»   » ಪೂಜಾ ಗಾಂಧಿಯಿಂದ ಸೌಥ್ ಮೂವಿ ಸೀನ್ಸ್ ಸಿನಿಪತ್ರಿಕೆ ಬಿಡುಗಡೆ

ಪೂಜಾ ಗಾಂಧಿಯಿಂದ ಸೌಥ್ ಮೂವಿ ಸೀನ್ಸ್ ಸಿನಿಪತ್ರಿಕೆ ಬಿಡುಗಡೆ

Posted By: Super Admin
Subscribe to Filmibeat Kannada

ಬೆಂಗಳೂರು, ಸೆ.26 : ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಸುದ್ದಿಗಳನ್ನು ಪ್ರಕಟಿಸುವ ಮೂಲ ಉದ್ದೇಶದಿಂದ ಸೌಥ್ ಮೂವಿ ಸೀನ್ಸ್ ಎಂಬ ಮಾಸಪತ್ರಿಕೆ ಬುಧವಾರ ಬಿಡುಗಡೆಯಾಯಿತು.

ಕನ್ನಡ ಚಿತ್ರರಂಗದಲ್ಲಿ ಬಿಡುವಿಲ್ಲದೆ ನಟಿಸುತ್ತಿರುವ ಮಳೆಯ ಹುಡುಗಿ ಪೂಜಾ ಗಾಂಧಿ ಅವರು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಈ ಆಂಗ್ಲ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ಪೂಜಾ ಗಾಂಧಿ ಮಾತನಾಡಿ, ಕನ್ನಡ ಚಿತ್ರರಂಗ ನನಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿ ಪೋಷಿಸುತ್ತಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರರಂಗವನ್ನು ಬಿಂಬಿಸುವ ಪತ್ರಿಕೆಯನ್ನು ಬಿಡುಗಡೆ ಮಾಡುತ್ತಿರುವುದು, ಅದೂ ಬೆಂಗಳೂರಲ್ಲಿ ತುಂಬ ಸಂತಸ ತಂದಿದೆ ಎಂದರು.

ಸೌಥ್ ಮೂವಿ ಸೀನ್ಸ್(ಎಸ್ಎಮ್ಎಸ್)ನ ಸಾರಥ್ಯವಹಿಸಿರುವ ಪ್ರತಿಭಾ ಅವರು, ಆಯಾ ಭಾಷೆಯ ಚಿತ್ರರಂಗದ ಸುದ್ದಿ ನೀಡುವ ಅನೇಕ ಪತ್ರಿಕೆಗಳು ಬಂದಿವೆ ಆದರೆ ಈ ಪತ್ರಿಕೆ ಈ ನಾಲ್ಕೂ ಭಾಷೆಯ ಚಿತ್ರರಂಗದ ಸುದ್ದಿಯನ್ನು ಒಂದೇ ಪತ್ರಿಕೆಯಲ್ಲಿ ನೀಡುತ್ತಿರುವುದು ವಿಶೇಷ. ಈ ಪತ್ರಿಕೆಯಲ್ಲಿ ಕೇವಲ ದಕ್ಷಿಣ ಭಾರತದ ಚಿತ್ರಸುದ್ದಿಗಳು ಮಾತ್ರ ಪ್ರಕಟವಾಗುತ್ತವೆ. ಬಾಲಿವುಡ್ ಮತ್ತು ಹಾಲಿವುಡ್‌ನ ಲವಲೇಶವೂ ಇದರಲ್ಲಿ ಇರುವುದಿಲ್ಲ ಎಂದು ವಿವರಿಸಿದರು.

ನಟನಟಿಯರ ಸಂದರ್ಶನ, ಗಾಸಿಪ್ಪು, ಶೂಟಿಂಗ್ ವರದಿಗಳು ಮಾತ್ರವಲ್ಲ ತೆರೆಯ ಹಿಂದೆ ಏನು ನಡೆಯುತ್ತದೆ ಎಂಬ ವರದಿಗಳನ್ನು ವಿಸ್ತಾರವಾಗಿ ಎಸ್ಎಮ್ಎಸ್ ನೀಡಲಿದೆ ಎಂದು ಸಂಪಾದಕಿ ಪ್ರತಿಭಾ ನುಡಿದರು. ಪ್ರೀಮಿಯರ್ ಎಂಟರಟೇನ್ಮೆಂಟ್ ಅಂಡ್ ಮೀಡಿಯಾ ಪ್ರೈ.ಲಿ. ಕಂಪನಿ ಮುಖಾಂತರ ಈ ಪತ್ರಿಕೆಯನ್ನು ಪ್ರತಿಭಾ ಪ್ರಕಾಶಿಸುತ್ತಿರುವುದಲ್ಲದೆ ಅದರ ಒಡೆತನವನ್ನೂ ಹೊಂದಿದ್ದಾರೆ.

ಎಸ್ಎಮ್ಎಸ್‌ನ್ನು ದಕ್ಷಿಣ ಭಾರತ ಮಾತ್ರವಲ್ಲ ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಪ್ರತಿಭಾ ತಿಳಿಸಿದರು. ಜನರ ಪ್ರತಿಕ್ರಿಯೆಯನ್ನು ನೋಡಿ ಇತರ ನಗರಗಳಲ್ಲಿ ಮತ್ತು ಜನ ಇಷ್ಟಪಟ್ಟರೆ ನಾಲ್ಕೂ ಭಾಷೆಗಳಲ್ಲಿ ಪತ್ರಿಕೆಯನ್ನು ಹೊರತರುವ ಇರಾದೆಯಿದೆ ಎಂದು ಪ್ರತಿಭಾ ದಟ್ಸ್‌ಕನ್ನಡಕ್ಕೆ ತಿಳಿಸಿದರು.

ಮಾಡೆಲಿಂಗ್‌ನಲ್ಲಿ ಹೆಸರು ಮಾಡಿರುವ 'ಮರುಜನ್ಮ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿರುವ ನಾಯಕಿ ಪ್ರಿಯಾಂಕಾ ಬುಲಗಣ್ಣವರ್, ಮಾತಾಡ್ ಮಾತಾಡು ಮಲ್ಲಿಗೆಯಲ್ಲಿ ನಟಿಸಿರುವ ಸಂತೋಷ್, ನಿರ್ಮಾಪಕ ವಿಷ್ಣುಕಾಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

(ದಟ್ಸ್‌ಕನ್ನಡ ವಾರ್ತೆ)

;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X