»   »  ನಟಿ ವಿಮಲಾ ರಾಮನ್ ಗೆ ನಾಗವಲ್ಲಿ ಕಾಟ!

ನಟಿ ವಿಮಲಾ ರಾಮನ್ ಗೆ ನಾಗವಲ್ಲಿ ಕಾಟ!

Posted By:
Subscribe to Filmibeat Kannada

'ಆಪ್ತರಕ್ಷಕ' ಚಿತ್ರದ ನಾಯಕಿ ವಿಮಲಾ ರಾಮಾನ್ ಗೆ ನಾಗವಲ್ಲಿ ಕಾಟವಂತೆ. ಮೊದಲ ದಿನದ ಚಿತ್ರೀಕರಣ ಮುಗಿಸಿ ತನ್ನ ಹೋಟೆಲ್ ನಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಾಗವಲ್ಲಿಯ ನೆರಳು ಕಂಡಿದ್ದಾಗಿ ಈಕೆ ಹೇಳುತ್ತಾರೆ. ಮಧ್ಯರಾತ್ರಿ 12.30ರ ಸಮಯದಲ್ಲಿ ನೆರಳನ್ನು ಕಂಡು ಈಕೆ ಬೆಚ್ಚಿದ್ದಿದ್ದಾರಂತೆ.

ಬೆಳಗಿನ ಜಾವ 2.30ರ ಸಮಯದಲ್ಲೂ ಆಕೆಗೆ ಇದೇ ರೀತಿಯ ಅನುಭವಾಗಿದೆ. ಆಕೆಯ ಪಕ್ಕದಲ್ಲಿ ಯಾರೋ ಮಲಗಿದ ಅನುಭವವಾಗಿದೆಯಂತೆ. ಗಕ್ಕನೆ ಎದ್ದು ನೋಡಿದರೆ ಯಾರೂ ಇರಲಿಲ್ಲವಂತೆ! ಈ ಭಯಾನಕ ಘಟನೆಗಳಿಂದ ಆಕೆಯ ಆರೋಗ್ಯ ಕೈಕೊಟ್ಟಿದೆ. ಹತ್ತು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ.

'ಆಪ್ತಮಿತ್ರ' ಚಿತ್ರದ 'ನಾಗವಲ್ಲಿ' ಪಾತ್ರದ ಪ್ರಭಾವ ಆಪ್ತರಕ್ಷಕದಲ್ಲೂ ಮುಂದುವರಿದಿದೆ. 'ಚಂದ್ರಮುಖಿ' ಚಿತ್ರದ ನಾಗವಲ್ಲಿ ನೃತ್ಯದ 'ರಾರಾ...' ಹಾಡಿನ ಚಿತ್ರೀಕರಣ ವೇಳೆ ನಾಲ್ಕು ಮಂದಿ ಸಹ ಕಲಾವಿದರು ಹುಶಾರು ತಪ್ಪಿದ್ದರು ಎನ್ನುತ್ತಾರೆ ನಿರ್ದೇಶಕ ಪಿ ವಾಸು. ಬರೀ ಇದಿಷ್ಟೇ ಅಲ್ಲ ರಮೇಶ್ ಭಟ್ ಸಹ ಮೂರು ದಿನಗಳ ಕಾಲ ಹುಶಾರು ತಪ್ಪಿ ಮಲಗಿದ್ದರಂತೆ.

ಆಪ್ತಮಿತ್ರ ಮತ್ತು ಆಪ್ತರಕ್ಷಕ ಚಿತ್ರಗಳಲ್ಲಿ ಅವಿನಾಶ್ ಅವರದು ಮಂತ್ರವಾದಿ ಪಾತ್ರ. ಆಪ್ತರಕ್ಷಕ ಚಿತ್ರದಲ್ಲಿ ಮಾತ್ರ ಅವರು ಡಬ್ಬಿಂಗ್ ಮುಗಿಸಿಕೊಡಲು ಸಾಧ್ಯವಾಗುತ್ತಿಲ್ಲವಂತೆ. ಡಬ್ಬಿಂಗ್ ಹೇಳಲು ಮೂರು ದಿನಗಳ ಕಾಲ ಅವಿನಾಶ್ ಒದ್ದಾಡಿದರು ಎನ್ನುತ್ತಾರೆ ವಿಷ್ಣು. ಒಟ್ಟಿನಲ್ಲಿ ನಿಗೂಢ ಶಕ್ತಿಗಳಲ್ಲಿ ಅಪಾರ ನಂಬಿಕೆ ಇಟ್ಟಿರುವ ವಿಷ್ಣು ಈ ಘಟನೆಗಳಿಂದ ಮತ್ತಷ್ಟು ವಿಚಲಿತರಾಗಿದ್ದಾರೆ ಎನ್ನುತ್ತವೆ ಮೂಲಗಳು.

ವಿಮಲಾ ರಾಮನ್ ಭರತ ನಾಟ್ಯ ಕಲಾವಿದೆ ಹಾಗೂ ಮಾಜಿ ವಿಶ್ವಸುಂದರಿ. ದಕ್ಷಿಣ ಭಾರತದ ಬಲು ಬೇಡಿಕೆಯ ನಟಿಯರಲ್ಲಿ ವಿಮಲಾ ಸಹ ಒಬ್ಬರು. ಕೃಷ್ಣಕುಮಾರ್ ನಿರ್ಮಿಸುತ್ತಿರುವ ಆಪ್ತರಕ್ಷಕ ಚಿತ್ರದಲ್ಲಿ ಈಕೆಯದು ನಾಯಕಿಯ ಪಾತ್ರ. ಸಂಧ್ಯಾ, ಭಾವನಾ, ಲಕ್ಷ್ಮಿ ಗೋಪಾಲ ಸ್ವಾಮಿ ಸಹ ಚಿತ್ರದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada