»   » ಸಂಶೋಧನೆಗೆ ರಾಘು, ಶಿವಣ್ಣ, ಪುನೀತ್ ದೇಹದಾನ

ಸಂಶೋಧನೆಗೆ ರಾಘು, ಶಿವಣ್ಣ, ಪುನೀತ್ ದೇಹದಾನ

Posted By:
Subscribe to Filmibeat Kannada

ರಕ್ತದಾನ, ನೇತ್ರದಾನ ಮಾಡುವ ನಟರನ್ನು ನೋಡಿದ್ದೇವೆ. ಆದರೆ ವೈದ್ಯಕೀಯ ಸಂಶೋಧನೆಗಾಗಿ ತಮ್ಮ ದೇಹವನ್ನು ದಾನ ಮಾಡಿದ ಒಂದೇ ಕುಟುಂಬದ ನಟರನ್ನು ಕಂಡಿದ್ದೀರಾ? ಈ ಮಹತ್ವದ ಕೈಂಕರ್ಯಕ್ಕೆ ನಟ ರಾಘವೇಂದ್ರ ರಾಜ್ ಕುಮಾರ್ ಮುಂದಾಗಿದ್ದಾರೆ. ಸಂಶೋಧನೆಗಾಗಿ ತಮ್ಮ ದೇಹವನ್ನು ದಾನ ಮಾಡುತ್ತಿರುವುದಾಗಿ ಅವರು ಘೋಷಿಸಿದ್ದಾರೆ.

ಕೇವಲ ತಾವಷ್ಟೇ ಅಲ್ಲದೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸಹ ಸಂಶೋಧನೆಗಾಗಿ ದೇಹದಾನ ಮಾಡಲು ನಿರ್ಧರಿಸಿರುವುದಾಗಿ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದರು. ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ರಾಘವೇಂದ್ರ ರಾಜ್ ಕುಮಾರ್ ಮಾತನಾಡುತ್ತಿದ್ದರು.

ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗ ಶೆಟ್ಟಿ ಅವರು ಒಮ್ಮೆ ತಮ್ಮ ಮನೆಗೆ ಬಂದು ಅಪ್ಪಾಜಿ ಅವರನ್ನು ತಮ್ಮ ಕಣ್ಣುಗಳನ್ನು ದಾನ ಮಾಡಿ ಎಂದು ಕೇಳಿಕೊಂಡಿದ್ದರು. ಆಗ ಅಪ್ಪಾಜಿ ಅವರು ಒಂದು ಕಣ್ಣು ದಾನ ಮಾಡಲು ಮುಂದಾಗಿದ್ದರು. ಆಗ ಶೆಟ್ಟರು ತಾವು ನಿಧನರಾದ ಬಳಿಕ ಮಾಡಿ ಎಂದು ಅಪ್ಪಾಜಿ ಅವರಿಗೆ ಹೇಳಿದ್ದನ್ನು ನೆನಪಿಸಿಕೊಂಡರು.

ಆ ಸಂದರ್ಭದಲ್ಲಿ ಅಪ್ಪಾಜಿ ಮಾತನಾಡುತ್ತಾ, ಕಳೆದ 60 ವರ್ಷಗಳಿಂದ ಈ ಕಣ್ಣುಗಳಿಂದ ಸಾಕಷ್ಟು ನೋಡಿದ್ದೇನೆ. ನನಗೆ ಒಂದು ಕಣ್ಣು ಸಾಕು ಮತ್ತೊಂದನ್ನು ಯಾರಿಗಾದರೂ ನೀಡಿ ಎಂದು ಶೆಟ್ಟರ ಬಳಿ ಕೋರಿಕೊಂಡಿದ್ದನ್ನು ರಾಘವೇಂದ್ರ ರಾಜ್ ಕುಮಾರ್ ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಹಿರಿಯ ನಟ ದೊಡ್ಡಣ್ಣ, ಡಾ.ರಾಜ್ ನೇತ್ರ ಸಂಗ್ರಹಣಾ ಕೇಂದ್ರದ ಸಂಚಾಲಕ ಎಚ್ ಮಂಜುನಾಥ್ ಉಪಸ್ಥಿತರಿದ್ದರು.

ಇತ್ತೀಚೆಗೆ ಕಮ್ಯುನಿಸ್ಟ್ ಧುರೀಣ ಜ್ಯೋತಿ ಬಸು ನಿಧನರಾದಾಗ ಅವರ ಇಚ್ಛೆಯಂತೆ ಅವರ ದೇಹವನ್ನು ಆಸ್ಪತ್ರೆಗೆ ದಾನ ಮಾಡಲಾಗಿತ್ತು. ಬಸು ಅವರು ತಮ್ಮ ಕಣ್ಣುಗಳನ್ನು ಕೂಡ ದಾನ ಮಾಡಿದ್ದನ್ನು ಸ್ಮರಿಸಬಹುದು. ರಕ್ತ ದಾನ ಮಹಾದಾನ ಎನ್ನುತ್ತಾರೆ, ನೇತ್ರದಾನ ದಾನಗಳಲ್ಲೇ ದಾನ ಹಾಗೆಯೇ ಶರೀರ ದಾನ ಎಂಬುದು ಸರ್ವಸ್ವ ದಾನ ಎಂಬ ಮಾತಿದೆ. ಈ ಮಾತನ್ನು ರಾಘವೇಂದ್ರ ರಾಜ್ ಕುಮಾರ್ ಅಕ್ಷರಶಃ ಪಾಲಿಸಲು ಮುಂದಾಗಿರುವುದು ಮೆಚ್ಚತಕ್ಕ ಸಂಗತಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada