»   »  ಪ್ರೇಮ್ ಮುಂದಿನ ಚಿತ್ರ ಅಡ್ಡಾದಲ್ಲಿ ಬಿಪಶಾಗೆ ಸ್ಥಾನ!

ಪ್ರೇಮ್ ಮುಂದಿನ ಚಿತ್ರ ಅಡ್ಡಾದಲ್ಲಿ ಬಿಪಶಾಗೆ ಸ್ಥಾನ!

Subscribe to Filmibeat Kannada
Film director Prem
ರಾಜ್...ದ ಶೋ ಮ್ಯಾನ್ ಚಿತ್ರ ಬಿಡುಗಡೆಗೂ ಮುನ್ನವೇ ನಿರ್ದೇಶಕ ಪ್ರೇಮ್ ತಮ್ಮ ಮುಂದಿನ ಚಿತ್ರದ ಬಗ್ಗೆ ಸುಳುವು ಕೊಟ್ಟಿದ್ದಾರೆ. 'ಅಡ್ಡಾ' ಎಂದು ಹೆಸರಿಟ್ಟಿರುವ ಚಿತ್ರವನ್ನು ಪ್ರೇಮ್ ನಿರ್ದೇಶಿಸುತ್ತಿಲ್ಲವಂತೆ! ಆದರೆ ಈ ಚಿತ್ರಕ್ಕೆ ಅವರದೇ ಕತೆ ಇದೆ ಜೊತೆಗೆ ಚಿತ್ರದ ನಾಯಕ ನಟನಾಗಿಯೂ ಪ್ರೇಮ್ ಕಾಣಿಸಲಿದ್ದಾರೆ.

ಪ್ರಸ್ತುತ 'ರಾಜ್'ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪ್ರೇಮ್, ಜೋಗಿ ಚಿತ್ರದ ಮುಂದಿನ ಭಾಗ 'ಜೋಗಯ್ಯ' ನಿರ್ದೇಶನದ ನಂತರ 'ಅಡ್ಡಾ'ಚಿತ್ರ ಸೆಟ್ಟೇರಲಿದೆ. ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರಕತೆಯಲ್ಲಿ ಮಾಡಿದ ತಪ್ಪ್ಪುಗಳನ್ನು ಅಡ್ಡಾ ಚಿತ್ರದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಪ್ರೇಮ್ ತಿಳಿಸಿದ್ದಾರೆ. ಅಡ್ಡಾ ಚಿತ್ರದ ನಿರ್ದೇಶನದ ಜಬಾಬ್ದಾರಿಯನ್ನು ಪ್ರೇಮ್ ತಮ್ಮ ಹುಡುಗರಿಗೆ ಒಪ್ಪಿಸುವುದಾಗಿ ಹೇಳಿದ್ದಾರೆ.

ನನ್ನ ಟೀಮ್ ನಲ್ಲಿನ ತಂತ್ರಜ್ಞರು ಈ ಚಿತ್ರವನ್ನು ನಿರ್ಮಿಸುತ್ತಿದ್ದು ಇಂಗ್ಲಿಷ್ ಸಿನಿಮಾ ಮಟ್ಟದಲ್ಲಿ ಚಿತ್ರವಿರುತ್ತದೆ. ನೈಜತೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಇತ್ತೀಚೆಗೆ ತೆರೆಕಾಣುತ್ತಿರುವ ಚಿತ್ರಗಳ ಧಾಟಿಯಲ್ಲಿ ತಮ್ಮ ಅಡ್ಡಾ ಇರುವುದಿಲ್ಲ ಎಂಬುದು ಪ್ರೇಮ್ ಕೊಡುವ ವಿವರಣೆ. ಈ ಚಿತ್ರದಲ್ಲಿ ತಮ್ಮದು ವಿಭಿನ್ನ ಗೆಟಪ್. ಕೇಶ ವಿನ್ಯಾಸ ಸಹ ಬದಲಾಗುತ್ತದೆ. ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಈ ಎಲ್ಲ ಅಂಶಗಳಿಗೆ ಅಷ್ಟಾಗಿ ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ನನ್ನದೇ ಆದ ಪ್ರೇಕ್ಷಕ ವರ್ಗವನ್ನು ರಂಜಿಸಲು ಈ ಚಿತ್ರವನ್ನು ಮಾಡುತ್ತಿದ್ದೇನೆ ಎನ್ನುತ್ತಾರೆ ಪ್ರೇಮ್.

ನಿಮ್ಮ ಚಿತ್ರಗಳಿಗೆ ಹೆಚ್ಚಾಗಿ ಮುಂಬೈ ಹುಡುಗಿಯರನ್ನೇ ಕರೆತರುತ್ತೀರಲ್ಲಾ? ಎಂಬಗಂಭೀರ ಆರೋಪ ನನ್ನ ಮೇಲಿದೆ. ಹಾಗಾಗಿ ಅಡ್ಡಾ ಚಿತ್ರಕ್ಕೆ ಕನ್ನಡದ ಹುಡುಗಿಯನ್ನೇ ನಾಯಕಿಯಾಗಿ ಕರೆತರುತ್ತಿದ್ದೇವೆ. ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಒಂದು ಹಾಡಿಗಾಗಿ ಮಲ್ಲಿಕಾ ಶರಾವತ್ ರನ್ನು ಕರೆಸಿದ್ದೆ, ಈ ಬಾರಿ ಹಾಡೊಂದಕ್ಕೆ ಬಿಪಾಶಾ ಬಸು ಅವರನ್ನು ಕರೆಸುತ್ತಿರುವುದಾಗಿ ಪ್ರೇಮ್ ತಿಳಿಸಿದರು.

ಈ ವರ್ಷ ನನ್ನ ಕೈಯಲ್ಲಿ ಬಹಳಷ್ಟು ಚಿತ್ರಗಳಿವೆ. ಪುನೀತ್ ರಾಜ್ ಅವರ ರಾಜ್ ಹೊರತುಪಡಿಸಿ ಎರಡು ಚಿತ್ರಗಳನ್ನು ನಿರ್ದೇಶಿಸಬೇಕಿದೆ. ತೆಲುಗು ಚಿತ್ರವೊಂದನ್ನು ನಿರ್ದೇಶಿಸುವಂತೆಯೂ ಆಫರ್ ಬಂದಿದೆ. ನಂತರ ಜೋಗಯ್ಯ ಚಿತ್ರವನ್ನು ನಿರ್ದೇಶಿಸಬೇಕಿದೆ. ಚಿತ್ರವನ್ನು ನಿರ್ದೇಶಿಸಲು ಬಿಡುವಿಲ್ಲದ ಕಾರಣ ಅಡ್ಡಾ ಚಿತ್ರವನ್ನು ನಿರ್ದೇಶಿಸುತ್ತಿಲ್ಲ ಎನ್ನುತ್ತಾರೆ ಪ್ರೇಮ್. ಒಂದು ಉತ್ತಮ ಚಿತ್ರ ಸಿದ್ಧವಾಗಬೇಕಾದರೆ ಒಂದು ವರ್ಷ ಬೇಕಾಗುತ್ತದೆ. ಹಾಗಾಗಿ ನನ್ನ ಚಿತ್ರಗಳಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇನೆ ಎಂಬುದು ಪ್ರೇಮ್ ಉತ್ತರ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada