ರಾಜ್ಯ ಚಲನಚಿತ್ರ ಅಕಾಡೆಮಿಗೆ ಬಿಡಿಎ ಒಂದು ಕೋಟಿ

ಪ್ರಾಧಿಕಾರ ನೀಡುವ ಈ ನೆರವಿನಿಂದ ಬಿಡಿಎ ಚಲನಚಿತ್ರ ಭಂಡಾರವನ್ನು ಸ್ಥಾಪಿಸಿ ಕನ್ನಡ ಹಾಗೂ ಇತರ ಭಾಷೆಯ ಉಪಯುಕ್ತ ಚಲನಚಿತ್ರಗಳನ್ನು ಸಂಗ್ರಹಿಸಲು ಈ ನಿಧಿಯಿಂಅ ಬರುವ ಬಡ್ಡಿ ಹಣವನ್ನು ಬಳಸಿಕೊಳ್ಳಲಾಗುವುದು.
ಕರ್ನಾಟಕ ಚಲನಚಿತ್ರ ಸಂಸ್ಕೃತಿಯನ್ನು ಕಟ್ಟಲು ಹಾಗೂ ಕನ್ನಡ ಚಲನಚಿತ್ರಗಳ ಅಭಿವೃದ್ಧಿಗೆ ನೀತಿಗಳನ್ನು ರೂಪಿಸಿ, ಚಲನಚಿತ್ರರಂಗದ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರವು ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪಿಸಿದೆ.
ಕರ್ನಾಟಕದಲ್ಲಿ ಚಲನಚಿತ್ರ ಶಿಕ್ಷಣವನ್ನು ರೂಪಿಸಲು ಅಕಾಡಿಮಿಯು ಜಗತ್ತಿನ ಶ್ರೇಷ್ಠ ಚಿತ್ರಗಳು ಹಾಗೂ ಕನ್ನಡ ಭಾಷೆಯ ಚಿತ್ರಗಳನ್ನು ಡಿಜಿಟೈಸ್ ಮಾಡಿಸಿ ಸಂಗ್ರಹಿಸಲು ಚಲನಚಿತ್ರ ಭಂಡಾರವನ್ನು ಸ್ಥಾಪಿಸಲು ಆರ್ಥಿಕ ಅನುದಾನ ನೀಡುವಂತೆ ಕೋರಿ ಬಿಡಿಎ ಯನ್ನು ಚಲನಚಿತ್ರ ಅಕಾಡೆಮಿ ಕೋರಿತ್ತು.
ಅದಕ್ಕೆ ಸ್ಪಂದಿಸಿದ ಬಿಡಿಎ ಒಂದು ಕೋಟಿ ರೂಪಾಯಿಗಳನ್ನು ಒದಗಿಸಿ ಅದನ್ನು ಶಾಶ್ವತ ನಿಧಿಯಾಗಿ ನಿಶ್ಚಿತ ಠೇವಣಿಯಲ್ಲಿಟ್ಟು ಅದರಿಂದ ಬರುವ ಬಡ್ಡಿ ಹಣದಿಂದ ಚಲನಚಿತ್ರ ಭಂಡಾರವನ್ನು ನಿರ್ವಹಿಸಬೇಕೆಂಬ ಷರತ್ತು ವಿಧಿಸಿದೆ.
ಪ್ರಾಧಿಕಾರದ ಸಭೆಯಲ್ಲಿ ಸಹ ಈ ನಿಧಿಯನ್ನ್ನು ನೀಡಲು ಒಪ್ಪಿಗೆ ದೊರೆತಿದ್ದು, ಚಲನಚಿತ್ರ ಭಂಡಾರಕ್ಕೆ ಬಿಡಿಎ ಚಿತ್ರ ಭಂಡಾರ ಎಂಬ ಹೆಸರನ್ನಿಡಬೇಕೆಂದು ಸೂಚಿಸಲಾಗಿದೆ. ಈ ನಿಧಿಯ ಬಡ್ಡಿ ಹಣವನ್ನು ಚಲ್ನಚಿತ್ರ ಭಂಡಾರದ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಕ್ಕೆ ಬಳಸದಿರಲು ಸಹ ಷರತ್ತು ವಿಧಿಸಲಾಗಿದೆ.
ಪ್ರಬಲ ಸಂವಹನ ಮಾಧ್ಯಮವೆನಿಸಿದ ಚಲನಚಿತ್ರವನ್ನು ಜನಮುಖಿಯಾಗಿಸುವ ಪ್ರಯತ್ನದಲ್ಲಿ ಹಾಗೂ ಮುಂದಿನ ಪೀಳಿಗೆಗೆ ಕನ್ನಡದ ಚಿತ್ರಗಳನ್ನು ಸಂಗ್ರಹಿಸಿಡುವ ಮಹತ್ತರ ಉದ್ದೇಶದಲ್ಲಿ ಬಿಡಿಎ ಭಾಗಿಯಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











