»   » ‘ಆದಿ’ ಹಾದಿಯಲ್ಲಿ ಜತೆಯಾದ ರಮ್ಯ

‘ಆದಿ’ ಹಾದಿಯಲ್ಲಿ ಜತೆಯಾದ ರಮ್ಯ

Posted By: Staff
Subscribe to Filmibeat Kannada
Ramya
ಆರಂಭದ ಅಭಿ ಮತ್ತು ಎಕ್ಸ್‌ ಕ್ಯೂಸ್‌ ಮೀ ಚಿತ್ರಗಳು ಶತದಿನೋತ್ಸವ ಕಂಡ ತಕ್ಷಣ ನಾಯಕಿ ರಮ್ಯ ಚಿತ್ರರಂಗದಲ್ಲಿ ಜಂಭದಕೋಳಿ ಅನ್ನಿಸಿಕೊಂಡಿದ್ದಳು (ಜಂಭದ ಕೋಳಿ ಎನ್ನುವ ಚಿತ್ರದಲ್ಲಿ ರಮ್ಯ ಅಭಿನಯಿಸುತ್ತಿರುವ ಬೇರೆ ಮಾತು!). ಈ ಪರಿಯ ರಮ್ಯ, ಈಗ ಎಲ್ಲಿ ?

ನಮ್ಮ ಗುರು ಕಿರಣ್‌, 'ರಮ್ಯ ಹತ್ತಿರ ಬಂದ್ರೆ ಒಂಥರಾ ಆಗುತ್ತೆ " ಎಂದಿದ್ದರು. ಚಿತ್ರರಸಿಕರು ರಮ್ಯಳ ಕಂಡು ರೋಮಾಂಚನಗೊಂಡಿದ್ದರು. ಕನ್ನಡದ ನಂಬರ್‌ ಒನ್‌ ತಾರೆ ಎಂದು ಪತ್ರಿಕೆಗಳು ಬಿಂಬಿಸಿದ್ದವು. ರಕ್ಷಿತಾಳನ್ನು ಓವರ್‌ ಟೇಕ್‌ ಮಾಡಿದ ನಟಿ ಎಂದು ಕೆಲವರು ಬರೆದದ್ದೂ ಆಯಿತು. ಆದರೆ, ಈ ರಮ್ಯ ಪರಭಾಷಾ ಚಿತ್ರಗಳ ಆಹ್ವಾನ ಬಂದದ್ದೇ ತಡ, ತನ್ನ ಗೆಟಪ್ಪನ್ನೇ ಬದಲಾಯಿಸಿದ್ದಳು.

ಈ ನಟೀಮಣಿಯ ನುಡಿಮುತ್ತುಗಳು ಒಂದೇ ಎರಡೇ :

ಅಂಕಲ್‌ ಥರ ಇರೋ ರವಿಚಂದ್ರನೊಂದಿಗೆ ನಟಿಸೋದಿಲ್ಲ... ನಾನು ಎಸ್‌.ಎಂ.ಕೃಷ್ಣರ ಸಂಬಂಧಿ... ಅವಕಾಶ ಸಿಕ್ಕಿದರೆ ರಾಜಕೀಯಕ್ಕೆ ಜಿಗಿಯುತ್ತೇನೆ, ಮುಖ್ಯಮಂತ್ರಿಯಾಗೋದೇ ನನ್ನ ಗುರಿ, ಸುದೀಪ್‌ಗೆ ಪುನೀತ್‌ ತರ ಕಿಸ್‌ ಮಾಡೋಕೆ ಬರಲ್ಲ... ಈ ರೀತಿ ಮಾತನಾಡುತ್ತ ವಿವಾದಗಳಿಗೆ ಸಿಲುಕುತ್ತ , ಗಾಸಿಪ್‌ ಕಾಲಂಗಳಲ್ಲಿ ಮಿಂಚುತ್ತ , ವಿವಾದವನ್ನೇ ಆನಂದಿಸುತ್ತಿದ್ದ ಸುದ್ದಿಪ್ರಿಯೆ ರಮ್ಯ ಈಗ ಎಲ್ಲಿ ?

ಎಕ್ಸ್‌ ಕ್ಯೂಸ್‌ ಮಿ, ರಮ್ಯ ಎಲ್ಲಿ ?

ಇದು ಗಾಂಧಿ ನಗರದ ಪ್ರಶ್ನೆಯಲ್ಲ. ಕಂಠೀರವ ಸ್ಟುಡಿಯೋದಲ್ಲಿ ಸುದ್ದಿಗಾರರ ಪ್ರಶ್ನೆ. ಎಸ್‌.ವಿ .ರಾಜೇಂದ್ರ ಸಿಂಗ್‌ ಬಾಬುರವರ 'ಕುಮಾರ ಕಂಠೀರವ", 'ಲವ್‌" ಚಿತ್ರದ ಈಗಿನ್ನು ಮೀಸೆ ಚಿಗುರುತ್ತಿರುವ ನಾಯಕ ನಟ ಆದಿತ್ಯನ ಹೊಸ ಚಿತ್ರ 'ಆದಿ" ಮುಹೂರ್ತ ಸಮಾರಂಭವದು. ಚಿತ್ರದ ನಾಯಕಿ ರಮ್ಯ ಮುಹೂರ್ತದ ಸಂದರ್ಭದಲ್ಲಿ ಪತ್ರಕರ್ತರಿಗೆ ಸಿಗಲೇ ಇಲ್ಲ. ಆಕೆ ಹಾಗೆ ಬಂದು ಹೀಗೆ ಹೋದಳಂತೆ.

ಮೊದಲ ಚಿತ್ರ ಲವ್‌ ಬಿಡುಗಡೆಗೆ ಮೊದಲು ಸದ್ದು ಮಾಡಿತ್ತು. ನಂತರದ್ದು ಮಾತ್ರ ವೈಫಲ್ಯದ ಕಥನ. ಈಗ ತನ್ನ ಹೆಸರಿನ 'ಆದಿ"ಯಿಂದ ಆದಿತ್ಯ ಅದೃಷ್ಟ ಪರೀಕ್ಷಿಸಲು ಮತ್ತೆ ಬಂದಿದ್ದಾನೆ.

ಈ ಚಿತ್ರದ ನಿರ್ಮಾಪಕರು ಆದಿತ್ಯನ ಅತ್ತೆ ವಿಜಯಲಕ್ಷ್ಮಿ ಸಿಂಗ್‌ ಹಾಗೂ ಮಾವ ಜೈಜಗದೀಶ್‌. ಇದು ಅವರ ನಿರ್ಮಾಣದ ಹದಿನಾಲ್ಕನೇ ಚಿತ್ರ. ಧ್ರುವ, ಧಮ್‌, ಶ್ರೀರಾಂ, ವಾಲ್ಮೀಕಿ ಚಿತ್ರಗಳನ್ನು ನಿರ್ದೇಸಿರುವ ಎಂ.ಎಸ್‌. ರಮೇಶ್‌ ಆದಿಯ ನಿರ್ದೇಶಕರು. 'ಆದಿ" ಹಾದಿ ಸುಗಮವಾಗಲಿ.

English summary
Adithya and Ramya acts in Jaijadishs new venture Aadi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada