗಳೂರು, ಮೈಸೂರು, ಆಸ್ಟ್ರೀಯಾ, ಹಾಗೂ ಜರ್ಮನ್‌ಗಳಲ್ಲಿ ಚಿತ್ರಕ್ಕೆ ಮುಕ್ಕಾಲು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿಯಿರುವ 'ಬಾಸ್'ಗೆ ನಗರದ ಪ್ರತಿಷ್ಠಿತ ಸ್ಟುಡಿಯೋವೊಂದರಲ್ಲಿ ಗ್ರಾಫಿಕ್ಸ್ ಅಳವಡಿಸಲಾಗುತ್ತಿದೆ.

ಕರ್ನಾಟಕದ ನೂರು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆಗೊಳಿಸುವ ಇರಾದೆ ನಿರ್ಮಾಪಕರಿಗಿದೆ. ಸದ್ಯ ಅವರು ಚಿತ್ರಮಂದಿರಗಳ ಅನ್ವೇಷಣಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ ಸಕಾಲಕ್ಕೆ ಚಿತ್ರಮಂದಿರಗಳು ಖಾಲಿ ಇರಬೇಕಷ್ಟೇ. ಸ್ವತಂತ್ರ ದಿನಾಚರಣೆಯ ಆಸುಪಾಸಿನ ಸಮಯದಲ್ಲಿ 'ಬಾಸ್' ಶತ ಚಿತ್ರಮಂದಿಗಳಲ್ಲಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

ಸದ್ಯದಲ್ಲೇ ನಿರ್ಮಾಪಕರು ತಮ್ಮದೇ ಧ್ವನಿಸುರುಳಿ ಸಂಸ್ಥೆ ಮೂಲಕ ಚಿತ್ರದ ಹಾಡುಗಳನ್ನು ಕೇಳುಗರಿಗೆ ತಲುಪಿಸಲಿದ್ದಾರೆ.ದರ್ಶನ್ ಅವರಿಗೆ ಬೆಡಗಿಯರಾದ ರೇಖಾ ಹಾಗೂ ನವ್ಯಾನಾಯರ್ ಚಿತ್ರದಲ್ಲಿ ನಾಯಕಿಯರಾಗಿದ್ದಾರೆ. ಖ್ಯಾತ ನಟ ಶಿವಾಜಿ ಪ್ರಭು ನಟಿಸಿದ ಪ್ರಥಮ ಕನ್ನಡ ಚಿತ್ರ ಎಂಬ ಹೆಗ್ಗೆಳಿಕೆ ಈ ಚಿತ್ರಕ್ಕಿದೆ. ಕನ್ನಡದವರೇ ಆದ ರಂಗಾಯಣ ರಘು, ಉಮಾಶ್ರೀ, ಸುಮಿತ್ರ, ಬುಲೆಟ್ ಪ್ರಕಾಶ್ ಮುಂತಾದ ಕಲಾವಿದರು 'ಬಾಸ್'ನಲಿದ್ದಾರೆ.

ಆರ್.ರಘುರಾಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ವಿ.ಹರಿಕೃಷ್ಣ ಸಂಗೀತ, ಪಿ.ಆರ್.ಸೌಂದರ್‌ರಾಜ್ ಸಂಕಲನ, ಕವಿರಾಜ್, ವಿ.ನಾಗೇಂದ್ರ ಪ್ರಸಾದ್ ಗೀತರಚನೆ, ಬಿ.ಎ.ಮಧು ಸಂಭಾಷಣೆ ಹಾಗೂ ಚಿನ್ನಿಪ್ರಕಾಶ್, ಜಾನಿ ನೃತ್ಯ ಈ ಚಿತ್ರಕ್ಕಿದೆ. ದರ್ಶನ್ ಅವರ ಯೋಧ ಚಿತ್ರ ಅಷ್ಟೇನು ಸುದ್ದಿ ಮಾಡಲಿಲ್ಲ. ಯೋಧ ಚಿತ್ರ ತಮಿಳಿನ 'ಬಾಸ್ ' ಚಿತ್ರದ ರಿಮೇಕ್ ಎಂಬುದನ್ನು ಮರೆಯುವಂತಿಲ್ಲ. ಆದರೆ ಈ ಬಾಸ್ ಚಿತ್ರದ ಬಗ್ಗೆ ದರ್ಶನ್ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada