»   »  ಭಕ್ತ ಸಿರಿಯಾಳ ಖ್ಯಾತಿ ಚಂದೂಲಾಲರ ಹೊಸ ಚಿತ್ರ

ಭಕ್ತ ಸಿರಿಯಾಳ ಖ್ಯಾತಿ ಚಂದೂಲಾಲರ ಹೊಸ ಚಿತ್ರ

By: *ಜಯಂತಿ
Subscribe to Filmibeat Kannada
Chandulal Jain
ಸಾವಿನ ಕದ ತಟ್ಟಿ ಬದುಕಿ ಬಂದ ನಿರ್ಮಾಪಕ ಚಂದೂಲಾಲ್ ಜೈನ್ ಕೈಲಿ ಗುಟ್ಕಾ ಹಿಡಿದಿದ್ದರು. ಅನತಿ ದೂರದಲ್ಲಿ ಅವರ ಮಡದಿ. ಆಕೆ ಎಲ್ಲಿ ನೋಡಿಯಾರೋ ಎಂಬ ಧಾವಂತದಲ್ಲಿಯೇ ಗುಟ್ಕಾವನ್ನು ಬಾಯಿಗೆ ಇಳಿಸಿದರು. ಅದು, ಅವರ ಎಪ್ಪತ್ತನಾಲ್ಕನೇ ಹುಟ್ಟುಹಬ್ಬದ ಔತಣಕೂಟ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಐವತ್ತು ವರ್ಷ ಸರಿದ ಸಂತೋಷವೂ ಬೆರೆತಿತ್ತು. ಯುಗಳ ಸಂಭ್ರಮದ ಕಾರ್ಯಕ್ರಮ ನಡೆದದ್ದು, ಗುರುವಾರ (ಜ. 22) ಮಧ್ಯಾಹ್ನ ಗಾಂಧಿನಗರದ ಗ್ರೀನ್‌ಹೌಸ್‌ನಲ್ಲಿ.

ಭೂತಯ್ಯನ ಮಗ ಅಯ್ಯು, ಭಕ್ತ ಸಿರಿಯಾಳ, ತಬ್ಬಲಿಯು ನೀನಾದೆ ಮಗನೆ, ಗೋಧೂಳಿ, ವೀರಪ್ಪನ್, ಗಂಗವ್ವ ಗಂಗಾಮಾಯಿ, ಹೇಮಾವತಿ, ಪ್ರಾಯ ಪ್ರಾಯ ಪ್ರಾಯ, ಬೆತ್ತಲೆಸೇವೆ, ಇದು ಸಾಧ್ಯ ಮೊದಲಾದ ಚಿತ್ರಗಳನ್ನು ನಿರ್ಮಿಸಿದ ಚಂದೂಲಾಲ್ ಜೈನ್ ತಮಗೆಂದು ಸ್ವಂತ ಮನೆ ಮಾಡಿಕೊಂಡಿಲ್ಲ. ಓಡಾಡುವುದು ಕಾಲಿನಲ್ಲೇ; ಕಾರಿಲ್ಲ. ಇಸ್ಪೀಟ್ ಆಡುವ ಅಭ್ಯಾಸವಿದೆ. ಕಟ್ಟುವ ಹಣ ಐದು ಅಥವಾ ಹತ್ತು ರೂಪಾಯಿ.

ಬೇರೆ ಮೂಲದವರಾಗಿ ಕನ್ನಡ ಮಾತಾಡುತ್ತಾರಲ್ಲ ಎಂದು ಹೆಮ್ಮೆ ಪಟ್ಟುಕೊಂಡ ರಾಜ್‌ಕುಮಾರ್ ಇವರಿಗೆ ಕಾಲ್‌ಷೀಟ್ ಕೊಟ್ಟಿದ್ದರು. ಆ ಕ್ಷಣವನ್ನು ಚಂದೂಲಾಲ್ ಈಗಲೂ ಸ್ಮರಿಸುತ್ತಾರೆ. ಲವಲವಿಕೆಯಿಂದ ಬದುಕಬೇಕು ಅನ್ನೋದಷ್ಟೆ ಅವರ ಉಮೇದು. ಈ ಕಾರಣಕ್ಕೇ 'ವಿದೇಶಿ" ಎಂಬ ಸಿನಿಮಾ ನಿರ್ಮಿಸಲು ಹೊರಟಿದ್ದಾರೆ. ನಿರ್ದೇಶಕ ರವೀಂದ್ರನಾಥ್ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.

ಅಂದಹಾಗೆ, ಜೈನ್ ಅವರಿಗೊಂದು ಸೈಟು ಕೊಡಿ ಅಂತ ಬಿಡಿಎಗೆ ಖುದ್ದು ಪಾರ್ವತಮ್ಮ ರಾಜ್‌ಕುಮಾರ್ ಮನವಿ ಮಾಡಿದ್ದಾರೆ. ಈ ಸಂಗತಿಯನ್ನು ಹೇಳಿದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಖಜಾಂಚಿ ಸಾ.ರಾ.ಗೋವಿಂದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada