»   » '2012' ಚಿತ್ರ ವೀಕ್ಷಿಸಿದ ಸಚಿವ ಶ್ರೀರಾಮುಲು

'2012' ಚಿತ್ರ ವೀಕ್ಷಿಸಿದ ಸಚಿವ ಶ್ರೀರಾಮುಲು

Posted By:
Subscribe to Filmibeat Kannada

ಆರೋಗ್ಯ ಸಚಿವ ಶ್ರೀರಾಮುಲು ಅವರ ಸಿನಿಮಾ ಶೋಕಿ ಮತ್ತೊಮ್ಮೆ ಸಾಬೀತಾಗಿದೆ. ಮಂಗಳವಾರ ಶ್ರೀರಾಮುಲು ಸೀದಾ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರಕ್ಕೆ ಬಂದು ಹಾಲಿವುಡ್ ಚಿತ್ರ 2012ನ್ನು ವೀಕ್ಷಿಸಿ ಸಂಭ್ರಮಿಸಿದರು. ಆರೋಗ್ಯ ಸಚಿವರು ತಡವಾಗಿ ಬಂದ ಕಾರಣ ಪ್ರದರ್ಶನ ಸಹ ಅರ್ಧಗಂಟೆ ತಡವಾಗಿ ಆರಂಭವಾಯಿತು!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಗದಗ ಜಿಲ್ಲೆಯ ನವಲಗುಂದದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀರಾಮುಲು ಅಲ್ಲಿಂದ ಸೀದಾ ಹುಬ್ಬಳ್ಳಿಗೆ ಬಂದರು. ಅವರು ಬರುವ ಹಿನ್ನೆಲೆಯಲ್ಲಿ ಅಪ್ಸರಾ ಚಿತ್ರಮಂದಿರಕ್ಕೆ ಪೊಲೀಸರ ಬಿಗಿ ಬಂದೋಬಸ್ತ್ ಸಹ ಒದಗಿಸಲಾಗಿತ್ತು. ಸಿನಿಮಾ ಮುಗಿಯುವುದಕ್ಕೂ 10 ನಿಮಿಷಗಳ ಮುನ್ನ ಚಿತ್ರಮಂದಿರದಿಂದ ಶ್ರೀರಾಮುಲು ಹೊರನಡೆದರು.

ಆದರೆ ಸಚಿವರು ಮಾಧ್ಯಮಗಳ ಕಣ್ತಪ್ಪಿಸಲು ಸಾಧ್ಯವಾಗಲಿಲ್ಲ. ಸಿನಿಮಾ ಹೇಗಿತ್ತು? ಎಂದು ಕೇಳಿದ ಮಾಧ್ಯಮ ಪ್ರತಿನಿಧಿಗಳಿಗೆ ಸಚಿವರ ಉತ್ತರಿಸಲಿಲ್ಲ. ಯಾವ ಪ್ರಶ್ನೆಗೂ ತುಟಿ ಬಿಚ್ಚದೆ ಶ್ರೀರಾಮುಲು ಹೊರಟೇ ಹೋದರು. ಈ ಹಿಂದೆಯೂ ನೆರೆ ಹಾವಳಿ ಸಮಸ್ಯೆಗಳನ್ನು ಮರೆತು ಗದಗ್ ನ ಶ್ರೀಕೃಷ್ಣ ಚಿತ್ರಮಂದಿರದಲ್ಲಿ ಮನಸಾರೆ ಚಿತ್ರ ವನ್ನು ಶ್ರೀರಾಮುಲು ನೋಡಿ ಆನಂದಿಸಿದ್ದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿದೆ. ಕಿಮ್ಸ್ ಆಸ್ಪತ್ರೆಯ ಕರ್ಮಕಾಂಡ ಹೇಳತೀರದು. ಆರೋಗ್ಯ ಸಚಿವರು ಅಲ್ಲಿಗೆ ಅನಿರೀಕ್ಷಿತ ಭೇಟಿ ಕೊಟ್ಟಿದ್ದರೆ ಪರಿಸ್ಥಿತಿ ಸುಧಾರಿಸುತ್ತಿತ್ತು ಎಂದು ಹುಬ್ಬಳ್ಳಿ ಜನ ಶ್ರೀರಾಮುಲು ಬಗ್ಗೆ ಬೇಸರಿಕೊಂಡಿದ್ದಾರೆ. ಆದರೆ ಶ್ರೀರಾಮುಲು ಮಾತ್ರ ಇದ್ಯಾವುದನ್ನೂ ತಲೆಗೆ ಹಚ್ಚಿಕೊಂಡಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada