»   »  ದಶಕದ ಕನಸು: ಕನ್ನಡಕ್ಕೆ ಕ್ಯಾಸ್ಟಲಿನೊ!

ದಶಕದ ಕನಸು: ಕನ್ನಡಕ್ಕೆ ಕ್ಯಾಸ್ಟಲಿನೊ!

Posted By: *ಜಯಂತಿ
Subscribe to Filmibeat Kannada

ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಅವರ ಕನಸು ನನಸಾಗಿದೆ. "ಎಲ್ಲೆಲ್ಲು ನೀನೆ ನನ್ನಲ್ಲು ನೀನೆ" ಚಿತ್ರದ ಮೂಲಕ ಕನ್ನಡದಲ್ಲಿ ಸಿನಿಮಾ ನಿರ್ದೇಶಿಸುವ ಅವರ ಆಸೆ ನನಸಾಗುತ್ತಿದೆ. ಕ್ಯಾಸ್ಟಲಿನೊ ತುಳು, ಕೊಡವ, ಕೊಂಕಣಿ ಚಿತ್ರಗಳಿಗೆ ಹೆಸರಾದವರು. ಈವರೆಗೆ ಕನ್ನಡದ ಸೋದರ ಭಾಷೆಯ ಸಿನಿಮಾ ಜಗತ್ತಿನಲ್ಲೇ ಮುಳುಗಿದ್ದ ಅವರು ಮೊದಲ ಬಾರಿಗೆ ಕನ್ನಡ ಚಿತ್ರ ನಿರ್ದೇಶಿಸುತ್ತಿದ್ದಾರೆ.

"ಬಂಗಾರ್ ಪಟ್ಲೇರ್" ಕ್ಯಾಸ್ಟಲಿನೊ ಅವರ ಚೊಚ್ಚಿಲ ಚಿತ್ರ. 1994 ರಲ್ಲಿ ತೆರೆಕಂಡ ಈ ತುಳು ಚಿತ್ರ ಏಳು ಪ್ರಶಸ್ತಿಗಳನ್ನು ಗಳಿಸಿತ್ತು. ಮಂಗಳೂರಿನಲ್ಲಿ ನೂರು ದಿನಗಳ ಪ್ರದರ್ಶನವನ್ನೂ ಕಂಡಿತ್ತು. ವರನಟ ರಾಜಕುಮಾರ್ ಕೂಡ ಪಟ್ಲೇರ್ ಬಗ್ಗೆ ಮೆಚ್ಚಿಕೆಯ ಮಾತುಗಳನ್ನಾಡಿ, "ಕ್ಯಾಸ್ಟಲಿನೊ ಅಂಥ ನಿರ್ದೇಶಕರು ಕನ್ನಡಕ್ಕೆ ಬರಬೇಕು" ಎಂದಿದ್ದರು. ಆ ಮಾತು ಈಗ ನಿಜವಾಗುತ್ತಿದೆ.

ಕನ್ನಡ ಚಿತ್ರವೊಂದನ್ನು ನಿರ್ಮಿಸಬೇಕು ಎನ್ನುವ ಹಂಬಲ ಕ್ಯಾಸ್ಟಲಿನೊ ಅವರಿಗಿದ್ದರೂ, ಅವರ ಮೊದಲ ಆದ್ಯತೆಯೇನಿದ್ದರೂ ತುಳು, ಕೊಂಕಣಿ ಚಿತ್ರಗಳಿಗೇ. ಬಂಗಾರ್ ಪಟ್ಲೇರ್, ಸೆಪ್ಟೆಂಬರ್ 8, ಬದಿ, ಕಝರ್ ಸೇರಿದಂತೆ ಅವರ ಯಾವ ಚಿತ್ರವೂ ಈವರೆಗೆ ನಿರ್ಮಾಪಕರ ಬಂಡವಾಳಕ್ಕೆ ಮೋಸ ಮಾಡಿಲ್ಲ. ಅಂತೆಯೇ ಪ್ರಶಸ್ತಿಗಳೂ ಅವರಿಗೆ ಹೊಸತಲ್ಲ. ಪ್ರಶಸ್ತಿ ಹಾಗೂ ಬಂಡವಾಳ ವಾಪಸ್ಸಾತಿ ಎರಡರಲ್ಲೂ ಯಶಸ್ವಿಯಾಗಿರುವ ಅಪರೂಪದ ನಿರ್ದೇಶಕ ಅವರು.

ತುಳುವಿನಂಥ ಭಾಷೆಗಳ ಸಿನಿಮಾ ಕ್ಷೇತ್ರ ಪುಟ್ಟದೆನ್ನುವ ಅರಿವು ಕ್ಯಾಸ್ಟಲಿನೊ ಅವರಿಗಿದೆ. ಆದರೆ ಮಣ್ಣಿನ ಸೊಗಡನ್ನು, ಸ್ಥಳೀಯ ಸುಗಂಧವನ್ನು, ನಮ್ಮೊಳಗಿನ ತಾಕಲಾಟಗಳನ್ನು ತೆರೆಗೆ ತರಲು ಹೇಳಿಮಾಡಿಸಿದ ಭಾಷೆಗಳಿವು ಎನ್ನುವುದು ಅವರ ಅನುಭವ. ಜ್ಞಾನಪೀಠ ಪುರಸ್ಕೃತ ಲೇಖಕ ಶಿವರಾಮ ಕಾರಂತರು ಕೂಡ ಕ್ಯಾಸ್ಟಲಿನೊ ಅವರ ಸಿನಿಮಾ ಬದ್ಧತೆಯ ಬಗ್ಗೆ ಮೆಚ್ಚಿಕೆ ವ್ಯಕ್ತಪಡಿಸಿದ್ದರು. ಕ್ಯಾಸ್ಟಲಿನೊ ಅವರ, ಇಪ್ಪತ್ತಮೂರೂವರೆ ತಾಸುಗಳಲ್ಲಿ ಚಿತ್ರೀಕರಿಸಿದ ಅಗ್ಗಳಿಕೆಯ "ಸೆಪ್ಟೆಂಬರ್ 8" ಚಿತ್ರದಲ್ಲಿ ಕಾರಂತರು ಕೂಡ ನಟಿಸಿದ್ದರು. ಒಂಬತ್ತು ಯೂನಿಟ್ ಹಾಗೂ ಒಂಬತ್ತು ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ನಡೆಸಲಾಗಿತ್ತು. ಚಿತ್ರೀಕರಣದ ಅಷ್ಟೂ ಸಮಯ ಚಿತ್ರೀಕರಣ ಸ್ಥಳದಲ್ಲಿ ಪತ್ರಕರ್ತರೂ ಹಾಜರಿದ್ದರು.

ಪ್ರಸ್ತುತ "ಎಲ್ಲೆಲ್ಲು ನೀನೆ ನನ್ನಲ್ಲು ನೀನೆ" ಚಿತ್ರದಲ್ಲಿ ಮುಳುಗಿರುವ ಕ್ಯಾಸ್ಟಲಿನೊ ಅವರಿಗೆ ಭಿನ್ನ ಪ್ರೇಮಕಥೆಯೊಂದನ್ನು ಕನ್ನಡ ಪ್ರೇಕ್ಷಕರಿಗೆ ನೀಡುವ ಆಸೆ. ಫ್ರಾಂಕ್ ಫರ್ನಾಂಡಿಸ್ ಎನ್ನುವ ಉದ್ಯಮಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ, ನಿರ್ಮಾಪಕರ ಪುತ್ರ ರೋಹಿತ್ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. "ಅಂಬಾರಿ" ನಂತರ ಅವಕಾಶಗಳ ನಿರೀಕ್ಷೆಯಲ್ಲಿದ್ದ ಸುಪ್ರೀತಾ ಹಾಗೂ "ಪಿಯುಸಿ"ಯ ಹರ್ಷಿಕಾ ಪೂಣಚ್ಚ ನಾಯಕಿಯರು.

ಥೈಲ್ಯಾಂಡ್, ಮಲೇಷಿಯಾ, ಸಿಂಗಪೂರ್- ಹೀಗೆ ವಿದೇಶಗಳ ಸೊಗಸಿನೊಂದಿಗೆ ಬೆಂಗಳೂರು- ಚಿಕ್ಕಮಗಳೂರಿನಲ್ಲೂ ಕ್ಯಾಸ್ಟಲಿನೊ ಟೀಂ ಚಿತ್ರೀಕರಣ ನಡೆಸಲಿದೆ. ಮುಂದಿನ ಏಪ್ರಿಲ್‌ಗೆ ಸಿನಿಮಾ ತೆರೆಗಂತೆ. ಅಂದಹಾಗೆ, "ಎಲ್ಲೆಲ್ಲು ನೀನೆ ನನ್ನಲ್ಲು ನೀನೆ" ಚಿತ್ರದ ಸ್ಕ್ರಿಪ್ಟ್ ಹತ್ತು ವರ್ಷಗಳಷ್ಟು ಹಳೆಯದಂತೆ. ಗೀತರಚನೆಕಾರ ಆರ್.ಎನ್.ಜಯಗೋಪಾಲ್ ಇದನ್ನು ತಿದ್ದಿಕೊಟ್ಟಿದ್ದರಂತೆ. ದಶಕಗಳ ಕನಸು ಈಗ ನನಸಾಗುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada