For Quick Alerts
  ALLOW NOTIFICATIONS  
  For Daily Alerts

  ರಾಕ್ ಲೈನ್ ವರ್ಷದ ಧೀರ ನಿರ್ಮಾಪಕ

  By *ಜಯಂತಿ
  |

  ಯಾವಾಗಲೂ ವರ್ಷದ ಕೊನೆಯಲ್ಲಿ ಸಿನಿಮಾ ನಡೆದ ಹಾದಿ ಮೆಲುಕು ಹಾಕುವ 'ಇಯರ್ ಎಂಡರ್" ಬರೆಯುವುದು ರೂಢಿ. ಸಾಮಾನ್ಯವಾಗಿ ಹೀಗೆ ಬರೆಯಲು ಕೂತಾಗ ಅವಗಣನೆಗೆ ಗುರಿಯಾಗುವ ಪ್ರಮುಖನೆಂದರೆ ನಿರ್ಮಾಪಕ.

  ನಾಯಕ, ನಾಯಕಿ, ನಿರ್ದೇಶಕ, ಸಿನಿಮಾ ಈ ಅಂಶಗಳ ಯಶಸ್ಸು, ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡೇ ಪೋಸ್ಟ್‌ಮಾರ್ಟಂ ಮಾಡಿಬಿಡುವುದು ಮಾಮೂಲು. ಅಸಲಿಗೆ ಇಂದು ಸಂಕಷ್ಟದಲ್ಲಿರುವಾತ ನಿರ್ಮಾಪಕ. ಹೂಡಿದ ಹಣಕ್ಕೆ ಲೆಕ್ಕ, ಬುಕ್ಕಿಲ್ಲದೆ ಆದಾಗ ಆತ ಕಂಗಾಲಾಗುವುದು ಸಹಜ. ಈಗಂತೂ ಹಾಗೆ ಕಂಗಾಲಾಗಿರುವ ಮಟ್ಟ ಅಪಾಯಕಾರಿ ಸ್ಥಿತಿಯಲ್ಲಿದೆ ಎನ್ನಬಹುದು. ಅದಕ್ಕೇ ಹುಚ್ಚುಹುಚ್ಚಾಗಿ ನಿರ್ದೇಶಕರನ್ನು ನಿಯಂತ್ರಿಸುವ ಅಪ್ರಾಯೋಗಿಕ ನಿರ್ಧಾರಗಳನ್ನು ನಿರ್ಮಾಪಕರ ಸಂಘ ತೆಗೆದುಕೊಳ್ಳುತ್ತಿದೆ. ದೃಶ್ಯ ಮಾಧ್ಯಮದ ಸ್ವಾತಂತ್ರ್ಯ ಕಸಿದುಕೊಳ್ಳುವಂಥ ಬಾಲಿಶ ಫರ್ಮಾನುಗಳನ್ನು ಹೊರಡಿಸುತ್ತಿದೆ.

  ಸಾಮಾನ್ಯವಾಗಿ ಚಿತ್ರರಂಗದ ಬಿಕ್ಕಟ್ಟಿನ ಪ್ರಸಂಗಗಳು ಎದುರಾದಾಗಲೆಲ್ಲ ಒಂದು ಹೆಸರಂತೂ ಅಲ್ಲಿ ಚಾಲ್ತಿಯಲ್ಲಿರುತ್ತದೆ. ಆ ಹೆಸರೇ ರಾಕ್‌ಲೈನ್ ವೆಂಕಟೇಶ್. ಹೆಸರಿನ ಪಕ್ಕದಲ್ಲಿ ಧೀರ ಎಂಬ ಗುಣವಿಶೇಷಣವೂ ಇದೆ. ನಮ್ಮ ಇಯರ್‌ಎಂಡರ್ ಶುರುವಾಗಲಿರುವುದು ಅವರ ಹೆಸರಿನ ಪ್ರಸ್ತಾಪದ ಮೂಲಕ.

  ರಾಕ್‌ಲೈನ್ ನಿಸ್ಸಂಶಯವಾಗಿ ವರ್ಷದ ನಿರ್ಮಾಪಕ. ಫೆಬ್ರುವರಿಯಲ್ಲಿ 'ಜಂಗ್ಲಿ", ಜೂನ್‌ನಲ್ಲಿ 'ಯೋಧ", ಸೆಪ್ಟೆಂಬರ್‌ನಲ್ಲಿ 'ಮನಸಾರೆ" ತೆರೆಕಂಡವು. ಈ ಮೂರೂ ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಗೆದ್ದವು. ಇವುಗಳ ನಿರ್ಮಾಪಕ ರಾಕ್‌ಲೈನ್. ಬಿಡುಗಡೆಗೆ ಮೊದಲೇ ಹಾಡುಗಳ ಮೂಲಕ ಗೆದ್ದುಬಿಟ್ಟಿದ್ದ 'ಜಂಗ್ಲಿ" ಈಗ ಟಿವಿ ವಾಹಿನಿಯಲ್ಲಿ ಬಿಡಿಬಿಡಿ ದೃಶ್ಯಗಳಿಂದ ನೋಡಿಸಿಕೊಳ್ಳುತ್ತಿದೆ. 'ಇಂತಿ ನಿನ್ನ ಪ್ರೀತಿಯ" ಚಿತ್ರದಿಂದ ಹತಾಶರಾಗಿದ್ದ ಸೂರಿ ಜನರನ್ನು ಚಿತ್ರ ವಿಚಿತ್ರ ಸಂಭಾಷಣೆಗಳಿಂದ ನಗಿಸಲು ಯತ್ನಿಸಿರುವ ಸಿನಿಮಾ 'ಜಂಗ್ಲಿ". ಐಂದ್ರಿತಾ ರೇಗೆ ಚಿಮ್ಮುಹಲಗೆಯಾದ ಈ ಚಿತ್ರವನ್ನು ರಾಕ್‌ಲೈನ್ ಹೆಚ್ಚು ವಿತರಕರಿಗೆ ಮಾರಲಿಲ್ಲ. ತಾವೇ ಬಿಡುಗಡೆ ಮಾಡಿ ಎರಡೇ ವಾರಗಳಲ್ಲಿ ಲಾಭ ಎಣಿಸಿಬಿಟ್ಟರು.

  'ಯೋಧ" ಚಿತ್ರದ ಹಾಡುಗಳು ಸದ್ದು ಮಾಡಿರಲಿಲ್ಲ. ತಮಿಳಿನಲ್ಲಿ ಸುಮಾರಾಗಿ ಗೆದ್ದಿದ್ದ 'ಬೋಸ್" ಚಿತ್ರದ ರೀಮೇಕ್ ಹಕ್ಕನ್ನು ಎನ್‌ಕ್ಯಾಷ್ ಮಾಡಿಕೊಳ್ಳುವ ಉದ್ದೇಶದಿಂದಷ್ಟೆ ರಾಕ್‌ಲೈನ್ ಈ ಸಿನಿಮಾ ನಿರ್ಮಿಸಿದ್ದು. ದರ್ಶನ್ ಅವರನ್ನು ನಾಯಕನಾಗಿಸಿದ್ದು ಅವರ ಜಾಣತನಕ್ಕೆ ಉದಾಹರಣೆ. ಓಂಪ್ರಕಾಶ್ ರಾವ್ ಕೈಗೆ ಆಕ್ಷನ್, ಕಟ್ ಹೇಳುವ ಜವಾಬ್ದಾರಿ ಕೊಟ್ಟಿದ್ದು ಹಳೆಯ ಮಾತನ್ನು ಉಳಿಸಿಕೊಳ್ಳಲಿಕ್ಕೆ. ದರ್ಶನ್ ಇದ್ದ ಕಾರಣಕ್ಕೆ ಹಾಗೂ ನಾಯಕಿ ನಿಖಿತಾ ಮೈದೋರಿದ್ದಕ್ಕೆ ಚಿತ್ರ ಮೊದಲ ವಾರದಲ್ಲೇ ಒಂದೂಕಾಲು ಕೋಟಿ ಕಲೆಕ್ಷನ್ ಮಾಡಿತು. ಗಾಂಧಿನಗರದ ಆಯಕಟ್ಟಿನ ಜಾಗದ ಜನರ ಪ್ರಕಾರ 2009ರಲ್ಲಿ ವಿತರಕರೂ ಸೇರಿದಂತೆ ಎಲ್ಲರಿಗೂ ಹೆಚ್ಚು ಲಾಭ ತಂದ ಚಿತ್ರ 'ಯೋಧ". ಸಿನಿಮಾ ಐವತ್ತು ದಿನ ಓಡುವುದಷ್ಟೆ ಮುಖ್ಯವಲ್ಲ, ಬಿಸಿನೆಸ್ ಮಾಡುವುದು ಮುಖ್ಯ ಎಂಬ ಪಾಲಿಸಿಗೆ ಇದು ಒಳ್ಳೆಯ ಉದಾಹರಣೆ.

  ರಾಕ್‌ಲೈನ್ ಬುದ್ಧಿವಂತಿಕೆಯ ಇನ್ನೊಂದು ಮುಖಕ್ಕೆ ಕನ್ನಡಿ ಹಿಡಿದದ್ದು 'ಮನಸಾರೆ'. ಇದು ಅಕ್ಷರಶಃ ನಿರ್ದೇಶಕರ ಸಿನಿಮಾ. ಯೋಗರಾಜ್ ಭಟ್ ಪ್ರತಿಭೆಯ ಮೇಲೆ ನಿಂತಂಥ ಚಿತ್ರ. ಹೆಚ್ಚು ಹಣ ಹರಿಸದೆ, ಜಾಗರೂಕತೆಯಿಂದ ಮಾಡಿದ ಚಿತ್ರ. ಈಗಲೂ ಚಿತ್ರಮಂದಿರಗಳಲ್ಲಿ ಓಡುತ್ತಾ, ನೂರರ ಗಡಿ ದಾಡುವ ಸ್ಥಿತಿಯಲ್ಲಿರುವ 'ಮನಸಾರೆ' ನಿಧನಿಧಾನವಾಗಿ ರಾಕ್‌ಲೈನ್ ಜೇಬಿಗೆ ಹಣ ತುಂಬಿಸಿದೆ. ಜೊತೆಗೆ ಒಳ್ಳೆಯ ಹೆಸರನ್ನೂ ತಂದುಕೊಟ್ಟಿದೆ.

  ಎರಡು ಸ್ವಮೇಕ್, ಒಂದು ರೀಮೇಕ್ ಚಿತ್ರಗಳ ಮೂಲಕ ವರ್ಷದುದ್ದಕ್ಕೂ ನಗುವನ್ನೇ ಕಂಡ ರಾಕ್‌ಲೈನ್ ನಿಜಕ್ಕೂ ಬುದ್ಧಿವಂತ. ಮುಂದೆ ಅವರು ಉಪೇಂದ್ರ ನಿರ್ದೇಶಿಸಲಿರುವ 'ಸೂಪರ' ಮಾರ್ಕಿನ ಚಿತ್ರಕ್ಕೆ ಬಂಡವಾಳ ಹೂಡಲು ತುದಿಗಾಲಲ್ಲಿ ನಿಂತಿದ್ದಾರೆ.

  ಬೆಂಗಳೂರಿನ ಹೊರವಲಯದ ನೆಲಗದರನಹಳ್ಳಿ ಹತ್ತಿರ ಸೈಟುಗಳಿಗೆ ಬೆಲೆಯೇ ಇಲ್ಲದಿದ್ದಾಗ ಲೇಔಟ್ ಮಾಡಿ, ಚಿತ್ರೋದ್ಯಮದವರಿಗೇ ಸೈಟುಗಳನ್ನು ಕೊಂಡುಕೊಳ್ಳಲು ಪ್ರೇರೇಪಿಸಿದ ರಾಕ್‌ಲೈನ್ ಮೊದಲಿನಿಂದಲೂ ವ್ಯವಹಾರಚತುರ. ದೂರದೃಷ್ಟಿಯುಳ್ಳ ಆಸಾಮಿ. ಸ್ಟುಡಿಯೋಗಳಿಗಾಗಿ ಚಿತ್ರೋದ್ಯಮದ ಮಂದಿ ಪರದಾಡುತ್ತಿದ್ದಾಗ ಒಂದು ಸ್ಟುಡಿಯೋ ಕಟ್ಟಿಸಿದರು. ತೀರಾ ಕಷ್ಟದಲ್ಲಿದ್ದವರಿಗೆ ಉಪಯೋಗಿಸಿಕೊಳ್ಳಿ ಅಂತ ಉದಾರವಾಗಿ ಹೇಳಿದ್ದೂ ಇದೆ.

  ಕಳೆದ ವರ್ಷ ಗಣೇಶ ಪ್ರತಿಭೆ ನೆಚ್ಚಿಕೊಂಡು 'ಬೊಂಬಾಟ್" ನಿರ್ಮಿಸಿ ಕೈಸುಟ್ಟುಕೊಂಡಿದ್ದ ರಾಕ್‌ಲೈನ್ ಈ ಸಲ ಥೈಲಿ ತುಂಬಿಕೊಂಡಿದ್ದಾರೆ. ರೀಮೇಕ್ ಪ್ರೀತಿಯಿಂದ ಹೊರಬರುವ ಉತ್ಸಾಹವನ್ನೂ ತೋರಿಸಿದ್ದಾರೆ. ಮಾಧ್ಯಮಮಿತ್ರರನ್ನು ಒಂದಿಷ್ಟು ದಿನ ದೂರವಿಟ್ಟರೂ ರಾಕ್‌ಲೈನ್ ಕನ್ನಡದ ಹೆಮ್ಮೆಯ ನಿರ್ಮಾಪಕ ಎಂಬುದನ್ನು ಅಲ್ಲಗಳೆಯಲಾಗದು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X