»   »  ಅಭಿಮಾನಿಗೆ ಸ್ಪೂರ್ತಿಯಾದ ರಾಜ್ ಕುಮಾರ್

ಅಭಿಮಾನಿಗೆ ಸ್ಪೂರ್ತಿಯಾದ ರಾಜ್ ಕುಮಾರ್

Subscribe to Filmibeat Kannada
Sharath Babu and Tara
ವರನಟ ಡಾ.ರಾಜ್ ಕುಮಾರ್ ಎಂದರೆ ಎಂದೆಂದಿಗೂ ಬತ್ತದ ಸ್ಫೂರ್ತಿಯ ಸೆಲೆ. ಅವರ ಜೀವನ, ಸಾಧನೆಗಳು ಎಂಥವರನ್ನೂ ಬೆರಗುಗೊಳಿಸುತ್ತವೆ. ಅಣ್ಣಾವ್ರ ಈ ಸ್ಫೂರ್ತಿಯ ಸೆಲೆಯನ್ನು ಹೀರಿಕೊಂಡು ಮತ್ತೊಂದು ಕನ್ನಡ ಚಿತ್ರ ಸೆಟ್ಟೇರಿದೆ. ಚಿತ್ರದ ಹೆಸರು 'ಅಭಿಮಾನಿ' ಅಂತ. ಉತ್ತರಹಳ್ಳಿ ಜಯರಾಮ್ ಮತ್ತು ಸಿ.ಸೇತುನಿರ್ಮಿಸುತ್ತಿರುವ ಚಿತ್ರವನ್ನು ಪ್ರವೀಣ್ ನಿರ್ದೇಶಿಸುತ್ತಿದ್ದಾರೆ.

ಡಾ.ರಾಜ್ ಕುಮಾರ್ ಅವರ ಹಾಗೆ ತಾನೂ ಒಬ್ಬ ಮಹಾನ್ ಗಾಯಕನಾಗಬೇಕು ಎಂಬುದು ನಾಯಕನ ಕನಸು. ತಾಯಿಯ ಆಸೆಯೂ ಅದೇ ಆಗಿರುತ್ತದೆ. ಮಗುವಿಗೆ ಜನ್ಮ ಕೊಟ್ಟ ನಂತರ ತನ್ನ್ನಮಗನನ್ನ್ನು ರಾಜ್ ಕುಮಾರ್ ಅವರಂತೆ ಮಹಾನ್ ಗಾಯಕನನ್ನಾಗಿ ಮಾಡಬೇಕು ಎಂದು ತಂದೆಯಿಂದ ಭಾಷೆ ತೆಗೆದುಕೊಂಡು ಪ್ರಾಣಬಿಟ್ಟಿರುತ್ತಾಳೆ. ಆತ ಮಹಾನ್ ಗಾಯಕನಾಗುತ್ತಾನಾ ಇಲ್ಲವೆ ಎಂಬುದು 'ಅಭಿಮಾನಿ' ಚಿತ್ರದ ಕಥಾಹಂದರ. ತಾಯಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ತಾರಾ, ತಂದೆಯಾಗಿ ಶರತ್ ಬಾಬು ಅಭಿನಯಿಸುತ್ತಿದ್ದಾರೆ. ಮಗನಾಗಿ 'ನನ್ನುಸಿರೇ' ಚಿತ್ರದ ರಾಹುಲ್ ಕಾಣಿಸಲಿದ್ದಾರೆ.

'ಅಭಿಮಾನಿ' ಚಿತ್ರದ ಕಥೆ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಖುಷಿಯಾಗಿಸಿದೆ. ಚಿತ್ರದ ನಾಯಕ ಮತ್ತು ನಾಯಕಿಯರು ಕನ್ನಡಿಗರೇ ಆಗಿರುವುದು ನನಗೆ ಇನ್ನೂ ಸಂತೋಷವಾಗಿದೆ ಎಂದರು. 'ಅಭಿಮಾನಿ' ಚಿತ್ರ ಯಶಸ್ವಿಯಾಗಲಿ ಎಂದು ಪಾರ್ವತಮ್ಮ ಹಾರೈಸಿದ್ದಾರೆ. ಇಷ್ಟೆಲ್ಲ ಘಟನೆಗಳಿಗೆ ಬೆಂಗಳೂರು ಇಂಟರ್ ನ್ಯಾಷನಲ್ ಹೋಟೆಲ್ ಬುಧವಾರ(ಜ.21) ಸಾಕ್ಷಿಯಾಯಿತು. ಇದೇ ಸಂದರ್ಭದಲ್ಲಿ 'ಅಭಿಮಾನಿ' ಚಿತ್ರದ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಸಹ ಉಪಸ್ಥಿತರಿದ್ದರು. ಅವರು ಅಭಿಮಾನಿ ಚಿತ್ರದ ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada