»   » ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸಿದ ರಮ್ಯಾ

ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸಿದ ರಮ್ಯಾ

Posted By:
Subscribe to Filmibeat Kannada

ಬೆಂಗಳೂರು, ನ. 27 : ಒಂದು ಚಿತ್ರ ಸಾವಿರ ಶಬ್ದಗಳ ಒಂದು ಲೇಖನಕ್ಕೆ ಸಮ ಎಂಬುದು ಪತ್ರಿಕೋದ್ಯಮದಲ್ಲಿ ಜನಜನಿತ ಮಾತು. ಅದರಲ್ಲೂ ವ್ಯಂಗ್ಯಚಿತ್ರಗಳ ಅಂಕುಡೊಂಕು ರೇಖೆಗಳು ಸಮಾಜದ ಅಂಕುಡೊಂಕನ್ನು ಎತ್ತಿ ತೋರಿಸುವಲ್ಲಿ ಸದಾ ಮುಂದು. ಇದರ ಸದುಪಯೋಗ ಪಡೆದು ಜನಜಾಗೃತಿ ಮೂಡಿಸಲು ಈಗ ಸಾರಿಗೆ ಇಲಾಖೆ ಮುಂದಾಗಿದೆ.

ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸಾರಿಗೆ ಇಲಾಖೆ ಮತ್ತು ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಜಂಟಿ ಆಶ್ರಯದಲ್ಲಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಲಾಗಿರುವ "ವಾಹನಗಳಿಂದಾಗುವ ವಾಯು ಮಾಲಿನ್ಯ" ಕುರಿತ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಖ್ಯಾತ ಚಿತ್ರನಟಿ ರಮ್ಯ ಅವರು ಇಂದು ಚಿತ್ರ ಬರೆಯುವ ಮೂಲಕ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್ ಅವರು ಪರಿಸರ ಮಾಲಿನ್ಯದ ಪರಿಣಾಮವನ್ನು ನಾವು ಈಗಾಗಲೇ ನೋಡಿದ್ದೇವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸುವ ಮೂಲಕ ಜನರು ವಾಯುಮಾಲಿನ್ಯ ಕಡಿಮೆಗೊಳಿಸಲು ತಮ್ಮ ಕೊಡುಗೆ ನೀಡಬೇಕೆಂದು ಅವರು ಸಲಹೆ ಮಾಡಿದರು.
ಸಾರಿಗೆ ಇಲಾಖೆಯು ವ್ಯಂಗ್ಯ ಚಿತ್ರಗಳ ಮೂಲಕ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.

ಸಾರಿಗೆ ಇಲಾಖೆಯು ವ್ಯಂಗ್ಯ ಚಿತ್ರಕಾರರ ಸಂಘದ ಸಹಯೋಗದೊಂದಿಗೆ "ವಾಹನಗಳಿಂದಾಗುವ ವಾಯು ಮಾಲಿನ್ಯ" ಕುರಿತು ಏರ್ಪಡಿಸಿದ್ದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ರಾಜ್ಯದ ಸುಮಾರು 75 ವ್ಯಂಗ್ಯಚಿತ್ರಕಾರರು ಪಾಲ್ಗೊಂಡು 200 ಚಿತ್ರಗಳನ್ನು ಕಳುಹಿಸಿದ್ದರು. ಅದರಲ್ಲಿ ಆಯ್ದ 70 ವ್ಯಂಗ್ಯಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಸ್ಪರ್ಧಾ ವಿಜೇತರಿಗೆ ಸಚಿವ ಅಶೋಕ್ ಅವರು ಬಹುಮಾನ ವಿತರಿಸಿದರು.

ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದವರ ವಿವರ ಹೀಗಿದೆ : ಭಾವು ಪತ್ತಾರ್ (ಪ್ರಥಮ), ಜಿ.ಎಸ್.ನಾಗನಾಥ್ (ದ್ವಿತೀಯ), ಜಿ.ಎಂ. ಬೊಮ್ನಳ್ಳಿ (ತೃತೀಯ), ರಾಮಕೃಷ್ಣ ಸಿದ್ರಪಾಲ, ಚಂದ್ರಶೇಖರ ಆರ್ ಹಾಗೂ ಶಂಕರ್ (ಮೆಚ್ಚುಗೆ) ಈ ಪ್ರದರ್ಶನವು ನವೆಂಬರ್ 27ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ 7 ಘಂಟೆಯವರೆಗೆ ನಡೆಯಲಿದ್ದು, ಪ್ರವೇಶ ಉಚಿತ. ವಿವಿಧ ಶಾಲಾ ಮಕ್ಕಳಿಗೂ ಈ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada