»   »  ನಟ ಭರತ್ ಭಾಗವತರ್ ದಿವಂಗತ

ನಟ ಭರತ್ ಭಾಗವತರ್ ದಿವಂಗತ

Posted By:
Subscribe to Filmibeat Kannada
bharat bhagavathar
ಬೆಂಗಳೂರು, ಜ.25: ಚಲನಚಿತ್ರ ಹಾಗೂ ಕಿರುತೆರೆಯ ನಟ ಭರತ್ ಭಾಗವತರ್ (50) ಶನಿವಾರ ಸಂಜೆ 6 ಗಂಟೆ ಸುಮಾರಿಗೆ ನಿಧನರಾದರು. ಹೆಸರಾಂತ ನಟ, ಗಾಯಕ, ನಿರ್ಮಾಪಕ ಹಾಗೂ ನಿರ್ದೇಶಕ ಹೊನ್ನಪ್ಪ ಭಾಗವತರ್  ಅವರ ಪುತ್ರರಾಗಿದ್ದ ಭರತ್ ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ. ಇವರು ಜಿವಿ ಅಯ್ಯರ್ ನಿರ್ದೇಶನದ 'ಹಂಸಗೀತೆ' ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಿದ್ದಲಿಂಗಯ್ಯ ಅವರ ನಿರ್ದೇಶನದ 'ಹೇಮಾವತಿ' ಚಿತ್ರದಲ್ಲಿ ಯುವನಟರಾಗಿ ಕಾಣಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

'ಋಣಮುಕ್ತಳು' .'ಬಿಡುಗಡೆಯ ಬೇಡಿ','ಬಂಗಾರದ ಕಳಶ', 'ಪ್ರಚಂಡರಾವಣ' ಇವರ ಅಭಿನಯದ ಪ್ರಮುಖ ಚಿತ್ರಗಳು. ಇತ್ತೀಚೆಗೆ ಬಿಡುಗಡೆಯಾದ 'ಕೆಂಪ' ಚಿತ್ರದಲ್ಲೂ ನಟಿಸಿದ್ದಾರೆ.

'ಪ್ರಚಂಡ ರಾವಣ' ಚಿತ್ರದಲ್ಲಿ ಆಂಜನೇಯನ ಪಾತ್ರವಹಿಸಿ, ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದ ಭರತ್ ಅವರು, ಟಿಎನ್ ಸೀತಾರಾಂ ಅವರ ನಿರ್ದೇಶನ 'ಮಾಯಾಮೃಗ' ಸೇರಿದಂತೆ 'ಬಿದಿಗೆ ಚಂದ್ರಮ', 'ಮನೆಯೊಂದು ಮೂರು ಬಾಗಿಲು', 'ಮಹಾಯಾನ', 'ಅಗ್ನಿಶಿಖೆ' ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 30 ವರ್ಷಗಳ ಕಾಲ ಕಲಾ ಜೀವನ ಸವೆಸಿದ್ದರು. ಭರತ್ ಕುಟುಂಬದ ಕಲಾಸೇವೆಯನ್ನು ಅವರ ಪುತ್ರಿಯರಾದ ಲಕ್ಷ್ಮಿಶ್ರೀ ಹಾಗೂ ಮೇಘಶ್ರೀ ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ.

(ದಟ್ಸ್ ಕನ್ನಡ ಸಿನಿಸಂತಾಪ)
ಖ್ಯಾತ ರಂಗ ನಿರ್ದೇಶಕ ಬಾಲಕೃಷ್ಣ ಪೈ ನಿಧನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada