»   » ಅಮಿತಾಬ್ ಜತೆ ಸಿಎಂ 'ಪಾ' ಸಿನಿಮಾ ವೀಕ್ಷಣೆ

ಅಮಿತಾಬ್ ಜತೆ ಸಿಎಂ 'ಪಾ' ಸಿನಿಮಾ ವೀಕ್ಷಣೆ

Posted By:
Subscribe to Filmibeat Kannada

ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಭಿನಯದ 'ಪಾ' ಚಿತ್ರಕ್ಕೆ ರಾಜ್ಯ ಸರಕಾರ ಮನರಂಜನಾ ತೆರಿಗೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿದೆ. ಜನವರಿ 15ರಿಂದಲೇ 'ಪಾ' ಚಿತ್ರಕ್ಕೆ ರಾಜ್ಯದಲ್ಲಿ ಮನರಂಜನಾ ತೆರಿಗೆಯಲ್ಲಿ ಶೇ.50ರಷ್ಟು ರಿಯಾಯಿತಿ ಸೌಲಭ್ಯ ದೊರೆತಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೆ ಸರಿ ಸುಮಾರು ರು.30 ಲಕ್ಷದಷ್ಟು ಆದಾಯ ಕೈತಪ್ಪಿ ಹೋಗಲಿದೆ.

ಅಮಿತಾಬ್ ಬಚ್ಚನ್ ಒಡೆತನದ ಎಬಿಸಿ ಕಂಪನಿ ರಾಜ್ಯ ಸರಕಾರಕ್ಕೆ ಮಾಡಿಕೊಂಡಿದ್ದ ಮನವಿಯ ಹಿನ್ನೆಯಲ್ಲಿ ಸರ್ಕಾರ ಈ ರಿಯಾಯಿತಿ ಪ್ರಕಟಿಸಿದೆ. ಅಪರೂಪದ ಕಾಯಿಲೆ 'ಪ್ರೊಗೇರಿಯಾ' ಬಗ್ಗೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಪ್ರೊಗೇರಿಯಾ ಕುರಿತು ಶಿಕ್ಷಣ ಮತ್ತು ತಿಳುವಳಿಕೆ ನೀಡುವ 'ಪಾ' ಚಿತ್ರಕ್ಕೆ ಮನರಂಜನಾ ತೆರಿಗೆಯಲ್ಲಿ ವಿನಾಯಿತಿ ಕೊಡಬೇಕೆಂದು ಮನವಿ ಮಾಡಲಾಗಿತ್ತು.

ಅಷ್ಟೇ ಅಲ್ಲದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಸೇರಿದಂತೆ ಕೆಲವು ನಿರ್ದೇಶಕರು ಇದೊಂದು ಗುಣಾತ್ಮಕ ಚಿತ್ರವಾಗಿದ್ದು ವಿನಾಯಿತಿ ಕೊಡಬಹುದೆಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 'ಪಾ' ಚಿತ್ರಕ್ಕೆ ಶೇ.50ರಷ್ಟು ಮನರಂಜಾನ ತೆರಿಗೆ ವಿನಾಯಿತಿ ಪ್ರಕಟಿಸಿದೆ.

'ರಣ್' ಚಿತ್ರದ ಪ್ರಚಾರಕ್ಕಾಗಿ ಅಮಿತಾಬ್ ಈಗಾಗಲೆ ಬೆಂಗಳೂರಿಗೆ ಆಗಮಿಸಿದ್ದಾರೆ. ಶನಿವಾರ ಸಂಜೆ ಅವರು ಪಂಚತಾರಾ ಹೋಟೆಲ್ ಒಂದರಲ್ಲಿ ಯಡಿಯೂರಪ್ಪ ಅವರ ಜತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಸಂಜೆ ಅವರು ಯಡಿಯೂರಪ್ಪ ಅವರೊಂದಿಗೆ ಒಟ್ಟಿಗೆ ಕುಳಿತು ಪಿವಿಆರ್ ಚಿತ್ರಮಂದಿರದಲ್ಲಿ 'ಪಾ' ಚಿತ್ರ ವೀಕ್ಷಿಸಲಿದ್ದಾರೆ. ರಾಜ್ಯ ಸಚಿವ ಸಂಪುಟ ಸಹ 'ಪಾ' ಚಿತ್ರವನ್ನು ವೀಕ್ಷಿಸಲಿದೆ.

ಹಿರಿಯ ನಿರ್ಮಾಪಕಿ ಪಾರ್ವತ ರಾಜ್ ಕುಮಾರ್ ಅವರಿಗೂ 'ಪಾ' ಚಿತ್ರಕ್ಕೆ ಆಹ್ವಾನಿಸಲಾಗಿದೆ. 'ಪಾ' ಚಿತ್ರದ ವೀಕ್ಷಣೆಗಾಗಿ ಪಿವಿಆರ್ ನ ಇಡೀ ಒಂದು ಆಡಿಟೋರಿಯಂ ಅನ್ನು ಮುಂಗಡವಾಗಿ ಕಾದಿರಿಸಲಾಗಿದೆ. ಐಶ್ವರ್ಯರೈ, ಅಭಿಷೆಕ್ ಬಚ್ಚನ್, ಜಯಾ ಬಚ್ಚನ್ ಸಹಾ 'ಪಾ' ಚಿತ್ರದ ವೀಕ್ಷಿಸಲಿದ್ದಾರೆ ಎನ್ನುತ್ತವೆ ಮೂಲಗಳು.

ಅಮಿತಾಬ್ ರನ್ನು ಭೇಟಿ ಮಾಡಲು ಕನ್ನಡ ಚಿತ್ರೋದ್ಯಮದ ಹಲವರು ದೌಡಾಯಿಸಿದ್ದಾರೆ. ನಟ ಸುದೀಪ್, ನಿರ್ದೇಶಕ ಎಸ್.ನಾರಾಯಣ್, ನಿರ್ಮಾಪಕ ಕೆ ಮಂಜು ಸೇರಿದಂತೆ ಹಲವರು ಅಮಿತಾಬ್ ರನ್ನು ಭೇಟಿ ಮಾಡಲು ಪಂಚತಾರಾ ಹೋಟೆಲ್ ಗೆ ಬಂದಿದ್ದಾರೆ. ಅಮಿತಾಬ್ ಅವರ ಅಪಾರ ಅಭಿಮಾನಿಗಳು ಹೋಟೆಲ್ ಬಳಿ ಜಮಾಯಿಸಿದ್ದಾರೆ. 'ರಣ್' ಚಿತ್ರದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಹ ಬೆಂಗಳೂರಿಗೆ ಆಗಮಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada