»   »  ಸಾಚಾ ನಿರ್ಮಾಪಕ ಎಸ್.ಮಾದೇಶ್ ನಿಧನ

ಸಾಚಾ ನಿರ್ಮಾಪಕ ಎಸ್.ಮಾದೇಶ್ ನಿಧನ

Subscribe to Filmibeat Kannada
Saacha producer S Madesh passes away
ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ 'ಸಾಚಾ' ಚಿತ್ರದ ನಿರ್ಮಾಪಕ ಎಸ್.ಮಾದೇಶ್ (35) ಗುರುವಾರ ಸಂಜೆ 4.30ಕ್ಕೆ ನಿಧನರಾಗಿದ್ದಾರೆ. ಅವರು ಬೆಂಗಳೂರಿನ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾದೇಶರ ಪಾರ್ಥೀವ ಶರೀರವನ್ನುಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಅವರ ಮನೆಯ ಬಳಿ ಶುಕ್ರವಾರ ಇಡಲಾಗಿತ್ತು. ನಂತರ ಅಂತ್ಯಕ್ರಿಯೆಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಅವರ ದೇಹವನ್ನು ಕೊಂಡೊಯ್ಯಲಾಯಿತು.

ಅವರು ಮೂರು ವರ್ಷಗಳಿಂದ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದು ಅವರ ಮೂತ್ರಪಿಂಡಗಳು ಸಹ ವಿಫಲವಾಗಿದ್ದವು.ಕೆಲದಿನಗಳ ಹಿಂದಷ್ಟೇ ಮೆದುಳಿನ ಸ್ಟ್ರೋಕ್ ಆಗಿ ಚಿಕಿತ್ಸೆಗಾಗಿ ಮಾದೇಶ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿವರಾಜ್ ಕುಮಾರ್ ನಾಯಕ ನಟನಾಗಿ ಹೊಸ ಚಿತ್ರವನ್ನು ಮಾದೇಶ ಅವರು ನಿರ್ಮಿಸುವ ಯೋಜನೆಯೂ ಇತ್ತು. ಇದಕ್ಕಾಗಿ ಚಿತ್ರಕತೆ ಮತ್ತು ಸಾಹಿತ್ಯವನ್ನು ಹೃದಯಶಿವ ಅವದು ಸಿದ್ಧಪಡಿಸಿಕೊಂಡಿದ್ದರು.

ಎರಡು ಬಾರ್ ಮತ್ತು ರೆಸ್ಟೋರೆಂಟ್ ಒಂದನ್ನು ಮಾದೇಶ್ ಅವರು ಭೋಗ್ಯಕ್ಕೆ ಪಡೆದಿದ್ದು 'ಸಾಚಾ' ಚಿತ್ರದ ಮೂಲಕ ತಮ್ಮ ಸಹೋದರ ವಿಕ್ಕಿ ಅವರನ್ನು ಹೀರೋ ಮಾಡಲು ಹೊರಟಿದ್ದರು. ಸುಮಾರು 1.5 ಕೋಟಿ ರು.ಗಳನ್ನು ಸಾಚಾ ಚಿತ್ರಕ್ಕಾಗಿ ಹೂಡಿದ್ದಾರೆ. ಇನ್ನೇನು ಅವರ ಕನಸು ನನಸಾಯಿತು ಎನ್ನುವಷ್ಟರಲ್ಲಿ ವಿಧಿ ಅವರನ್ನು ಬಹಳಷ್ಟು ದೂರಕ್ಕೆ ಕರೆದೊಯ್ದು ಬಿಟ್ಟಿತು. ಚಿತ್ರ ತೆರೆಕಾಣುವ ಮುನ್ನವೇ ಅವರು ಕಣ್ಮುಚ್ಚಿರುವುದು ' ಸಾಚಾ' ಚಿತ್ರತಂಡವನ್ನು ನೋವಿನ ಮಡುವಿಗೆ ನೂಕಿದೆ.

ಸಾಚಾ ಚಿತ್ರವನ್ನು ರಾಜ್ ಎಂಬುವವರು ನಿರ್ದೇಶಿಸುತ್ತಿದ್ದು ಚಿತ್ರಕ್ಕೆ ಖ್ಯಾತ ಹಿಂದೂಸ್ತಾನಿ ಗಾಯಕ ಪರಮೇಶ್ವರ ಹೆಗಡೆ ಸಂಗೀತ ಸಂಯೋಜಿಸಿದ್ದರು. ಸಾಚಾ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ (ಡಿ.18, 2008)ಮಾದೇಶ್ ಅವರು ಲವಲವಿಕೆಯಿಂದ ಪಾಲ್ಗೊಂಡಿದ್ದರು. ಆದರೆ ಇಷ್ಟು ಬೇಗ ಅವರನ್ನು ವಿಧಿ ಕರೆದೊಯ್ಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada