ಕಿಚ್ಚ ಸುದೀಪ್ ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆ?
ಈ ರೀತಿಯ ಸುದ್ದಿ ಬಹಳ ದಿನಗಳಿಂದಲೂ ಕೇಳಿಬರುತ್ತಿತ್ತು. ಕಿಚ್ಚ ಸುದೀಪ್ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರಂತೆ ಹಾಗಂತೆ ಹೀಗಂತೆ ಎಂಬ ಸುದ್ದಿಗಳ ನಡುವೆಯೇ ಶೀಘ್ರದಲ್ಲೇ ರಾಜಕೀಯಕ್ಕೂ ಎಂಟ್ರಿ ಕೊಡಲಿದ್ದಾರೆ ಎಂಬುದು ಕಾಳ್ಗಿಚ್ಚಿನಂತೆ ಹಬ್ಬಿತ್ತು. ಈ ಸುದ್ದಿ ದಿಟವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸುದೀಪ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದಲೇ ಸುದೀಪ್ ಈಗಲೆ ತಯಾರಿ ನಡೆಸಿದ್ದಾರೆ ಎಂಬ ಮಾತುಗಳಿಗೆ ಮತ್ತಷ್ಟು ಪುಷ್ಠಿ ಬಂದಿದೆ . ಮಂಡ್ಯ ಗಂಡು, ರೆಬೆಲ್ ಸ್ಟಾರ್ ಅಂಬರೀಷ್ ಅವರ ಪರ ಪ್ರಚಾರ ಮಾಡಿದ್ದಾಗಿ ಸುದೀಪ್ ಹೇಳಿಕೊಂಡಿದ್ದಾರೆ.
ಸುದೀಪ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಈಗಾಗಲೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಸುದೀಪ್‍ರನ್ನು ಬಳ್ಳಾರಿಯಿಂದ ಕಣಕ್ಕಿಳಿಸಿ ರೆಡ್ಡಿ ಸಹೋದರರನ್ನು ಮಟ್ಟ ಹಾಕುವ ಐನಾತಿ ಪ್ಲಾನನ್ನು ಮಾಜಿ ಪ್ರಧಾನಿ ದೇವೇಗೌಡರು ಈ ಹಿಂದೆಯೇ ಹಾಕಿದ್ದರು. ಆದರೆ ಅದ್ಯಾಕೋ ಏನೋ ಅವರ ಪ್ಲಾನ್ ತಲೆಕೆಳಗಾಗಿತ್ತು.
ಕನ್ನಡ ಚಿತ್ರಗಳು : ನಿಮ್ಮ ಅಮೂಲ್ಯ ಮತ ಯಾರಿಗೆ?
ಬಿಜೆಪಿ ಸಹ ಸುದೀಪ್‌ರನ್ನು ರಾಜಕೀಯಕ್ಕೆ ಎಳೆಯುವ ಚಿಂತನೆಯಲ್ಲಿದೆ. ಆದರೆ ಸುದೀಪ್ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಜೈ ಎನ್ನುವ ಸಾಧ್ಯತೆಗಳು ಹೆಚ್ಚಾಗಿವೆ.ಅಂಬರೀಷ್ ತಮ್ಮ ಬೆನ್ನಿಗಿರುತ್ತಾರೆ ಎಂಬ ಲೆಕ್ಕಾಚಾರ ಸುದೀಪ್ ಅವರದು. ಆದರೆ ಈ ಬಗ್ಗೆ ಸುದೀಪ್ ಮಾತ್ರ ಏನನ್ನೂ ಹೇಳದೆ ಮೌನಕ್ಕೆ ಶರಣಾಗಿದ್ದಾರೆ.
ಬಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗದ ಜನಪ್ರಿಯ ತಾರೆಗಳನ್ನೂ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವುದುಂಟು. ಹಾಗೆಯೇ ಸುದೀಪ್ ಅವರನ್ನು ಬಳಸಿಕೊಂಡಿದ್ದಾರೆ. ಇದರಲ್ಲೇನು ವಿಶೇಷವಿಲ್ಲ ಬಿಡಿ ಎನ್ನುವವರೂ ಕಡಿಮೆಯಿಲ್ಲ. ಆದರೂ ಎಲ್ಲೋ ಒಂದು ಕಡೆ ಸುದೀಪ್ ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ಗುಮಾನಿಯಂತೂ ಕಾಡುತ್ತಿದೆ. [ಸುದೀಪ್]


Click it and Unblock the Notifications











