»   »  ಮಂತ್ರವಾದಿ ಪಾತ್ರದಲ್ಲಿ ಮಿಂಚಲಿರುವ ಉಮಾಶ್ರೀ

ಮಂತ್ರವಾದಿ ಪಾತ್ರದಲ್ಲಿ ಮಿಂಚಲಿರುವ ಉಮಾಶ್ರೀ

Posted By:
Subscribe to Filmibeat Kannada
Umashri
ಫ್ರೆಂಡ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನೂತನ ಚಿತ್ರಕ್ಕೆ ವಿಶಿಷ್ಟ ಶೀರ್ಷಿಕೆಯ ಹುಡುಕಾಟದಲ್ಲಿದ್ದ ನಿರ್ಮಾಪಕರು ಪ್ರಸ್ತುತ 'ಅಂತರಾತ್ಮ' ಎಂದು ನಾಮಕರಣ ಮಾಡಿದ್ದಾರೆ. ಕುತೂಹಲಕಾರಿ ಚಿತ್ರವಾದುದ್ದರಿಂದ ಈ ಹೆಸರನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿರುವ ನಿರ್ದೇಶಕ ಬಿ.ಶಂಕರ್ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಕಲಾವಿದೆ ಉಮಾಶ್ರೀ ಈ ಚಿತ್ರದಲ್ಲಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈವರೆಗೂ 380ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ನಟನ ಕೌಶಲ್ಯವನ್ನು ಮೆರೆಸಿರುವ ಈ ಮೇರುನಟಿ 'ಗುಲಾಬಿ ಟಾಕೀಸ್' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದವರು. ಇಂತಹ ಅದ್ಭುತ ಕಲಾವಿದೆಗೆ 'ಅಂತರಾತ್ಮ' ಚಿತ್ರದಲ್ಲಿನ ಪಾತ್ರ ತುಂಬ ಹಿಡಿಸಿದೆಯಂತೆ.

"ನಾನು ಇಲ್ಲಿಯವರೆಗೂ ಸಾಕಷ್ಟು ಚಿತ್ರಗಳಲ್ಲಿ, ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದರೂ ಮಂತ್ರವಾದಿಯ ಪಾತ್ರ ನಿರ್ವಹಿಸಿರಲಿಲ್ಲ. ಹಾಗಾಗಿ ಈ ಚಿತ್ರ ನನ್ನ ಮೆಚ್ಚುಗೆಗೆ ಪಾತ್ರವಾಗಿದೆ" ಎಂದು ಉಮಾಶ್ರೀ ತಿಳಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದ್ದರಿಂದ ಉಮಾಶ್ರೀ ಅವರ ರಾಜಕೀಯ ಕಾರ್ಯಚಟುವಟಿಕೆ ಹೆಚ್ಚಾಗಿದ್ದು ಅವರು ಅಭಿನಯಿಸಿರುವ ಭಾಗದ ಚಿತ್ರೀಕರಣವನ್ನು ಈಗಾಗಲೆ ಪೂರ್ಣಗೊಳಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಬಿ.ಶಂಕರ್ ಅವರು ಚಿತ್ರಕಥೆ ಬರೆದು ನಿರ್ಮಾಣದ ಹೊಣೆ ಹೊತ್ತಿರುವ ಈ ಚಿತ್ರಕ್ಕೆ ಸುಂದರನಾಥ್ ಸುವರ್ಣರ ಛಾಯಾಗ್ರಹಣ, ಗಿರಿಧರ್ ದಿವಾನ್ ಸಂಗೀತ, ವಿ.ಮನೋಹರ್, ಚೇತನ್, ಆರ್ಯ ಗೀತರಚನೆ, ಶ್ರೀ ಸಂಕಲನ, ಮಂಜುನಾಥ್ ಸಂಭಾಷಣೆ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್ ನೃತ್ಯವಿದೆ. ರಾಮಣ್ಣನವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಮಿಥುನ್ ತೇಜಸ್ವಿ, ವಿಶಾಖಾ ಸಿಂಗ್(ಬಾಂಬೆ), ರೋಹನ್ ಗೌಡ, ಸುಮನ್ ರಂಗನಾಥ್, ಉಮಾಶ್ರೀ, ಹರೀಶ್ ರಾಯ್, ಮೈಕಲ್ ಮಧು, ರೇಖಾದಾಸ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada