ತಿಮ್ಮಪ್ಪನಿಗೆ ರು.15 ಕೋಟಿ ಭೂದಾನ ಮಾಡಿದ ನಟಿ
ಸಿನಿಮಾ ತಾರೆಗಳು ತಿರುಪತಿ ತಿಮ್ಮಪ್ಪನಿಗೆ ಅಡ್ಡ ಬಿದ್ದು ಏನೋ ತಮ್ಮ ಕೈಲಾದ ಕಾಣಿಕೆ ನೀಡುವುದನ್ನು ಕೇಳಿದ್ದೇವೆ. ಆದರೆ ಈ ನಟಿ ಮಾತ್ರ ರು.15 ಕೋಟಿ ಬೆಲೆ ಬಾಳುವ ಭೂಮಿಯನ್ನು ದಾನ ಮಾಡಿದ್ದಾರೆ. ಈಕೆ ಬೇರಾರು ಅಲ್ಲ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಎಪ್ಪತ್ತರ ದಶಕದಲ್ಲಿ ಮಿಂಚಿದ್ದ ಚತುರ್ಭಾಷಾ ತಾರೆ ಕಾಂಚನಾ.
ಈ ಹಿರಿಯ ನಟಿ ತಮ್ಮ ನಾಮಧೇಯನ್ನು ವಸುಂಧರಾ ದೇವಿ ಎಂದು ಬದಲಾಯಿಸಿಕೊಂಡಿದ್ದರು. ಸೋಮವಾರ (ಅ.25) ತಿರುಮಲ ತಿರುಪತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಐ ವೈ ಆರ್ ಕೃಷ್ಣರಾವ್ ಅವರಿಗೆ ರಿಜಿಸ್ಟರ್ ಮಾಡಿಸಿದ ಭೂಮಿಯ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು.
ಈ ಭೂಮಿಯು ಚೆನ್ನೈನ ಜಿ ಎನ್ ಚೆಟ್ಟಿ ಪ್ರದೇಶದಲ್ಲಿದೆ. ಈ ಜಾಗದಲ್ಲಿ ಮದುವೆ ಚತ್ರ ಅಥವಾ ಸಮುದಾಯ ಭವನ ನಿರ್ಮಿಸುವಂತೆ ಆಕೆ ಟಿಟಿಡಿ ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾಗಿ ಮೂಲಗಳು ತಿಳಿಸಿವೆ. ಇಷ್ಟೊಂದು ಬೆಲೆ ಬಾಳುವ ಭೂಮಿಯನ್ನು ಕಾಂಚನಾ ಅವರು ದಿಢೀರ್ ಎಂದು ದಾನ ಮಾಡಲು ಕಾರಣ ಏನು ಎಂಬುದು ನಿಗೂಢವಾಗಿದೆ.
ಒಂದು ಕಾಲದಲ್ಲಿ ಕಡುಬಡತನದಲ್ಲಿದ್ದ ಈ ತಾರೆಗೆ ವಾಸಿಸಲು ಒಂದು ಮನೆಯೂ ಇರಲಿಲ್ಲ. ಮಾನಸಿಕವಾಗಿ ಅಸ್ವಸ್ಥರಾಗಿದ್ದ ಈಕೆಯನ್ನು ಕುಟುಂಬ ಸದಸ್ಯರು ಮನೆಯಿಂದ ಹೊರಹಾಕಿದ್ದರು. ಆಕೆಯ ಪೋಷಕರು ಹಾಗೂ ಒಡಹುಟ್ಟಿದವರು ಈಗಲೂ ಚೆನ್ನೈನಲ್ಲೇ ವಾಸಿಸುತ್ತಿದ್ದಾರೆ. ಅವರೆಲ್ಲರಿಂದಲೂ ಈಕೆ ದೂರವಾಗಿದ್ದಾರೆ ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆನಿಂತಿದ್ದಾರೆ.


Click it and Unblock the Notifications











