»   »  ಹೃದಯ ಶ್ರೀಮಂತಿಕೆಯುಳ್ಳ ಅಣ್ಣನಾಗಿ ಶಿವಣ್ಣ!

ಹೃದಯ ಶ್ರೀಮಂತಿಕೆಯುಳ್ಳ ಅಣ್ಣನಾಗಿ ಶಿವಣ್ಣ!

Posted By:
Subscribe to Filmibeat Kannada

ತಂಗಿ ಸೆಂಟಿಮೆಂಟ್ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಓಂ ಸಾಯಿಪ್ರಕಾಶ್ ಅವರದೇ ಮೊದಲ ಸ್ಥಾನ. ಈ ಹಿಂದೆ ಶಿವರಾಜ್‌ಕುಮಾರ್ ಜತೆಯಲ್ಲಿ 'ತವರಿಗೆ ಬಾ ತಂಗಿ', 'ಅಣ್ಣ-ತಂಗಿ'ಯಂಥ ಯಶಸ್ವಿ ಚಿತ್ರಗಳನ್ನು ಕೊಟ್ಟ ಸಾಯಿಪ್ರಕಾಶ್ ಇದೀಗ ತಾವೇ ನಿರ್ಮಾಪಕರಾಗಿ ನಿರ್ದೇಶಿಸುತ್ತಿರುವ 'ದೇವರು ಕೊಟ್ಟ ತಂಗಿ' ಚಿತ್ರದಲ್ಲಿ ಶಿವರಾಜ್‌ಕುಮಾರ್ ತಂಗಿಯಾಗಿ ರಾಧಿಕಾ ಬದಲು ಮೀರಾ ಜಾಸ್ಮಿನ್ ಅಭಿನಯಿಸುತ್ತಿದ್ದಾರೆ.

ಇದೂ ಕೂಡ ಸಂಪೂರ್ಣ ಗ್ರಾಮೀಣ ಕಥೆಯಾಗಿದ್ದು, ತಾನು ಕೆಲಸ ಮಾಡುತ್ತಿರುವ ಮಾಲೀಕನ ಮಗನ ಜೊತೆ ಇಷ್ಟವಿಲ್ಲದಿದ್ದರೂ ತನ್ನ ತಂಗಿಯನ್ನು ಮದುವೆ ಮಾಡಿಕೊಟ್ಟು, ಅಲ್ಲಿ ತಂಗಿಯ ಜೀವನದ ಏರುಪೇರುಗಳನ್ನು ಸರಿಪಡಿಸಲು ಹೋರಾಡುವ ಅಣ್ಣನಾಗಿ ಶಿವರಾಜ್‌ಕುಮಾರ್ ಮನೋಜ್ಞ ಅಭಿನಯ ನೀಡುತ್ತಿದ್ದಾರೆ. ಬಡವರಾದರೂ ಹೃದಯ ಶ್ರೀಮಂತಿಕೆಯುಳ್ಳ ಈ ಅಣ್ಣ-ತಂಗಿಯರ ಕಥೆಗೆ ಮನಮಿಡಿಯುವಂಥ ಸಂಭಾಷಣೆಗಳನ್ನು ಬಿ.ಎ. ಮಧು ಅವರು ಬರೆದಿದ್ದಾರೆ.

ಕಳೆದ ತಿಂಗಳು ಪ್ರಾರಂಭಿಸಿ ಘಾಟಿ ಸುಬ್ರಹ್ಮಣ್ಯ, ಶಿಂಶಾ ಜಲಪಾತ, ಅಲ್ಲದೆ ಚನ್ನಪಟ್ಟಣ ಮತ್ತು ಬಿಡದಿ ಮುಂತಾದ ಸ್ಥಳಗಳಲ್ಲಿ 12 ದಿನಗಳ ಕಾಲ ಕೌರವ ವೆಂಕಟೇಶ್ ಅವರ ಸಾಹಸ ಸಂಯೋಜನೆಯಲ್ಲಿ 3 ಹೊಡೆದಾಟ ಸನ್ನಿವೇಶಗಳನ್ನು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಮಾಡಿ ಮೊದಲ ಹಂತ ಮುಗಿಸಿದ್ದಾರೆ. ಇದೇ 20ರಿಂದ 2ನೇ ಹಂತದ ಚಿತ್ರೀಕರಣ ಪ್ರಾರಂಭಿಸಿ 30 ದಿನಗಳಲ್ಲಿ ಹಾಡು ಅಲ್ಲದೆ ಉಳಿದ ಭಾಗವನ್ನು ಮುಗಿಸಲಾಗುವುದು ಎಂದು ನಿರ್ಮಾಪಕ ನಿರ್ದೇಶಕ ಸಾಯಿಪ್ರಕಾಶ್ ತಿಳಿಸಿದ್ದಾರೆ.

ಎಂದಿನಂತೆ ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ ಇದ್ದು, ಆರ್.ಗಿರಿ ಅವರ ಛಾಯಾಗ್ರಹಣ ಇದೆ. ಶಿವಾನಿ ಚಿತ್ರದಲ್ಲಿ ಅಭಿನಯಿಸಿದ್ದ ಸೂರಜ್ ತಂಗಿಯ ಗಂಡನಾಗಿ, ಅಲ್ಲದೆ ಎಂ.ಎನ್. ಲಕ್ಷ್ಮೀದೇವಿ, ಸಾಧು ಕೋಕಿಲಾ ಪ್ರಮುಖ ತಾರಾಗಣದಲ್ಲಿದ್ದಾರೆ. 20ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿ, ರಾಜ್ಯ ಪ್ರಶಸ್ತಿ ಗಳಿಸಿರುವ ಮೋನಿಕಾ ಶಿವಣ್ಣನ ನಾಯಕಿಯಾಗಿದ್ದಾಳೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada