»   » ಇದೇ ಮೊದಲ ಸಲ ಐಟಂ ಸಾಂಗ್ ನಲ್ಲಿ ಶ್ರೀಧರ್!

ಇದೇ ಮೊದಲ ಸಲ ಐಟಂ ಸಾಂಗ್ ನಲ್ಲಿ ಶ್ರೀಧರ್!

Posted By:
Subscribe to Filmibeat Kannada

ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ನಟ ಹಾಗೂ ನಾಟ್ಯ ಚತುರ ಶ್ರೀಧರ್ ಅವರಿಗೆ 'ಅಮೃತ ಘಳಿಗೆ' ಕೂಡಿಬಂದಿದೆ. ಬಂಗಾರು ನಿರ್ದೇಶಿಸುತ್ತಿರುವ 'ಕಾಲ್ಗೆಜ್ಜೆ' ಚಿತ್ರದ ಹಾಡೊಂದರಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ಶ್ರೀಧರ್ ಅಭಿನಯಿಸಿದ್ದಾರೆ. ಮೂರು ದಿನಗಳ ಕಾಲ ಮೇಲುಕೋಟೆಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಯಿತು.

ಗಂಧರ್ವ ಸಂಗೀತ ಸಂಯೋಜಿಸಿರುವ ಹಾಡನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಅದ್ಭುತವಾಗಿ ಹಾಡಿದ್ದಾರೆ ಎಂದು ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದರು. ''ಮಳೆಗಾಲದಲ್ಲಿ ಮಂಜಿನ ಹನಿ ಹನಿ ಕಾಲ್ಗೆಜ್ಜೆ ನಾದ...'' ಎಂಬ ಹಾಡನ್ನು ಶಕ್ತಿಯುತ ರಾಗಗಳಲ್ಲಿ ಹಾಡಲಾಗಿದೆ. ಘಂಟಸಾಲ ಹಾಡಿರುವ ಶಿವಶಂಕರಿ ಶಿವಾನಂದಲಹರಿ...ಹಾಗೂ ಡಾ.ರಾಜ್ ಕುಮಾರ್ ಹಾಡಿರುವ ಆರಾಧಿಸುವೆ ಮಧನಾರಿ...ಹಾಡನ್ನು ನೆನಪಿಸುವ ರೀತಿಯಲ್ಲಿದೆ ಎನ್ನುತ್ತಾರೆ ಶ್ರೀಧರ್.

ಮೊದಲು ಈ ಚಿತ್ರದಲ್ಲಿ ನಟಿಸಲು ನನಗೆ ಇಷ್ಟವಿರಲಿಲ್ಲ. ಬಂಗಾರು ಅವರು ಹಾಡನ್ನು ಕೇಳಿಸಿದಾಗ ಅಭಿನಯಿಸಲು ಮನಸ್ಸಾಯಿತು. ಚಿತ್ರದ ನಾಯಕ ನಟ ವಿಶ್ವ ಎಂಬ ಕಾಲ್ಪನಿಕ ಪಾತ್ರದಲ್ಲಿ ನಾನು ಕಾಣಿಸಲಿದ್ದೇನೆ. ಚಿತ್ರದಲ್ಲಿ ನನ್ನ ಗಾಯನಕ್ಕೆ ನಾಯಕಿ ನೃತ್ಯ ಮಾಡುತ್ತಾಳೆ. ರೂಪಿಕಾ ಜತೆ ಮಳೆಯ ನೀರಿನಲ್ಲಿನಲ್ಲಿ ನೃತ್ಯ ಮಾಡುವ ಹಾಡನ್ನು ಮೇಲುಕೋಟೆಯಲ್ಲಿ ಚಿತ್ರೀಕರಿಸಲಾಗಿದೆ. 40 ಸಹ ಕಲಾವಿದರು ಈ ಸನ್ನಿವೇಶದಲ್ಲಿ ಭಾಗವಹಿಸಿದ್ದರು ಎಂದು ಶ್ರೀಧರ್ ವಿವರ ನೀಡಿದರು.

ನಾನು ಐಟಂ ಡ್ಯಾನ್ಸರ್ ಅಲ್ಲದಿದ್ದರೂ ಈ ಚಿತ್ರದಲ್ಲಿ ಆ ರೀತಿಯ ಪಾತ್ರವಿದೆ. ಜತೆಗೆ ಶಾಸ್ತ್ರೀಯ ಗಾಯಕನಾಗಿ ಕಾಲ್ಗೆಜ್ಜೆಯಲ್ಲಿ ಕಾಣಿಸಲಿದ್ದೇನೆ. ಖಂಡಿತವಾಗಿಯೂ ಈ ಚಿತ್ರ ಕನ್ನಡ ಚಿತ್ರಪ್ರೇಮಿಗಳನ್ನು ಆಕರ್ಷಿಸಲಿದೆ ಎನ್ನುತ್ತಾರೆ ಶ್ರೀಧರ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada