»   » ಮೀಸಲಾತಿ ವಿರುದ್ಧ ಸತ್ಯು ಗರಂ ಹುವಾ!

ಮೀಸಲಾತಿ ವಿರುದ್ಧ ಸತ್ಯು ಗರಂ ಹುವಾ!

Posted By:
Subscribe to Filmibeat Kannada

ಭಾರತ ಚಿತ್ರರಂಗದ ಪ್ರತಿಭಾವಂತ ಚಿತ್ರಕರ್ಮಿ ಸತ್ಯು ಅವರನ್ನು ಗರಂ ಹವಾ, ಬರ ಚಿತ್ರದ ನಿರ್ದೇಶಕ ಎಂದು ಜನ ಗುರುತಿಸುವುದಕ್ಕಿಂತ ರಾಜ್ ಕುಮಾರ್ ಅವರ ಬಗ್ಗೆ ಮಾತಾಡಿದ ಒಂದೆರಡು ಮಾತುಗಳು ಅವರಿಗೆ ಕು-ಖ್ಯಾತಿಯನ್ನು ತಂದು ಕೊಟ್ಟಿಬಿಟ್ಟಿತು. ಅಂದು ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ಅತಿಥಿಯಾಗಿದ್ದ ಸತ್ಯು, ಮಾತಿನ ಭರದಲ್ಲಿ 'ಯಾರದು ಅಣ್ಣಾವ್ರು?' ಯಾರು ಯಾರಿಗೆ ಅಣ್ಣ? ಅಂದು ಬಿಟ್ರು. ಆಮೇಲೆ ಕನ್ನಡಚಿತ್ರರಸಿಕರು ಕೆರಳಿದ ಸಿಂಹಗಳಾಗಿ ಘರ್ಜಿಸಿದ್ದೇನು? ಸತ್ಯು ಮನೆಗೆ ಪೊಲೀಸ್ ಕಾವಲೇನು?ಎಲ್ಲೆಡೆ ಗಲಾಟೆ.

ಕೊನೆಗೆ ಸತ್ಯು, ರಾಜ್ ಎಂಬ ಬ್ರಾಂಡ್ ನೇಮ್ ಗೆ ತಲೆಬಾಗಲೇ ಬೇಕಾಯ್ತು. ಒಲ್ಲದ ಮನಸ್ಸಿನಿಂದ ಕ್ಷಮೆಯಾಚಿಸಿ ಎಂದಿನಂತೆ ಮುಂಬೈ ರಂಗಮಂಚಕ್ಕೆ ತೆರಳಬೇಕಾಯ್ತು.ನಂತರ ಇನ್ನೊಮ್ಮೆ ಮೈಸೂರಿನ ರಂಗಾಯಣದ ಮುಂದೆ ಕನ್ನಡ ಸಂಘಟನೆಗಳನ್ನು ಸತ್ಯು ತರಾಟೆ ತೆಗೆದುಕೊಂಡಿದ್ದರು. ಸತ್ಯು ವಿರುದ್ಧ ಪ್ರತಿಭಟನೆ ಮಾಡಲು ಕಾಯುತ್ತಿದ್ದ ಸಂಘಟನೆಗಳಿಗೆ ಅಣ್ಣಾವ್ರ ವಿರುದ್ಧ ಅವಹೇಳನ ಮಾತುಗಳು ಹಾಗೂ ತಮ್ಮ ನೈಜ 'ಕನ್ನಡ'ತನ ಹೋರಾಟ ಬಯಲಿಗೆಳೆದಿದ್ದು ಸಿಟ್ಟಿಗೇರಿಸಿತ್ತು. ಸತ್ಯು ಮುಂಬೈಯಿಂದ ಬಂದವನು ಎಂದು ತಿಳಿದಿದ್ದ ಹೋರಾಟಗಾರರಿಗೆ, ಸತ್ಯು ಅವರ ಅಸ್ಖಲಿತ ಕನ್ನಡ, ಖಡಕ್ ಮಾತುಗಳನ್ನು ಕೇಳಿದ ಮೇಲೆ , ಈತ ಇಲ್ಲೇ ಮೈಸೂರಿನವ ನಮ್ಮೆಲ್ಲರಿಗೆ ಹಿರಿಯ ಎಂಬುದು ಅರಗಿಸಿಕೊಳ್ಳುವುದು ಕಷ್ಟವಾಯಿತು. ಈ ಇತಿಹಾಸ ಸತ್ಯು ನೇರ, ದಿಟ್ಟ, ನಿರಂತರ ಬದುಕಿನ ಕೆಲವು ಸ್ಯಾಂಪಲ್ ಅಷ್ಟೇ.

ಮೀಸಲಾತಿ ಏಕೆ ಬೇಕು?:ಇಂತಿರ್ಥ ಸತ್ಯು ಈಗ ಮತ್ತೆ ಇಜ್ಜೋಡು ಎಂಬ ಆರ್ಥಪೂರ್ಣ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿರುವುದು ಒಳ್ಳೆಯ ಬೆಳವಣಿಗೆ. ಇತ್ತೀಚಿಗೆ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮೀಸಲಾತಿಯ ವಿರುದ್ಧ ಹರಿಹಾಯ್ದಿದ್ದಾರೆ. ಮೀಸಲಾತಿ ವ್ಯವಸ್ಥೆಯಿಂದ ರಾಜ್ಯಗಳಲ್ಲಿನ ಸಾಮಾಜಿಕ ವ್ಯವಸ್ಥೆಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಮೀಸಲಾತಿಯನ್ನು ಜಾತಿ ಆಧಾರದ ಮೇಲಲ್ಲದೆ, ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ನೀಡಬೇಕೆಂಬುದು ಎಡಪಂಥೀಯರ ವಾದ. ಆದರೆ, ಕಾಂಗ್ರೆಸ್ 60 ವರ್ಷಗಳಿಂದ ವಿರೋಧಿಸುತ್ತಾ ಬಂದಿದೆ. ಬ್ರಾಹ್ಮಣನೊಬ್ಬ ಕಡುಬಡವನಾಗಿದ್ದರೆ ಆತನಿಗೂ ಮೀಸಲಾತಿ ನೀಡಬೇಕೆಂದು ನಾನು ಹೇಳುತ್ತೇನೆ.

ದೇಶದಲ್ಲಿರುವ ಮೀಸಲಾತಿ ವ್ಯವಸ್ಥೆ ಕುರಿತು ಚಿತ್ರಕಥೆ ಬರೆಯುವ ಯೋಚನೆಯಲ್ಲಿದ್ದೇನೆ ಸೂಕ್ತ ನಿರ್ಮಾಪಕ ಸಿಕ್ಕರೆ ತೆರೆಗೆ ತರಬಹುದು. ಆದರೆ, ಇದು ವಿವಾದಯುಕ್ತ ವಿಷಯವಾದ್ದರಿಂದ ಯಾವ ನಿರ್ಮಾಪಕರು ಈ ಚಿತ್ರ ನಿರ್ಮಾಪಕಕ್ಕೆ ಕೈ ಹಾಕಲುಹಿಂಜರಿಯುತ್ತಿದ್ದಾರೆ. ಪ್ರಸ್ತುತ ಇಜ್ಜೋಡು ಚಿತ್ರಕ್ಕೂ ಇದೇ ಸಮಸ್ಯೆ ಎದುರಾಗಿತ್ತು, ಆದರೆ ರಿಲಯನ್ಸ್ ಸಮೂಹ ಧೈರ್ಯವಾಗಿ ಹಣ ಹೂಡಿ, ಚಿತ್ರೀಕರಣಕ್ಕೆ ಸಹಕರಿಸಿತು ಎಂದರು. ಇಜ್ಜೋಡು ಚಿತ್ರ ದೇವದಾಸಿ ಪದ್ಧತಿಯ ಕಥಾವಸ್ತು ಹೊಂದಿದೆ.

ಇಜ್ಜೋಡು ಚಿತ್ರದ ಕಥಾವಸ್ತು ನನ್ನನ್ನು ಸುಮಾರು 30 ವರ್ಷಗಳಿಂದ ಕಾಡುತ್ತಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕರಾದ ವಿಕೃ ಗೋಕಾಕ್ ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಕೃತಿಗಳು ಹಾಗೂ ಆನಂದರ 'ನಾನು ಕೊಂದ ಹುಡುಗಿ' ಲೇಖನ ಓದಿ, ಒಂದು ನನ್ನದೇ ಆದ ಒಂದು ಸ್ವರೂಪ ನೀಡಿ,ಇಜ್ಜೋಡು ಕಥೆ ಹೆಣೆದಿದ್ದೇನೆ.

ದೃಶ್ಯ ಮಾಧ್ಯಮಕ್ಕೆ ಇರುವ ಎಲ್ಲಾ ಸಾಧ್ಯಸಾಧ್ಯತೆಗಳನ್ನು ಬಳಸಿಕೊಳ್ಳಬೇಕು. ಮೀರಾ ಜಾಸ್ಮಿನ್, ಅನಿರುದ್ಧ್ ಉತ್ತಮವಾಗಿ ಅಭಿನಯಿಸಿದ್ದಾರೆ. ಹಾಸ್ಯ್ಯ,ಸಂಗೀತ, ನೃತ್ಯ ಹಾಗೂ ಮಾನವೀಯ ಸಂವೇದನೆಗಳ ಹೂರಣವಿರುವ ಇಜ್ಜೋಡು ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಬಹುದು ಎಂದರು.ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸಿರುವ ಮೊದಲ ಚಿತ್ರ ಇಜ್ಜೋಡು ಏ.30 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada