»   » 'ಚಕ್ರವ್ಯೂಹ'ದ ಕಲಿಯುಗ ಕರ್ಣನಿಗೆ ಜನುಮದಿನ

'ಚಕ್ರವ್ಯೂಹ'ದ ಕಲಿಯುಗ ಕರ್ಣನಿಗೆ ಜನುಮದಿನ

Posted By:
Subscribe to Filmibeat Kannada

ಕನ್ನಡಿಗರ ನೆಚ್ಚಿನ ನಟ ಎಂಎಚ್ ಅಮರನಾಥ್ ಉರುಫ್ ಅಂಬರೀಷ್ ಶನಿವಾರ(ಮೇ.29) 59ನೇ ವರ್ಷಕ್ಕೆ ಅಡಿಯಿಟ್ಟಿದ್ದಾರೆ.ಇದರಲ್ಲೇನಿದೆ ವಿಶೇಷ ಎನ್ನುತ್ತೀರಾ? ಮಳವಳ್ಳಿ ಗಂಡು ತಮ್ಮ ಹುಟ್ಟುಹಬ್ಬವನ್ನು ಆತ್ಮೀಯರು ಹಾಗೂ ಕುಟುಂಬ ವರ್ಗದವರೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಅಂಬರೀಷ್ ಅವರ ಮನೆ ಮುಂದೆ ಅಭಿಮಾನಿಗಳ ಸಾಗರವೇ ನೆರೆದಿದೆ.

ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ.ಇನ್ನು ನಟನೊಬ್ಬನ ಹುಟ್ಟುಹಬ್ಬ ಆಚರಿಸುತ್ತಾರಾ? ಎಂದು ಕೇಳುವ ಮುನ್ನ ಅಂಬರೀಷ್ ಅವರ ಜೆ ಪಿ ನಗರದ ಮನೆಮುಂದೆ ಜಮಾಯಿಸಿದ ಅಭಿಮಾನಿಗಳನ್ನೊಮ್ಮೆ ನೋಡಬೇಕು. ಸಿನಿಮಾ ತಾರೆಗಳ ಬಗ್ಗೆ ಪ್ರೇಕ್ಷಕರಿಗೆ ಇಂದಿಗೂ ಸೆಳೆತವಿದೆ ಎಂದರೆ ಅದಕ್ಕಿಂತಲೂ ವಿಶೇಷ ಇನ್ನೇನು ಬೇಕು.

ಈ ಸಂದರ್ಭದಲ್ಲಿ ಕಲಿಯುಗ ಕರ್ಣ ಅಂಬರೀಷ್ ಮಾತನಾಡುತ್ತಾ ತಮ್ಮ ಅಭಿಮಾನಿಗಳಿಗೆ ಒಂದೆರಡು ಕಿವಿಮಾತನ್ನು ಹೇಳಿದರು. ಎಲ್ಲಾ ಕನ್ನಡ ಚಿತ್ರಗಳನ್ನು ನೋಡಿ. ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ. ಸೊರಗಿದ ಕನ್ನಡ ಚಿತ್ರರಂಗಕ್ಕೆ ಹೊಸ ಉತ್ಸಾಹ ತನ್ನಿ ಎಂದು ಕರೆ ನೀಡಿದರು.

ಮಾತೃಭಾಷೆಯ ಬಗ್ಗೆ ಅಭಿಮಾನವಿರಲಿ. ಕನ್ನಡ ಚಿತ್ರರಂಗವನ್ನು ಉಳಿಸಿ, ಬೆಳೆಸಿ ಇದೇ ನನ್ನ ಅಭಿಲಾಷೆ, ನನ್ನ ಅಭಿಮಾನಿಗಳಿಗೆ ನಾನು ಹೇಳುವುದಿಷ್ಟೇ ಎಂದು ಅಂಬಿ ತಮ್ಮ ಹುಟ್ಟುಹಬ್ಬದ ದಿನ ಹೇಳಿದರು. ತಮ್ಮ ನೆಚ್ಚಿನ ನಟ ಅಂಬರೀಷ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸರಳವಾಗಿ ನೀವೂ ತಿಳಿಸಬಹುದು.

ಅಂಬರೀಷ್ ಈ ವರ್ಷ ಹಲವಾರು ಆಘಾತಗಳನ್ನು ಅನುಭವಿಸಿದ್ದಾರೆ. ಒಂದು ಕಡೆ ತಮ್ಮ ನೆಚ್ಚಿನ ಗೆಳೆಯ ಸಾಹಸಸಿಂಹ ವಿಷ್ಣುವರ್ಧನ್ ಅಗಲಿಕೆ ದುಃಖ ಅವರನ್ನು ಇಂದಿಗೂ ಬಾಧಿಸುತ್ತಿದೆ. ಮತ್ತೊಂದೆಡೆ ಕನ್ನಡ ಚಿತ್ರರಂಗದ ಸೋಲು ಅವರನ್ನು ಚಿಂತೆಗೀಡು ಮಾಡಿದೆ. ಅಂಬರೀಷ್ ಗೆ ಹೃದಯಾಘಾತವಾಗಿದೆ ಎಂಬ ಸುಳ್ಳು ಸುದ್ದಿಗಳು ಒಂದು ಕಡೆ ಅವರ ಮನಸ್ಸನ್ನು ಘಾಸಿಗೊಳಿಸಿವೆ. ಒಂದರ್ಥದಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿದ ಕಲಿಯುಗ ಕರ್ಣ.

ಈ ಸಂದರ್ಭದಲ್ಲಿ ಕಲಿಯುಗ ಕರ್ಣನ ಬಗ್ಗೆ ಹೇಳಲೇಬೇಕಾದ ಒಂದೆರಡು ಮಾತುಗಳಿವೆ. ಅಂಬಿ ನೇರಾನೇರ ಮಾತುಗಾರ. ಅದು ಅವರ ಹುಟ್ಟುಗುಣ. ಮುಖ್ಯಮಂತ್ರಿಗಳ ಜೊತೆ ಕೂತು 15 ದಿನಗಳ ಕಾಲ ವಿಸ್ಕಿ ಕುಡಿದಿದ್ದೀನಿ ಅಂತ ಹೇಳಿದರೆ ಎಂಥಹವರಿಗೂ ಮುಜುಗರವಾಗುತ್ತದೆ. ಕಣ್ಣುಗಳು ಬೆಂಕಿಯ ಕೆಂಡಗಳಂತಿದ್ದರೂ ಹೃದಯ ಮಾತ್ರ ಮಗುವಿನಂತಹದ್ದು. ಸೀರಿಯಸ್ಸಾಗಿ ಕಾಣುವ ತಮಾಷೆಯ ವ್ಯಕ್ತಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada