»   »  ಮಲ್ಲು ಬೆಡಗಿ ನವ್ಯಾ ನಾಯರ್ ಗೆ ಕಂಕಣಬಲ!

ಮಲ್ಲು ಬೆಡಗಿ ನವ್ಯಾ ನಾಯರ್ ಗೆ ಕಂಕಣಬಲ!

Posted By:
Subscribe to Filmibeat Kannada

ಮಲ್ಲು ಬೆಡಗಿ ನವ್ಯಾ ನಾಯರ್ ಹಸೆಮಣೆ ಏರುವ ಸನ್ನಾಹದಲ್ಲಿದ್ದಾರೆ. ಕೇರಳದ ಚಂಗನಾಚೆರಿ ಮೂಲದ ನಾಯರ್ ಜನಾಂಗದ ಯುವಕ ನವ್ಯಾ ನಾಯರ್ ಬಾಳಸಂಗಾತಿಯಾಗಲಿದ್ದಾನೆ. ಈತ ಮುಂಬೈನ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು ಶೀಘ್ರದಲ್ಲೇ ನವ್ಯಾ ಕೈ ಹಿಡಿಯಲಿದ್ದಾನೆ ಎನ್ನಲಾಗಿದೆ.

ಈ ಹಿಂದೆಯೂ ನವ್ಯಾ ನಾಯರ್ ಮದುವೆ ಬಗ್ಗೆ ಪುಂಖಾನುಪುಂಖ ಸುದ್ದಿಗಳು ಪ್ರಕಟವಾಗಿದ್ದವು. ಈ ಸುದ್ದಿಗಳನ್ನೆಲ್ಲಾ ನವ್ಯಾ ನಾಯರ್ ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಇದೆಲ್ಲಾ ಕೇವಲ ವದಂತಿ ಅಷ್ಟೇ ಎಂದಿದ್ದರು. ತಾವು ಇದೀಗ ತಾನೆ ಎಂಬಿಎ ಪದವಿ ಮುಗಿಸಿದ್ದೇನೆ. ಮದುವೆಗೂ ಮುನ್ನ ಸಾಧಿಸಬೇಕಾಗಿರುವುದು ಇನ್ನೂ ಬಹಳಷ್ಟಿದೆ ಎಂದು ಹೇಳಿದ್ದರು. ನವ್ಯಾ ನಾಯರ್ ಮದುವೆ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಆದರೆ ನಿಶ್ಚಿತಾರ್ಥ ಶೀಘ್ರದಲ್ಲೇ ನಡೆಯಲಿದೆ ಎನ್ನುತ್ತವೆ ಮೂಲಗಳು.

ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯಿಸಿರುವ ನವ್ಯಾ, ನನ್ನ ತಂದೆ ತಾಯಿ ಸೂಕ್ತ ವರನಿಗಾಗಿ ಹುಡುಕುತ್ತಿರುವುದೇನೋ ನಿಜ. ನಮ್ಮ ಸಮುದಾಯದಲ್ಲೇ ನಾನು ಮದುವೆಯಾಗುತ್ತೇನೆ. ನಾಯರ್ ಜನಾಂಗದ ಯುವಕನೇ ಆಗಬೇಕು. ಒಟ್ಟಿನಲ್ಲಿ ಸದ್ಯಕ್ಕಂತೂ ಮದುವೆ ಮಾಡಿಕೊಳ್ಳುತ್ತಿಲ್ಲ. ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಬೇಕಾಗಿದೆ ಆನಂತರವಷ್ಟೇ ಮದುವೆ ಎನ್ನುತ್ತಾರೆ.

ಗಜ ಚಿತ್ರದ ಮೂಲಕ ನವ್ಯಾ ನಾಯರ್ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದರು. ವಿಷ್ಣುವರ್ಧನ್ ಜತೆ 'ನಂ ಯಜಮಾನ್ರು' ಚಿತ್ರದಲ್ಲೂ ನವ್ಯಾ ನಟಿಸಿದ್ದಾರೆ. ಆನಂತರ 'ಭಾಗ್ಯದ ಬಳೆಗಾರ' ಚಿತ್ರದಲ್ಲಿ ಶಿವರಾಜ್ ಕುಮಾರ್ ಜತೆ ನಟಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ 'ಬಾಸ್' ಚಿತ್ರದಲ್ಲೂ ನವ್ಯಾ ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada