»   » ಪ್ರೀತಿಯಿಂದ ರಮೇಶ್ ಚಿತ್ರಕ್ಕೆ ಸುಮಾ ಗುಹಾ

ಪ್ರೀತಿಯಿಂದ ರಮೇಶ್ ಚಿತ್ರಕ್ಕೆ ಸುಮಾ ಗುಹಾ

Subscribe to Filmibeat Kannada

ತಮಿಳು ಚಿತ್ರರಂಗದ ಮತ್ತೊಬ್ಬ ತಾರೆ ಸುಮಾ ಗುಹಾ ಕನ್ನಡಕ್ಕೆ ಆಮದಾಗಿದ್ದಾರೆ. ರಮೇಶ್ ಅರವಿಂದ್ ಅವರ 'ಪ್ರೀತಿಯಿಂದ ರಮೇಶ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಈಕೆ ತಮಿಳಿನ 'ದುರೈ' ಚಿತ್ರದಲ್ಲಿ ನಟಿಸಿದ್ದರು. ಅದು ಲವಲವಿಕೆ ಮತ್ತು ತುಂಟಾಟದಿಂದ ಕೂಡಿದ ಪಾತ್ರವಾಗಿತ್ತಾದರೂ ಆಕೆಗೆ ಅಷ್ಟಾಗಿ ಹೆಸರು ತಂದುಕೊಡಲಿಲ್ಲ.

ಕನ್ನಡ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ . ಅದರಲ್ಲೂ ಮುಖ್ಯವಾಗಿ ರಮೇಶ್ ರಂತಹ ನುರಿತ ಕಲಾವಿದರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಪಾಲಿಗೆ ಒದಗಿ ಬಂದ ಅದೃಷ್ಟ ಎನ್ನುತ್ತ್ತಾರೆ ಸುಮಾ ಗುಹಾ. ಬಂಗಾಲಿ ಮೂಲದ ಸುಮಾ ವಾಸವಾಗಿರುವುದು ಮುಂಬೈನಲ್ಲಿ. ಸಿರಿವಂತ ಕುಟುಂಬದ ಹಿನ್ನೆಲೆಯಿಂದ ಬಂದವರು. ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದು ತಾಯಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದಿನಲ್ಲೂ ಮುಂದಿರುವ ಸುಮಾ ವಿಜ್ಞಾನ ಪದವೀಧರೆ. ವಿಶ್ವವಿದ್ಯಾಲಯದಲ್ಲಿ 3ನೇ ರ‌್ಯಾಂಕ್ ಸಹ ಪಡೆದಿದ್ದಾರೆ.

ಆರಂಭದಲ್ಲಿ ಸುಮಾ ಚಿತ್ರರಂಗಕ್ಕೆ ಹೋಗುವುದು ತಂದೆಗೆ ಇಷ್ಟವಿರಲಿಲ್ಲ. ಆದರೆ ಪಟ್ಟ್ಟು ಬಿಡದ ಸುಮಾ ಕಡೆಗೂ ಚಿತ್ರರಂಗದಲ್ಲಿ ನೆಲೆ ನಿಂತುಕೊಂಡರು. ಕಳೆದ ಒಂದೂವರೆ ವರ್ಷದಲ್ಲಿ ಆಕೆಯ ಸಾಧನೆ ನೋಡಿ ತಂದೆಯವರೂ ಈಗ ಖುಷಿಯಾಗಿದ್ದಾರಂತೆ. ಒಂದೇ ರೀತಿಯ ಪಾತ್ರಗಳಲ್ಲಿ ನಟಿಸಲು ಆಸಕ್ತಿ ಇಲ್ಲ. ನಟನೆಗೆ ಸವಾಲೊಡ್ಡುವ ಭಿನ್ನ ಪಾತ್ರಗಳಲ್ಲಿ ಕಾಣಿಸಬೇಕು ಎನ್ನುತ್ತಾರೆ ಸುಮಾ.

ಒಂದು ವೇಳೆ ನಾನು ನಟಿಯಾಗದೇ ಇದ್ದಿದ್ದರೆ ವಿಜ್ಞಾನಿಯಾಗುತ್ತಿದ್ದೆ ಎನ್ನುವ ಸುಮಾ ಕಥಕ್ ಮತ್ತು ಭರತನಾಟ್ಯ ಪ್ರವೀಣೆ ಕೂಡ. ಸದ್ಯಕ್ಕೆ ಆಕೆಯ ಕೈಯಲ್ಲಿ ಕನ್ನಡದ ಪ್ರೀತಿಯಿಂದ ರಮೇಶ್ ಚಿತ್ರ ಸೇರಿದಂತೆ ಬಂಗಾಳಿ ಮತ್ತು ತಮಿಳಿನ ತಲಾ ಒಂದೊಂದು ಚಿತ್ರಗಳಿವೆ. ಒಟ್ಟಿನಲ್ಲಿ ಐಂದ್ರಿತಾ ರೇ, ಪ್ರಿಯಾಂಕ ಉಪೇಂದ್ರ ಜತೆಗೆ ಮತ್ತೊಬ್ಬ ಬಂಗಾಳಿ ಬೆಡಗಿ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada