»   »  ಟಿವಿ 9 ಖ್ಯಾತಿಯ ರಂಗನಾಥ್ ಭಾರದ್ವಾಜ್ ಬೆಳ್ಳಿತೆರೆಗೆ!

ಟಿವಿ 9 ಖ್ಯಾತಿಯ ರಂಗನಾಥ್ ಭಾರದ್ವಾಜ್ ಬೆಳ್ಳಿತೆರೆಗೆ!

Posted By:
Subscribe to Filmibeat Kannada

ಟಿವಿ 9 ಕನ್ನಡ ವಾಹಿನಿಯ ಸುದ್ದಿ ವಾಚಕ ರಂಗನಾಥ್ ಭಾರದ್ವಾಜ್ ಯಾರಿಗೆ ತಾನೆ ಗೊತ್ತಿಲ್ಲ. ಬ್ರೇಕಿಂಗ್ ನ್ಯೂಸ್ ಗಳನ್ನು ಷೇಕ್ ಆಗದಂತೆ ಹೇಳುವುದರಲ್ಲಿ, ತಮ್ಮದೇ ಆದಂತಹ ವಿಶಿಷ್ಟ ಸುದ್ದಿ ವಾಚನಕ್ಕೆ ಹೆಸರಾದವರು ರಂಗನಾಥ್. ಇಷ್ಟು ದಿನ ಕಿರುತೆರೆಯಲ್ಲಿ ಮಿಂಚುತ್ತಿದ್ದ ರಂಗನಾಥ್ ಇದೀಗ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ, ಅದೂ ನಾಯಕ ನಟನಾಗಿ!

ಭಾರದ್ವಾಜ್ ನಾಯಕ ನಟನಾಗುತ್ತಿರುವ ಚಿತ್ರದ ಹೆಸರು 'ಚೆಲುವಿನಾ ಗೆಳತಿ'. ಈ ಚಿತ್ರಕ್ಕೆ ನಿರ್ದೇಶನ ಎಸ್. ನಾರಾಯಣ್ ಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ! ಪ್ರೇಮಾತನಯ ಶ್ರೀನಿವಾಸ್ ಎಂಬುವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆ ಮತ್ತು ಸಾಹಿತ್ಯ ಜವಾಬ್ದಾರಿಯನ್ನು ಅವರೇ ಹೊತ್ತಿರುವುದು ವಿಶೇಷ.

ಚಿತ್ರದ ನಿರ್ಮಾಪಕರು ಜಿ. ರವಿ. ಮೂಲತಃ ರಾಜಕಾರಣಿಯಾದ ಇವರು 'ವಿಸ್ಮಯ ಪ್ರಣಯ' ಚಿತ್ರತಂಡದ ಸದಸ್ಯರಲ್ಲೊಬ್ಬರು. ಬಿ.ವಿ.ಶೇಷಾದ್ರಿ ಈ ಚಿತ್ರದ ಸಹ ನಿರ್ಮಾಪಕರು. ರಂಗನಾಥ್ ಅವರ 'ಚೆಲುವಿನಾ ಗೆಳತಿ' ಯಾರೆಂದರೆ, ಮಯೂರಿ ಅರ್ಥಾತ್ ಫ್ಲೋರಾ ಶೈನಿ! ಕನ್ನಡದಲ್ಲಿ ಕೋದಂಡ ರಾಮ, ನಮ್ಮಣ್ಣ, ಧಿಮಾಕು, ಸಿಐಡಿ ಈಶ ಚಿತ್ರಗಳಲ್ಲಿ ಮಯೂರಿ ಬಣ್ಣಹಚ್ಚಿದ್ದರು. ಇದೀಗ 'ಒಲವೇ ವಿಸ್ಮಯ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರದ ತಾಂತ್ರಿಕ ಬಳಗ ಹೀಗಿದೆ; ಸಂಗೀತ ಎಂ.ಎಸ್.ಮಾರುತಿ, ಛಾಯಾಗ್ರಹಣ ಸಿನಿ ಟೆಕ್ ಸೂರಿ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆಮೂರ್ತಿ ಕಲಾ ನಿರ್ದೇಶನ ಚೆಲುವಿನಾ ಗೆಳತಿ ಚಿತ್ರಕ್ಕಿದೆ. ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ಮೈಸೂರಿನವರು. ಅತೀ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂಬ ಜಾಹೀರಾತು ಕನ್ನಡ ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೊಬ್ಬ ಹೊಸ ನಾಯಕ ನಟ ಅಡಿಯಿಟ್ಟಿದ್ದಾರೆ.

ರಂಗನಾಥ್ ಭಾರದ್ವಾಜ್ ಕರ್ನಾಟಕದಾದ್ಯಂತ ಚಿರಪರಿಚಿತ ಮುಖ. ಸ್ಫುರದ್ರೂಪಿ ಮುಖದ ರಂಗನಾಥ್ ನೋಡಲು ಯಾವ ಕನ್ನಡ ನಾಯಕ ನಟನಿಗೂ ಕಮ್ಮಿ ಇಲ್ಲ. ಟಿವಿ ಸಂದರ್ಶನಕ್ಕೆ ಕುಳಿತರೆಂದರೆ ಎದುರಿಗಿರುವವರಿಗೆ ನಾನಾ ಪ್ರಶ್ನೆಗಳನ್ನು ಕೇಳಿ ಅವರ ನಿಜ ಬಣ್ಣ ಬಯಲಿಗೆಳೆಯುವುದರಲ್ಲಿ ನಿಸ್ಸೀಮ. ತನ್ನದೇ ಆದಂತಹ ವಿಶಿಷ್ಟ ಸುದ್ದಿವಾಚನದ ಮೂಲಕ ನಾಡಿನಾದ್ಯಂತ ಹೆಸರಾದವರು. ಈಗ ನಾಯಕ ನಟನಾಗಿ ಅವರು ಪ್ರೇಕ್ಷಕರನ್ನು ಯಾವ ರೀತಿ ಸೆಳೆಯಬಹುದು ಎಂಬ ಕುತೂಹಲ ಕನ್ನಡ ಚಿತ್ರೋದ್ಯಮದಲ್ಲಿ ಮನೆಮಾಡಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada