For Quick Alerts
  ALLOW NOTIFICATIONS  
  For Daily Alerts

  ಕೀಬೋರ್ಡ್ ಪ್ರೋಗ್ರಾಮಿಂಗ್ ಗಾರುಡಿಗ ಗೌತಮ್

  By Prasad
  |

  ಗೌತಮ್ ಶ್ರೀವತ್ಸ, ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸ್ವತಂತ್ರವಾಗಿ ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಸಂಗೀತ ತಂತ್ರಮಾಂತ್ರಿಕ. ಏಪ್ರಿಲ್ 2ರಂದು ಬಿಡುಗಡೆಯಾಗುತ್ತಿರುವ ಕುಮಾರ್ ಗೋವಿಂದ್ ನಿರ್ಮಾಣ ಮತ್ತು ನಿರ್ದೇಶನದ 'ಸತ್ಯ' ಚಿತ್ರದ ಸಂಗೀತ ನಿರ್ದೇಶಕ. ಕೀಬೋರ್ಡ್ ಪ್ರೋಗ್ರಾಮಿಂಗ್ ಎಂಬ ಹೊಸ ಪರಿಕಲ್ಪನೆಯಿಂದ ಸಂಗೀತ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡಿರುವ ಕಿರಿಯ ವಯಸ್ಸಿನ ಹೊಸಪ್ರತಿಭೆಯೊಂದಿಗೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ.

  * ಪ್ರಸಾದ ನಾಯಿಕ

  ಈ ಕಂಪ್ಯೂಟರ್ ಯುಗದಲ್ಲಿ ತಂತ್ರಜ್ಞಾನದ ಸಹಾಯದೊಂದಿಗೆ ಕಾಲನ ಓಟದ ಜೊತೆಗೆ ಸ್ಪರ್ಧೆಗೆ ನಿಂತವನು ಮಾತ್ರ ಇಲ್ಲಿ ಗೆಲ್ಲಲು ಸಾಧ್ಯ. ಸಂಗೀತ ಜ್ಞಾನ, ಸಪ್ತಸ್ವರಗಳ ಬಗ್ಗೆ ಪ್ರೀತಿ, ಒಂದು ಕಂಪ್ಯೂಟರ್, ಅದರಲ್ಲಿ ಅಳವಡಿಸಲಾದ ತಂತ್ರಾಂಶ, ಕೀಬೋರ್ಡ್ ಪ್ರೋಗ್ರಾಮಿಂಗ್ ನೀಡುವ ಸಾವಿರಾರು ಟ್ಯೂನ್ ಗಳನ್ನು ಬಳಸಿಕೊಳ್ಳುವ ಚಾಣಾಕ್ಷತನ, ಪ್ರಯೋಗಶೀಲತೆ ಮತ್ತು ಸೃಜನಶೀಲತೆ ಮೈಗೂಡಿಸಿಕೊಂಡ ಏಕಲವ್ಯ ಗೌತಮ್ ಶ್ರೀವತ್ಸ.

  ಕೀಬೋರ್ಡ್ ಪ್ರೋಗ್ರಾಮಿಂಗ್ ನಲ್ಲಿ ಕೃಷಿ ಮಾಡುತ್ತಿರುವ ಐದಾರು ಕೀಬೋರ್ಡ್ ಪ್ರೋಗ್ರಾಮರುಗಳು ಮಾತ್ರ ಕರ್ನಾಟಕದಲ್ಲಿದ್ದಾರೆ. ಅವರಲ್ಲಿ ಗೌತಮ್ ಕೂಡ ಒಬ್ಬ. ದಶಕಗಳ ಹಿಂದೆ ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ ರೋಜಾ ಚಿತ್ರದ ಸಂಗೀತ ಇನ್ನೊಮ್ಮೆ ಕೇಳಿನೋಡಿ. ಕೀಬೋರ್ಡ್ ಪ್ರೋಗ್ರಾಮಿಂಗ್ ಬಳಸಿಯೇ ನೀಡಿದ ಸಂಗೀತ ಇಂದಿಗೂ, ಎಂದಿಗೂ ಕಿವಿಯಲ್ಲಿ ಗುಂಗಿಡುತ್ತಿರುತ್ತದೆ. ಎಆರ್ ರೆಹಮಾನ್ ಅವರನ್ನು 'ಫಾದರ್ ಆಫ್ ಕೀಬೋರ್ಡ್ ಪ್ರೋಗ್ರಾಮಿಂಗ್' ಅಂದರೆ ಅತಿಶಯೋಕ್ತಿಯಾಗಲಾರದು ಅಂತಾರೆ ಗೌತಮ್. ರೆಹಮಾನ್ ನಡೆದ ದಾರಿಯಲ್ಲೇ ಸಾಗಿರುವ ಗೌತಮ್ ತಮ್ಮದೇ ವಿಭಿನ್ನ ಶೈಲಿಯಲ್ಲಿ ಸಾಗುತ್ತಿದ್ದಾರೆ.

  ಏನಿದು ಕೀಬೋರ್ಡ್ ಪ್ರೋಗ್ರಾಮಿಂಗ್?

  ಸರಿಗಮಪದನಿ ಎಂಬ ಸಪ್ತಸ್ವರಗಳೇ ಸಂಗೀತಕ್ಕೆ ಬುನಾದಿ. ಇವುಗಳ ಪರ್ಮ್ಯುಟೇಶನ್ ಮತ್ತು ಕಾಂಬಿನೇಶನ್ ಗಳಲ್ಲಿ ಸಾವಿರಾರು ಟ್ಯೂನ್ ಗಳನ್ನು ಸೃಷ್ಟಿಸಲಾಗಿದೆ. ಇವೆಲ್ಲಕ್ಕೂ ಮೀರಿದ, ಅತ್ಯಂತ ನಿಖರತೆಯುಳ್ಳ, ವಿಭಿನ್ನವಾಗಿ ಧ್ವನಿಸುವ ಮತ್ತು ಗುಣಮಟ್ಟದಲ್ಲಿ ಶ್ರೇಷ್ಠವಾಗಿರುವ ಸಂಗೀತ ಸಂಯೋಜಿಸಲು ಕೀಬೋರ್ಡ್ ಪ್ರೋಗ್ರಾಮಿಂಗ್ ಗೆ ಸಾಧ್ಯ. ತಬಲಾ, ಕೊಳಲು, ವೀಣೆ, ಡ್ರಮ್, ಕಂಜೀರ, ಘಟ, ಡೋಲಕ್, ಗಿಟಾರ್, ವಯೋಲಿನ್, ಶಹನಾಯಿ ಮುಂತಾದ ಎಲ್ಲಾ ಸಂಗೀತ ವಾದ್ಯಗಳ ಧ್ವನಿಯನ್ನು ಸೃಷ್ಟಿಸುವ ಸಕಲಕಲಾವಲ್ಲಭ ಕೀಬೋರ್ಡ್ ಪ್ರೋಗ್ರಾಮಿಂಗ್. ಇವುಗಳನ್ನು ಅತ್ಯಂತ ಕ್ರಿಯಾಶೀಲವಾಗಿ ಬಳಸಿಕೊಳ್ಳುವ ಚಾಣಾಕ್ಷತನ ಸಂಗೀತ ನಿರ್ದೇಶಕನಿಗಿರಬೇಕು. ತಂತ್ರಾಂಶದಲ್ಲಿ ಅಳವಡಿಸಲಾದ 200ರಿಂದ 300 ಪ್ಲಗಿನ್ ಗಳ ಸಹಾಯದಿಂದ ಕೀಬೋರ್ಡ್ ಮೇಲೆ ಬೆರಳಾಡಿಸದೆಯೇ ಮಾಂತ್ರಿಕಸದೃಶ ಮುನ್ನಲೆ ಮತ್ತು ಹಿನ್ನೆಲೆ ಸಂಗೀತವನ್ನು ಸೃಷ್ಟಿಸಬಹುದು ಅಂತಾರೆ ಕನ್ನಡ ಚಿತ್ರರಂಗದ ಬಗ್ಗೆ ಭರ್ತಿ ಕನಸು ಕಂಡಿರುವ ಯುವ ನಿರ್ದೇಶಕ ಗೌತಮ್ ಶ್ರೀವತ್ಸ.

  ಈ ಹೊಸ ಪರಿಕಲ್ಪನೆ ಗರಿಗೆದರಿದರೆ ಪಕ್ಕವಾದ್ಯ ನುಡಿಸುವವರಿಗೆ ಹೆಚ್ಚಿನ ಅವಕಾಶ ಲಭಿಸಲಾರದು ಎಂಬ ಸತ್ಯಾಂಶವನ್ನು ಒಪ್ಪಿಕೊಳ್ಳುತ್ತಾರೆ ಗೌತಮ್. ಕೀಬೋರ್ಡ್ ಪ್ರೋಗ್ರಾಮಿಂಗ್ ಸೃಷ್ಟಿಸಿದ ಸಂಗೀತದ ತಾಳಕ್ಕೆ ತಕ್ಕಂತೆ ಹಾಡಬೇಕಿರುವುದು ಗಾಯಕರಿಗೆ ಕೂಡ ಸವಾಲಿನ ಕೆಲಸ. ಗೆಲ್ಲಬೇಕಿದ್ದರೆ ಸ್ಪರ್ಧೆಗೆ ನಿಲ್ಲಲೇಬೇಕು. ಜೋ ಜೀತಾ ವಹಿ ಸಿಕಂದರ್.

  ಕನಸುಗಳು ನೂರಾರು

  ಸಂಗೀತ ಕ್ಷೇತ್ರದಲ್ಲಿ ಕಾಲಿರಿಸಬಯಸುವ ಯುವ ಪ್ರತಿಭೆಗಳು ಕೀಬೋರ್ಡ್ ಪ್ರೋಗ್ರಾಮಿಂಗ್ ಗೆ ತೆರೆದುಕೊಳ್ಳಬೇಕು. ಕನ್ನಡ ಚಿತ್ರ ಸಂಗೀತ ಉಳಿದೆಲ್ಲ ಭಾಷೆಗಳೊಂದಿಗೆ ಸ್ಪರ್ಧಿಸಿ ಗೆಲ್ಲಬೇಕು. ಕನ್ನಡಿಗರಿಗೇ ಹೆಚ್ಚೆಚ್ಚು ಅವಕಾಶ ದೊರೆಯಬೇಕು ಎಂಬ ಕನಸು ಹೊತ್ತಿದ್ದಾರೆ ಸುಂದರ ಕಂಗಳ ಕನಸುಗಾರ. ಕೀಬೋರ್ಡ್ ಪ್ರೋಗ್ರಾಮಿಂಗ್ ಕಲಿಯಲು ಅಥವಾ ಕಲಿಸಲು ಭಾರತದಲ್ಲಿ ಯಾವುದೇ ಸಂಗೀತ ಶಾಲೆಗಳಿಲ್ಲ. ಸ್ವಪ್ರಯತ್ನದಿಂದ ಮಾತ್ರ ಇದನ್ನು ಕರಗತ ಮಾಡಿಕೊಳ್ಳಲು ಸಾಧ್ಯ. ಅದನ್ನು ಸತತ ಪ್ರಯತ್ನ ಮತ್ತು ಪ್ರಯೋಗಶೀಲತೆಯಿಂದ ತಮ್ಮದಾಗಿಸಿಕೊಂಡಿದ್ದಾರೆ ಗೌತಮ್.

  ಕೀಬೋರ್ಡ್ ಪ್ರೋಗ್ರಾಮಿಂಗ್ ಕಲಿಸಲೆಂದೇ ಒಂದು ಸಂಸ್ಥೆಯನ್ನು ಹುಟ್ಟುಹಾಕಬೇಕು. ಇದರ ಜ್ಞಾನ ಕನ್ನಡ ನಾಡಿನಲ್ಲಿ ಪಸರಿಸಬೇಕು, ಹೊಸ ಕನ್ನಡ ಪ್ರತಿಭೆಗಳು ಹೊರಹೊಮ್ಮಬೇಕು ಎಂಬ ಹಿಮಾಲಯದೆತ್ತರದ ಕನಸು ಗೌತಮ್ ತುಂಬಿಕೊಂಡಿದ್ದಾರೆ. ಅದನ್ನು ಸಾಕಾರಗೊಳಿಸಲು ಹಣದ ಮತ್ತು ಸರಕಾರದ ಸಹಾಯ ತೀರ ಅಗತ್ಯ ಅಂತಾರೆ 26ರ ಹರೆಯದ ಗೌತಮ್. ಇಷ್ಟು ಮಾತ್ರವಲ್ಲ ಕನ್ನಡ ಚಿತ್ರ ನಿರ್ಮಾಪಕರಿಗೆ ಹೊಸ ಸಂಗೀತದ ಸಾಧ್ಯಾಸಾಧ್ಯತೆಗಳ ಬಗ್ಗೆ ತಿಳಿವಳಿಕೆ ನೀಡಿದರೆ ಜೊಳ್ಳುಗಳನ್ನು ನಿವಾರಿಸಲು ಸಾಧ್ಯ ಮತ್ತು ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಸಂಗೀತ ನೀಡಲು ಸಾಧ್ಯ ಅನ್ನುವುದು ಅವರ ಅಭಿಪ್ರಾಯ.

  ರಾಜ್ಯೋತ್ಸವಕ್ಕೆ ಕನ್ನಡ ನಾಡಿನ ಎಲ್ಲ ಮಹನೀಯರನ್ನು ಸ್ಮರಿಸುವಂತಹ ಕನ್ನಡ ಸಂಗೀತ ಆಲ್ಬಂ ಅನ್ನು ಕನ್ನಡ ಜನತೆಗೆ ಅರ್ಪಿಸಬೇಕೆಂಬ ಮಹತ್ವಾಕಾಂಕ್ಷೆ ಗೌತಮ್ ಹೊಂದಿದ್ದಾರೆ. ವಿಶಿಷ್ಟಬಗೆಯ ಕಲಾವಿದನ ಕನಸುಗಳೆಲ್ಲ ಸಾಕಾರವಾಗಲಿ. ಅದಕ್ಕೆ ತಕ್ಕ ಪ್ರೋತ್ಸಾಹವೂ ಸಿಗಲಿ.

  ಮುಂದಿರುವ ಸವಾಲುಗಳು

  ಸೂಕ್ತ ಪ್ರೋತ್ಸಾಹದ ಕೊರತೆಯಿಂದಾಗಿ ಕನ್ನಡ ನಾಡಿನಲ್ಲಿ ಯುವ ಸಂಗೀತ ಕಲಾವಿದರಲ್ಲಿ ಇರುವ ಜ್ಞಾನ ಉನ್ನತಮಟ್ಟದಲ್ಲಿಲ್ಲ. ಸೃಜನಶೀಲತೆ ಮತ್ತು ಪ್ರಚಾರದ ಕೊರತೆಯಿಂದಾಗಿ ದೊಡ್ಡ ಕಂದರ ಸೃಷ್ಟಿಯಾಗಿದೆ. ಸಂಗೀತ ಹಿಟ್ ಆದರೆ ನೆಲ ಗಟ್ಟಿ, ಇಲ್ಲದಿದ್ದರೆ ಜುಟ್ಟಿಗೆ ಮಲ್ಲಿಗೆ ಹೂವೂ ಇಲ್ಲ ಎಂಬಂತಹ ಅನಿಶ್ಚಿತ ಪರಿಸ್ಥಿತಿ ಎದುರಾಗಿದೆ. ನಮ್ಮಲ್ಲಿನ ಕೊರತೆಗಳ ದುರ್ಲಾಭವನ್ನು ಅನ್ಯಭಾಷಿಗರು ಬಾಚಿಕೊಳ್ಳುತ್ತಿದ್ದಾರೆ. ಶ್ರಮ ನಮ್ಮದು ಫಲ ಮಾತ್ರ ಅವರದು! ಯೂನಿಯನ್ ಕೂಡ ಇಲ್ಲದಿರುವುದು ಇದಕ್ಕೆ ಕಾರಣ ಎಂಬ ಗೌತಮ್ ಮಾತು ಸತ್ಯ.

  ಗೌತಮ್ ಬಗ್ಗೆ

  ಆರರ ವಯದಲ್ಲಿ ಸಂಗೀತಕ್ಕೆ ಮನಸು ತೆರೆದುಕೊಂಡ ಗೌತಮ್ 11ರ ಬಾಲಕನಿದ್ದಾಗಲೇ ಹಂಸಲೇಖ ಎದುರಿಗೆ ಕೀಬೋರ್ಡ್ ನುಡಿಸಿ ಭೇಷ್ ಅನ್ನಿಸಿಕೊಂಡ ಚತುರ. ಗೌತಮ್ ಅವರ ಇಡೀ ಕುಟುಂಬವೇ ಕಲಾಮಯ. ಅಜ್ಜಿ, ಸೋದರತ್ತೆ, ಚಿಕ್ಕಮ್ಮ, ಚಿಕ್ಕಪ್ಪ, ತಂದೆ, ತಮ್ಮ ಎಲ್ಲರೂ ಕಲಾದಾಸರೆ. ತಂದೆ ಮೈಸೂರು ಮೋಹನ್ ಅವರು ಅರ್ಧಶತಕದಿಂದ ವಾದ್ಯ ಕಲಾವಿದರಾಗಿ ಕಲಾಸೇವೆ ಸಲ್ಲಿಸುತ್ತಿದ್ದಾರೆ. ಕೈತುಂಬ ಸಂಬಳ ತರುತ್ತಿದ್ದ ಸಾಫ್ಟ್ ವೇರ್ ಕೆಲಸಕ್ಕೆ ದೊಡ್ಡ ಸಲಾಂ ಹೊಡೆದು ಸಂಗೀತ ಕ್ಷೇತ್ರಕ್ಕೆ ಶಿರಸಾಷ್ಟಾಂಗ ನಮಸ್ಕಾರ ಹಾಕುವಂತೆ ಮಾಡಿದ್ದು ಸಂಗೀತದ ಸೆಳೆತವೆ.

  ಚಿತ್ರರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೊದಲು ಖ್ಯಾತ ವಯೋಲಿನ್ ವಾದಕ ಡಾ. ಎಲ್ ಸುಬ್ರಹ್ಮಣ್ಯಂ, ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ, ಸುಗಮ ಸಂಗೀತ ಗಾರುಡಿಗ ದಿ. ಸಿ ಅಶ್ವತ್ಥ್, ಚಲನಚಿತ್ರ ಸಂಗೀತ ನಿರ್ದೇಶಕರಾದ ವಿ ಮನೋಹರ್ ಮತ್ತು ಗುರುಗಳಾದ ಹಂಸಲೇಖ ಅವರ ಗರಡಿಯಲ್ಲಿ ಕೀಬೋರ್ಡ್ ವಾದಕರಾಗಿ ಗೌತಮ್ ಪಳಗಿದ್ದಾರೆ. ಸತ್ಯ ಚಿತ್ರದಲ್ಲಿ ಒಂದು ಹಾಡು ಹಾಡಿರುವ ಸ್ಫುರದ್ರುಪಿ ಗೌತಮ್ ನಟನೆಯಲ್ಲಿ ಕೂಡ ಒಂದು ಕೈ ನೋಡೇ ಬಿಡುವ ಎನ್ನುವ ತವಕದಲ್ಲಿದ್ದಾರೆ.

  ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ವಿನೋದ್ ರಾಜ್ ಅಭಿನಯದ 'ಶುಕ್ರ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಶುಕ್ರಕ್ಕೂ ಮೊದಲು ಗೌತಮ್ ಗೆ ಶುಕ್ರದೆಸೆ ಆರಂಭವಾಗಿದ್ದು ಸತ್ಯ ಚಿತ್ರದಿಂದ. ಆರೇಳು ವರ್ಷಗಳ ಹಿಂದೆ ಸಂಗೀತ ನಿರ್ದೇಶನ ಮಾಡಿದ ಸತ್ಯ ಈಗ ಬಿಡುಗಡೆಯಾಗುತ್ತಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X