»   »  ಲೋಕಸಭೆ ಚುನಾವಣೆಗೆ ತಾರೆಗಳ ಸಮರ

ಲೋಕಸಭೆ ಚುನಾವಣೆಗೆ ತಾರೆಗಳ ಸಮರ

Subscribe to Filmibeat Kannada
Kannada film stars in Lok Sabha arena
ಚಿತ್ರರಂಗಕ್ಕೂ ರಾಜಕೀಯಕ್ಕೂ ಹಾಲು ಸಕ್ಕರೆ ಸಂಬಂಧ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಕನ್ನಡ ಚಿತ್ರರಂಗದ ಹಲವಾರು ನಟರು ಮುಂದಾಗಿದ್ದಾರೆ. ಅವರಲ್ಲಿ ಪ್ರಮುಖವಾಗಿ ಸಾಯಿಕುಮಾರ್, ಅಶೋಕ್, ಸಿ ಪಿ ಯೋಗೀಶ್ವರ್, ಸುದೀಪ್, ನಿರ್ದೇಶಕ ಪ್ರೇಮ್ ಚುನಾವಣಾ ಅಕಾಡಕ್ಕೆ ಇಳಿಯುವ ಸಿದ್ಧತೆಯಲ್ಲಿದ್ದಾರೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಸಿ.ಪಾಟೀಲ್ ಮತ್ತು ಜಗ್ಗೇಶ್ ಮಾತ್ರ ಗೆದ್ದಿದ್ದರು. ನಂತರ ಜಗ್ಗೇಶ್ 'ಆಪರೇಷನ್ ಕಮಲ'ಕ್ಕೆ ಸಿಲುಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದರು. ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಯಿಕುಮಾರ್ ಸೋತಿದ್ದರು. ಈ ಬಾರಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ.

ನಿರ್ದೇಶಕ ಪ್ರೇಮ್ ಸಹ ರಾಜಕೀಯ ರಂಗ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಅವರನ್ನು ಕಾಂಗ್ರೆಸ್ ಪಕ್ಷ ಮಂಡ್ಯದಿಂದ ಸ್ಪರ್ಧಿಸಲು ಆಹ್ವಾನಿಸಿದೆ. ಆದರೆ ಪ್ರೇಮ್ ಮಾತ್ರ ಇನ್ನೂ ತಮ್ಮ ನಿರ್ಧಾರವನ್ನು ಪ್ರಕಟಿಸಿಲ್ಲ. ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಸಾಲದಕ್ಕೆ ಅಂಬರೀಶಣ್ಣ ಸಹ ಬೆಂಬಲ ನೀಡಿದ್ದಾರೆ. ಅವರ ಮಾತಿಗೆ ಬೆಲೆ ಕೊಡಬೇಕಾಗುತ್ತದೆ ಎನ್ನುತ್ತಾರೆ ಪ್ರೇಮ್.

ನಟ ಹಾಗೂ ಕನ್ನಡ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಅಶೋಕ್ ಬಹುಜನ ಸಮಾಜ ಪಕ್ಷದಿಂದ ತುಮಕೂರು ಲೋಕಸಭೆಗೆ ಸ್ಪರ್ಧಿಸಲಿದ್ದಾರೆ. ಬಿಜೆಪಿ ಟಿಕೆಟ್ ಪಡೆದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಿ ಪಿ ಯೋಗೇಶ್ವರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಟ ಸುದೀಪ್ ರನ್ನು ಕಣಕ್ಕಿಳಿಸುವ ಸಿದ್ಧತೆಯಲ್ಲಿ ಜೆಡಿಎಸ್ ಇದೆ. ಆದರೆ ಈ ಕುರಿತು ಸುದೀಪ್ ತುಟಿ ಬಿಚ್ಚಿಲ್ಲ.

ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿರುವ ಜಗ್ಗೇಶ್ ಈ ಸಲ ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತವಾಗಲಿದ್ದಾರೆ. ಹಾಗೆಯೇ ರೆಬಲ್ ಸ್ಟಾರ್ ಅಂಬರೀಶ್ ತಮ್ಮ ಮುಂದಿನ ರಾಜಕೀಯ ಹೆಜ್ಜೆಯನ್ನು ಮಾರ್ಚ್ 29ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಅನಂತನಾಗ್, ಶಶಿಕುಮಾರ್, ಜಯಂತಿ, ಅಶೋಕ್, ದೊಡ್ಡಣ್ಣ, ರಾಜೇಶ್, ದ್ವಾರಕೀಶ್, ಎಸ್ ಮಹೇಂದರ್, ರಾಮ ಕೃಷ್ಣ, ಸಂದೇಶ್ ನಾಗರಾಜ್ ಮತ್ತು ಉಮಾಶ್ರೀ ತಮ್ಮ ರಾಜಕೀಯ ಭವಿಷ್ಯವನ್ನು ಪರೀಕ್ಷಿಸಿಕೊಳ್ಳಲು ಬಂದರಾದರೂ ಅವರು ಗೆದ್ದಂತಹ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಏನೂ ಆಗಿಲ್ಲ.

ನಟರಾದ ವಿಷ್ಣುವರ್ಧನ್,ಲೀಲಾವತಿ, ಉಪೇಂದ್ರ, ಸುದೀಪ್, ರಮ್ಯಾ ಮತ್ತು ರಕ್ಷಿತಾ ಹೆಸರುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ರಾಜಕೀಯದಲ್ಲಿ ನಮಗೆ ಯಾವುದೇ ಆಸಕ್ತಿ ಇಲ್ಲ ಎಂದು ಇವರೆಲ್ಲಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಕೊನೆ ಹನಿ
ಕರ್ನಾಟಕದ ರಾಜಕೀಯ ವಲಯದಲ್ಲಿ ಮಿಂಚುವ ಸಾಮರ್ಥ್ಯ ಕೇವಲ ವರನಟ ರಾಜ್ ಕುಮಾರ್ ಅವರಿಗೆ ಮಾತ್ರ ಇತ್ತು. ಆದರೆ ಅವರು ರಾಜಕೀಯದಿಂದ ಬಹಳ ದೂರ ಉಳಿದರು. ಕನ್ನಡ ನೆಲ,ಜಲ, ಭಾಷೆಯ ವಿಚಾರ ಬಂದಾಗ ಡಾ.ರಾಜ್ ಮುಂದಿರುತ್ತಿದ್ದರು. ಇದನ್ನೇ ಅವರು ರಾಜಕೀಯ ಲಾಭವಾಗಿ ದುರುಪಯೋಗಪಡಿಸಿಕೊಳ್ಳಲಿಲ್ಲ. ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ಕಣಕ್ಕಿಳಿದಿದ್ದಾಗ ಜನತಾ ಪಕ್ಷ ಡಾ.ರಾಜ್ ರನ್ನು ಕಣಕ್ಕಿಳಿಸಲು ಸರ್ವ ಪ್ರಯತ್ನ ಮಾಡಿತ್ತು. ರಾಜ್ ಅದಕ್ಕೆ ಒಪ್ಪದ ಕಾರಣ ಅದು ಕನಸಾಗಿಯೇ ಉಳಿಯಿತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ತುಮಕೂರಿನಿಂದ ನಟ ಅಶೋಕ್ ಲೋಕಸಭೆಗೆ
ಚಿತ್ರನಟಿ ಡಾ.ಲೀಲಾವತಿ ಚುನಾವಣಾ ಕಣಕ್ಕೆ
ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಲೀಲಾವತಿ ಸ್ಪಷ್ಟನೆ
ಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada