»   »  'ರಾಜ್' ಬಗ್ಗೆ ಪುನೀತ್ ಏನಂತಾರೆ?

'ರಾಜ್' ಬಗ್ಗೆ ಪುನೀತ್ ಏನಂತಾರೆ?

By: *ಜಯಂತಿ
Subscribe to Filmibeat Kannada

ಮೊದಲು 'ಪೃಥ್ವಿ'. ಆಮೇಲೆ 'ನಾಡೋಡಿಗಳ್" ರೀಮೇಕ್. ಅದಾದಮೇಲೆ ಸೂರಿ ಸಿನಿಮಾ- ಇದು ಈ ವರ್ಷದ ಪುನೀತ್ ಸಿನಿಮಾ ಇಟೆನರಿ. ಹಾಗಾದರೆ, ಪ್ರೇಮ್ ಜೊತೆ ಇನ್ನೊಂದು ಸಿನಿಮಾ? 'ಅದರ ಬಗ್ಗೆ ಆಮೇಲೆ ಹೇಳುತ್ತೇನೆ" ಎಂದು ಅವರು ನಕ್ಕರು. ಆ ನಗುವಿನಲ್ಲಿ ಮೂಗು ಇನ್ನಷ್ಟು ಉದ್ದವಾಯಿತು.

'ರಾಜ್" ಸಿನಿಮಾ ಕುರಿತು ಅವರಿಗೂ ಮಿಶ್ರ ಪ್ರತಿಕ್ರಿಯೆ ಬರುತ್ತಿವೆಯಂತೆ. ಕೆಲವರು ಫೈಟಿಂಗ್, ಡ್ಯಾನ್ಸ್ ಇನ್ನೂ ಇರಬೇಕಿತ್ತು ಅಂದರೆ, ಮತ್ತೆ ಕೆಲವರು ರಕ್ತಪಾತ ಬಯಸಿದ್ದೂ ಉಂಟಂತೆ. ಪುನೀತ್‌ಗೆ ವೈಯಕ್ತಿಕವಾಗಿ ಚಿತ್ರ ಹಿಡಿಸಿದೆ. ತಾಂತ್ರಿಕವಾಗಿ ಅದು ಭಿನ್ನವಾದ ಸಿನಿಮಾ ಎಂಬುದೇ ಇದಕ್ಕೆ ಕಾರಣ.

ಸ್ಕ್ರಿಪ್ಟ್ ಹಾಗೂ ಪ್ರೇಮ್ ಇಬ್ಬರನ್ನೂ ನೆಚ್ಚಿಕೊಂಡ ತಮ್ಮ ನಿರ್ಧಾರವನ್ನೂ ಅವರು ಸಮರ್ಥಿಸಿಕೊಂಡರು. 'ರಾಜ್" ಚಿತ್ರವನ್ನು ಸುಖಾಸುಮ್ಮನೆ ನೋಡಿದವರು ಖುಷಿ ಪಟ್ಟಿದ್ದಾರೆ. ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ತೃಪ್ತಿಯಾಗಿಲ್ಲ ಎಂಬುದು ಅವರ ಒನ್‌ಲೈನರ್ ವಿಮರ್ಶೆ. ಹಾಗಂತ ಸಿನಿಮಾ ಚೆನ್ನಾಗಿಲ್ಲ ಎಂದು ಅರ್ಥವಲ್ಲ ಎಂದೂ ಪುನೀತ್ ಮಾತು ಸೇರಿಸುತ್ತಾರೆ. 'ಪೃಥ್ವಿ" ಆದಮೇಲೆ ಹೋಂ ಬ್ಯಾನರ್ ಸಿನಿಮಾಗಳ ಕಡೆ ಗಮನ ಕೊಡುವುದು ಅವರ ಉದ್ದೇಶ. ಸೂರಿ ಚಿತ್ರಕ್ಕೆ 'ಎಕ್ಕ" ಎಂದು ಇನ್ನೂ ಅಧಿಕೃತವಾಗಿ ಹೆಸರನ್ನು ಇಟ್ಟಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

'ರಾಜ್" ಚಿತ್ರದ ದೃಶ್ಯವೊಂದರಲ್ಲಿ ಜೈಲಿನಲ್ಲಿ ಒಬ್ಬ ಮೂತ್ರವಿಸರ್ಜನೆ ಮಾಡುತ್ತಾನೆ. ಇದು ಪುನೀತ್ ಅಭಿಮಾನಿಗಳಿಗೆ ಬೇಸರ ತರಿಸಿದೆ. 'ಒಂದು ವೇಳೆ ನನ್ನ ಚಿತ್ರದ ಯಾವುದೇ ದೃಶ್ಯದಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ" ಎಂದು ಅವರು ಕೈಮುಗಿದರು. ಪ್ರೇಮ್ ಮಾತ್ರ ತಮ್ಮ ಚಿತ್ರದ ಇಂಚಿಂಚನ್ನೂ ಸಮರ್ಥಿಸಿಕೊಂಡರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada