»   » ಮೈಸೂರು ಮಹಾರಾಜ ಕಾಲೇಜಿನಲ್ಲಿ 'ಹುಲಿ'

ಮೈಸೂರು ಮಹಾರಾಜ ಕಾಲೇಜಿನಲ್ಲಿ 'ಹುಲಿ'

Posted By:
Subscribe to Filmibeat Kannada

ಕಿಶೋರ್ ಪೂರ್ಣಪ್ರಮಾಣದ ನಾಯಕನಾಗಿ ನಟಿಸುತ್ತಿರುವ 'ಹುಲಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ನಾಯಕನ ಮನೆಗೆ ಆಗಮಿಸಿದ ನಾಯಕಿ ಆತನ ತಾಯಿಯ ಬಳಿ ತನ್ನ ಪರಿಚಯ ಮಾಡಿಕೊಂಡು ಆಕೆಯ ಹಾಗೂ ನಾಯಕನ ಸ್ನೇಹದ ಬಗ್ಗೆ ತಿಳಿಸುವ ಸನ್ನಿವೇಶವನ್ನು ಬೆಂಗಳೂರಿನ ಖಾಸಗಿ ನಿವಾಸವೊಂದರಲ್ಲಿ ಜನ್ನಿಫರ್ ಹಾಗೂ ಸುಮಿತ್ರ ಅವರ ಅಭಿನಯದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಬೆಂಗಳೂರಿನಲ್ಲಿ ಚಿತ್ರೀಕರಣವನ್ನು ಪೂರೈಸಿದ ಚಿತ್ರತಂಡ ಮೈಸೂರಿನತ್ತ ತೆರಳಿದೆ. ಅಲ್ಲಿನ ಕಾಲೇಜು, ಆಸ್ಪತ್ರೆ ಹಾಗೂ ರಸ್ತೆಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ವಿದ್ಯಾಧಿದೇವತೆ ಸರಸ್ವತಿಯ ಆವಾಸ ಸ್ಥಳವಾದ ಕಾಲೇಜಿನಲ್ಲಿ ಸದಾ ಶಾಂತಿ ನೆಲೆಸಿರಬೇಕು. ಆದರೆ ಮೈಸೂರಿನ ಕಾಲೇಜೊಂದರಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾರಾಮಾರಿ ನಡೆದು ಅಶಾಂತಿ ತಲೆದೊರುತ್ತದೆ. ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸ್ಥಿತಿ ನಿರ್ಮಾಣವಾಗುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ ನಾಯಕ ಕಿಶೋರ್ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಸಫಲರಾಗುತ್ತಾರೆ. ಈ ಸನ್ನಿವೇಶವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಿರ್ದೇಶಕ ಓಂಪ್ರಕಾಶ್‌ರಾವ್ ಚಿತ್ರೀಕರಿಸಿಕೊಂಡರು.

ಬಿ.ಎಸ್.ಸುಧೀಂದ್ರ ಹಾಗೂ ಶಿವಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮನೋಹರ್ ಅವರ ಛಾಯಾಗ್ರಹಣವಿದೆ. ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಡೆನ್ನಿಸಾ ಪ್ರಕಾಶ್ ಕಥೆ, ಪಳನಿರಾಜ್ ಸಾಹಸ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಕಿಶೋರ್, ಜನ್ನಿಫ಼ರ್, ಸುಮಿತ್ರ, ಅವಿನಾಶ್, ಮಾಳವಿಕಾ, ರಂಗಾಯಣರಘು, ಶೋಭರಾಜ್, ಸಾಧುಕೋಕಿಲಾ, ಬುಲೆಟ್‌ಪ್ರಕಾಶ್, ಚಿತ್ರಾಶೆಣೈ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada