»   »  ಬೆಂಗಳೂರು ಕುರಿತ ಕನ್ನಡಿಗನ ಇಂಗ್ಲಿಷ್ ಚಿತ್ರ

ಬೆಂಗಳೂರು ಕುರಿತ ಕನ್ನಡಿಗನ ಇಂಗ್ಲಿಷ್ ಚಿತ್ರ

Subscribe to Filmibeat Kannada

ಕನ್ನಡಿಗ ಸ್ವರೂಪ್ ಕಂಚಿ ನಿರ್ದೇಶನದ ಇಂಗ್ಲಿಷ್ ಚಿತ್ರ Bengaloored ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಜೊತೆಗೆ ಸಂಕಲನದ ಜವಾಬ್ದಾರಿಯನ್ನೂ ಸ್ವರೂಪ್ ಅವರೇ ಹೊತ್ತಿರುವುದು ವಿಶೇಷ. ಅತ್ರಿಯಾ ಹೋಟೆಲ್ ನ ಪಾಲುದಾರ ಪ್ರದೀಪ್ ರಾಜ್ ರೊಂದಿಗೆ ಸ್ವರೂಪ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಎರಡು ಗಂಟೆಗಳ ಕಾಲಾವಧಿಯ Bengaloored ಚಿತ್ರವನ್ನುಡಿಜಿಟಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ. ಹರೀಶ್ ರಾಜ್ ಮತ್ತು ಮೇಘನಾ ಮುದಿಯಾನ್ ಚಿತ್ರದ ಪ್ರಮುಖ ಪಾತ್ರಧಾರಿಗಳು. ಬದಲಾದ ಬೆಂಗಳೂರು ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. ಪ್ರಸ್ತುತ ಚಿತ್ರಕ್ಕೆ ಡಿಐ ತಂತ್ರಜ್ಞಾನ ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಐದು ಹಾಡುಗಳು ಹಿಂದಿಯಲ್ಲಿದ್ದರೆ ಒಂದು ಹಾಡು ಕನ್ನಡದಲ್ಲಿರುವುದು ವಿಶೇಷ. ವಾಸು ದೀಕ್ಷಿತ್(ರಘು ದೀಕ್ಷಿತ್ ಸಹೋದರ) ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ವರೂಪ್ ಚಿತ್ರಕತೆಯನ್ನು ಸಿದ್ಧಪಡಿಸಿದ್ದಾರೆ.

ಹತ್ತು ವರ್ಷಗಳ ಬಳಿಕ ಯುವ ಸಾಹಿತಿಯೊಬ್ಬ ತನ್ನ ಪುಸ್ತಕವನ್ನು ಅಂತಿಮಗೊಳಿಸುವ ಉದ್ದೇಶದಿಂದ ಬೆಂಗಳೂರಿಗೆ ಹಿಂತಿರುಗುತ್ತಾನೆ. ತನ್ನ ಬಾಲ್ಯದಲ್ಲಿ ಕಂಡ ಬೆಂಗಳೂರು ಸಾಕಷ್ಟು ಬದಲಾವಣೆಗಳನ್ನು ಕಂಡಿರುವುದನ್ನು ಆತ ಗಮನಿಸುತ್ತಾನೆ. ತಾಯಿ ತೀರಿಕೊಂಡ ಬಳಿಕ ಸಾಹಿತಿಯ ತಂದೆ ಎರಡನೆ ಮದುವೆ ಮಾಡಿಕೊಂಡಿರುತ್ತಾನೆ. ಜೀವದ ಗೆಳೆಯ ಭಿಕ್ಷುಕನಾಗಿರುತ್ತಾನೆ. ಉದ್ಯಾನ ನಗರಿ ಕಾಂಕ್ರೀಟ್ ನ ಬೆಂಗಾಡಾಗಿರುತ್ತದೆ. ತನ್ನ ಪ್ರೀತಿ ಪಾತ್ರದ ಮನೆ ಧ್ವಂಸವಾಗಿರುತ್ತದೆ.

ಒಟ್ಟಿನಲ್ಲಿ ಬೆಂಗಳೂರು ಸಾಂಸ್ಕೃತಿಕ, ಆರ್ಥಿಕ, ಔದ್ಯೋಗಿಕ ಮತ್ತು ವಾಣಿಜ್ಯ ಬದಲಾವಣಗೆ ತೆರೆದುಕೊಂಡಿರುತ್ತದೆ. ಛಾಯಾಗ್ರಾಹಕ ಗುರುಪ್ರಸಾದ್ ಜತೆ ಬೆಂಗಳೂರಿನ ಮೆಜೆಸ್ಟಿಕ್, ಮಲ್ಲೇಶ್ವರ, ಎಂಜಿ ರಸ್ತೆ ಮತ್ತು ಉಳಿದ ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ತಾರಾಗಣದಲ್ಲಿ ಶ್ರೀನಿವಾಸ ಪ್ರಭು, ಲಕ್ಷ್ಮಿ ಚಂದ್ರಶೇಖರ್, ಆರ್ ಟಿ ಕುಮಾರ್, ಸುಮಾ ವಿನೋದ್ ಮತ್ತು ಪ್ರಕಾಶ್ ನಟಿಸಿದ್ದಾರೆ.

ಯುವ ಸಾಹಿತಿ ಬಬ್ರುವಾಹನನಾಗಿ ಹರೀಶ್ ರಾಜ್ ಕಾಣಿಸಲಿದ್ದಾರೆ. ಫ್ರಾನ್ಸ್ ನಿಂದ ಬೆಂಗಳೂರಿಗೆ ಹಿಂತಿರುಗುವ ಬಬ್ರುವಾಹನ ತನ್ನ ಪುಸ್ತಕ 'New Path White Clouds" ನ ಕೊನೆಯ ಭಾಗವನ್ನು ಮುಗಿಸಲು ಬಂದಿರುತ್ತಾನೆ. ಲಾಸ್ ಏಂಜಲೀಸ್ ನ ಹುಡುಗಿಯಾಗಿ ಮೇಘನಾ ಕಾಣಿಸಲಿದ್ದಾರೆ. ಎರಡು ವರ್ಷಗಳಿಂದ ಆಕೆ ಬೆಂಗಳೂರಿನಲ್ಲೇ ನೆಲೆಸಿರುತ್ತಾಳೆ. ಒಟ್ಟಿನಲ್ಲಿ ಕನ್ನಡಿನೊಬ್ಬನ ಇಂಗ್ಲಿಷ್ ಸಿನಿಮಾ ಚಿತ್ರೋದ್ಯಮದಲ್ಲಿ ಕುತೂಹಲ ಮೂಡಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada