»   » ಪಿ. ಶೇಷಾದ್ರಿಗೆ ಸತತ ಐದನೇ ರಾಷ್ಟ್ರ ಪ್ರಶಸ್ತಿ

ಪಿ. ಶೇಷಾದ್ರಿಗೆ ಸತತ ಐದನೇ ರಾಷ್ಟ್ರ ಪ್ರಶಸ್ತಿ

Posted By:
Subscribe to Filmibeat Kannada
Kannada director P Sheshadri
ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಪಿ. ಶೇಷಾದ್ರಿ ಅವರು ನಿರ್ದೇಶಿಸಿದ ಎಲ್ಲ ಐದು ಚಲನಚಿತ್ರಗಳಿಗೆ ಸತತವಾಗಿ ರಾಷ್ಟ್ರ ಪ್ರಶಸ್ತಿ ಪಡೆದು ವಿನೂತನ ದಾಖಲೆ ಸೃಷ್ಟಿಸಿದ್ದಾರೆ. ಪಿ.ಶೇಷಾದ್ರಿ ಅವರು ನಿರ್ದೇಶಿಸಿದ 'ವಿಮುಕ್ತಿ' ಚಲನಚಿತ್ರಕ್ಕೆ 2008ನೇ ಸಾಲಿನ ಅತ್ಯುತ್ತಮ ಪ್ರಾದೇಶಿಕ ಕನ್ನಡ ಚಿತ್ರ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಮುನ್ನುಡಿ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಂಡ ಶೇಷಾದ್ರಿ, 2001ರಲ್ಲಿ ಅವರು ಪ್ರಥಮ ಪ್ರಶಸ್ತಿ ಗಳಿಸಿದ್ದರು. ಅದಾದ ನಂತರ ಶೇಷಾದ್ರಿ ನಿರ್ದೇಶಿಸಿದ ಅತಿಥಿ (2002), ಬೇರು (2004) ಮತ್ತು ತುತ್ತೂರಿ (2007) ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಲಭ್ಯವಾಗಿತ್ತು. ಈಗ ಶೇಷಾದ್ರಿ ಮುಕುಟಕ್ಕೆ ವಿಮುಕ್ತಿ ಮೂಲಕ ಪ್ರಶಸ್ತಿಯ ಐದನೇ ಗರಿ ಸೇರಿಕೊಂಡಿದೆ.

ಜೀವನದ ಬಗ್ಗೆ ವಿಭಿನ್ನ ನೋಟ ಹೊಂದಿರುವ ಶೇಷಾದ್ರಿ, ತಮ್ಮ ಚಲನಚಿತ್ರಗಳಿಗೆ ಸದಾ ವಿಭಿನ್ನ-ಸೂಕ್ಷ್ಮ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ನೆರಳು-ಬೆಳಕಿನ ಮೂಲಕ ಆಟ ಆಡುವುದರಲ್ಲಿ ಸಿದ್ಧಹಸ್ತರು. ವಿಮುಕ್ತಿ ಕೂಡ ಅದಕ್ಕೆ ಹೊರತಾದ ಚಿತ್ರವಲ್ಲ. ಜಗದ್ವಿಖ್ಯಾತ ಮನೋವಿಶ್ಲೇಷಕ ಸಿಗ್ಮಂಡ್ ಫ್ರಾಯ್ಡ್ ಹೆಸರಿಟ್ಟ ಎಲೆಕ್ಟ್ರೊ ಕಾಂಪ್ಲೆಕ್ಸ್ ಎಂಬ ಮನೋವೈಜ್ಞಾನಿಕ ತುಮುಲವನ್ನು ಆಧರಿಸಿದ ಚಿತ್ರಕಥೆ ವಿಮುಕ್ತಿಯದ್ದು. ತಾಯಿಯ ಪ್ರೀತಿಯಿಂದ ವಂಚಿದಳಾದ ಮಹಿಳೆಯೊಬ್ಬಳು, ತಂದೆಯ ಮೇಲೆ ಅತಿಯಾದ ವ್ಯಾಮೋಹ ಇಟ್ಟುಕೊಂಡಿರುವ ಮಾನಸಿಕ ಅಸ್ಥಿಮಿತವೇ ಎಲೆಕ್ಟ್ರೋ ಕಾಂಪ್ಲೆಕ್ಸ್.

ಪ್ರಖ್ಯಾತ ಕಲಾವಿದ ಕೇಶವ ರಾವ್ ಅವರ ಪುತ್ರಿ ಮಾಧವಿ ಈ ಚಲನಚಿತ್ರದ ನಾಯಕಿ. ಬಾಲ್ಯದಲ್ಲಿ ತಾಯಿಯ ಪ್ರೀತಿಯಿಂದ ವಂಚಿತಳಾಗಿರುವ ಆಕೆ, ತಂದೆಯ ಪ್ರೀತಿಯಾಸರೆಯಡಿಯಲ್ಲಿಯೇ ಬೆಳೆದು ನಿಲ್ಲುತ್ತಾಳೆ. ಮದುವೆಯ ನಂತರ ಕೂಡ ತಂದೆಯ ಮೇಲೆ ಅತಿಯಾದ ವ್ಯಾಮೋಹ ಮುಂದುವರಿದ ಪರಿಣಾಮ, ಆಕೆಯ ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡುವ ಸಾಧ್ಯತೆಗಳು ಒಡಮೂಡುತ್ತವೆ. ಅದನ್ನು ಅರಿತ ಕೇಶವ ರಾವ್, ಮಗಳ ಜೀವನದಿಂದ ದೂರ ಸರಿಯುವ ನಿರ್ಧಾರಕ್ಕೆ ಬಂದು ಕಣ್ಮರೆಯಾಗಿ ಬಿಡುತ್ತಾರೆ.

ಹಲವಾರು ವರ್ಷಗಳ ಬಳಿಕ ಪತ್ರಿಕೆಯೊಂದರಲ್ಲಿ ಬಂದ ಲೇಖನವೊಂದರ ಮೂಲಕ ಆಕಸ್ಮಿಕವಾಗಿ ತಂದೆ ಕಾಶಿಯಲ್ಲಿ ಇರುವ ಅಂಶ ಆಕೆಯ ಅರಿವಿಗೆ ಬರುತ್ತದೆ. ತಂದೆಯನ್ನು ಹುಡುಕುತ್ತಾ ವಾರಣಾಸಿಗೆ ಸಾಗುವ ಆಕೆ, ಹುಡುಕಾಟದ ನಡುವೆಯೇ ಅಲ್ಲಿನ ವಿಚಿತ್ರ- ವಾಸ್ತವ ಲೋಕಕ್ಕೆ ತೆರೆದುಕೊಳ್ಳುತ್ತಾಳೆ. ಆ ಮೂಲಕ ತನ್ನನ್ನು ತಾನೇ ಹುಡುಕುತ್ತಾ ಸಾಗುವ ಆಕೆ ಬದುಕಿಗೆ ಬೇರೊಂದು ಅರ್ಥ ಕಂಡುಕೊಳ್ಳುವ ಮನೋಜ್ಞವಾದ ಚಿತ್ರವೇ ವಿಮುಕ್ತಿ. ಅತ್ಯಂತ ಕ್ಲಿಷ್ಟ ಚಿತ್ರಕಥೆ ಹೊಂದಿರುವ ವಿಮುಕ್ತಿಯನ್ನು ಸಿನಿಮಾ ಮಾಧ್ಯಮದಲ್ಲಿ ಒಂದು ಯಶಸ್ವಿ ಪ್ರಯೋಗವಾಗಿಸಿದವರು ಶೇಷಾದ್ರಿ. ಅವರ ಆ ಪ್ರಯತ್ನಕ್ಕೆ ಈಗ ರಾಷ್ಟ್ರ ಪ್ರಶಸ್ತಿಯ ಮೂಲಕ ಫಲ ದೊರಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada