»   » ಪ್ರಕಾಶ್ ರೈ 'ನಾನು ನನ್ನ ಕನಸಿ'ಗೆ ಚಾಲನೆ

ಪ್ರಕಾಶ್ ರೈ 'ನಾನು ನನ್ನ ಕನಸಿ'ಗೆ ಚಾಲನೆ

Subscribe to Filmibeat Kannada

ಇದೇ ಮೊದಲ ಬಾರಿಗೆ ನಟ ಪ್ರಕಾಶ್ ರೈ ನಿರ್ದೇಶಿಸುತ್ತಿರುವ 'ನಾನು ನನ್ನ ಕನಸು' ಚಿತ್ರೀಕರಣ ಚಾಲನೆ ಪಡೆದುಕೊಂಡಿದೆ. ಕಬ್ಬನ್ ಉದ್ಯಾನದಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಆವರಣದಲ್ಲಿ ಚಿತ್ರೀಕರಣಕ್ಕೆ ಶನಿವಾರ(ನವೆಂಬರ್ 21) ಚಾಲನೆ ನೀಡಲಾಯಿತು. ಈ ಚಿತ್ರವನ್ನು ಬಿ ಸುರೇಶ್ ಮತ್ತು ಪ್ರಕಾಶ್ ರೈ ಅವರ ತಾಯಿ ಸುವರ್ಣ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಪ್ರಕಾಶ್ ರೈ ನಟನೆಯ ಸನ್ನಿವೇಶವನ್ನು ಛಾಯಾಗ್ರಾಹಕ ಅನಂತ ಅರಸ್ ಕ್ಯಾಮೆರಾದಲ್ಲಿ ಸೆರೆಹಿಡಿದರು. ನಾನು ನನ್ನ ಕನಸು ಚಿತ್ರೀಕರಣಕ್ಕೆ ಕನಸುಗಾರ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಯೋಗರಾಜಭಟ್, ಪತ್ರಕರ್ತರಾದ ರವಿ ಬೆಳಗೆರೆ, ವಿಶ್ವೇಶ್ವರಭಟ್ ಸಹಆಗಮಿಸಿದ್ದರು.

ಜನಪ್ರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ವಾದ್ಯಗೋಷ್ಠಿಯನ್ನೂ ಏರ್ಪಡಿಸಲಾಗಿತ್ತು. ಹಳೆಯ ಕನ್ನಡ ಚಿತ್ರಗೀತೆಗಳನ್ನು ಲತಾ ಹಂಸಲೇಖ, ಹರ್ಷ, ರವಿಶಂಕರ್ ಹಾಡಿದ್ದು ವಿಶೇಷವಾಗಿತ್ತು. ಪ್ರಕಾಶ್ ರೈ ಮಗಳಾಗಿ ನಟಿ ರಮ್ಯಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಸಂಯೋಜನೆ ಇದೆ.

ಪ್ರಕಾಶ್ ರೈ ಮಾತನಾಡುತ್ತಾ, ಇದೊಂದು ಮಗಳ ಹುಟ್ಟು ಮತ್ತು ತಂದೆಯ ಜೀವನ ಕುರಿತ ಚಿತ್ರ. ಮಗಳು ಹುಟ್ಟಿದ ಕೂಡಲೆ ತಂದೆ ಸಹ ಹುಟ್ಟುತ್ತಾನೆ ಎಂದು ತಮ್ಮ ಚಿತ್ರದ ಕಥಾಹಂದರವನು ಬಿಚ್ಚಿಟ್ಟರು. ಕನ್ನಡದ ಮೂಲಕ ನಿರ್ದೇಶನಕನಾಗಿ ಪರಿಚಯವಾಗುತ್ತಿರುವ ಬಗ್ಗೆ ಪ್ರಕಾಶ್ ರೈ ಹರ್ಷ ವ್ಯಕ್ತಪಡಿಸಿದರು.

ಮೂಡಿಗೆರೆಯಲ್ಲಿ ನಾಲ್ಕು ದಿನಗಳ ಚಿತ್ರೀಕರಣ ಬಳಿಕ 'ನಾನು ನನ್ನ ಕನಸು' ಚಿತ್ರತಂಡ ಕೊಡಗು ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ. ಸೋಮವಾರಪೇಟೆಯ ಶನಿವಾರಸಂತೆಯಲ್ಲಿ ಚಿತ್ರೀಕರಣ ನಡೆಯಲಿದೆ. ಉಳಿದ ಭಾಗದ ಚಿತ್ರೀಕರಣ ಚಿಕ್ಕಮಗಳೂರಿನ ಕೆಳಗೂರು ಕಾಫಿ ಎಸ್ಟೇಟ್ ನಲ್ಲಿ ನಡೆಯಲಿದೆ ಎಂದು ಪ್ರಕಾಶ್ ರೈ ತಿಳಿಸಿದರು. ಈ ಚಿತ್ರದಲ್ಲಿ ರಮೇಶ್ ಅರವಿಂದ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಚ್ಯುತ ಕುಮಾರ್, ವೀಣಾ ಸುಂದರ್ ಸಹ ಚಿತ್ರದ ತಾರಾಬಳಗದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada