»   »  ರಾಜ್ ಪ್ರತಿಮೆ ಸ್ಥಳಾಂತರಕ್ಕೆ ಹೈಕೋರ್ಟ್ ಸೂಚನೆ

ರಾಜ್ ಪ್ರತಿಮೆ ಸ್ಥಳಾಂತರಕ್ಕೆ ಹೈಕೋರ್ಟ್ ಸೂಚನೆ

Subscribe to Filmibeat Kannada

ಬೆಂಗಳೂರು ಪುರಭವನದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಡಾ.ರಾಜ್ ಕುಮಾರ್ ಪ್ರತಿಮೆಯನ್ನು ಮತ್ತೊಂದೆಡೆಗೆ ಸ್ಥಳಾಂತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉದ್ದೇಶಿಸಿದೆ. ಈ ವಿಷಯವನ್ನು ಕರ್ನಾಟಕ ಹೈಕೋರ್ಟ್ ಗೆ ಬೆಂಗಳೂರು ಮಹಾನಗರ ಪಾಲಿಕೆ ಬುಧವಾರ ತಿಳಿಸಿದೆ.

ಈ ಹಿಂದೆ ಡಾ.ರಾಜ್ ಪ್ರತಿಮೆಯನ್ನು ಚೆನ್ನಮ್ಮ ಪ್ರತಿಮೆಯ ಎದುರುಗಡೆ ಸ್ಥಾಪಿಸಲು ಬಿಬಿಎಂಪಿ ಉದ್ದೇಶಿಸಿತ್ತು. ಹೀಗೆ ಮಾಡುವುದರಿಂದ ಚೆನ್ನಮ್ಮ ಪ್ರತಿಮೆ ಜನರಿಗೆ ಕಾಣುವುದಿಲ್ಲ. ಹಾಗಾಗಿ ರಾಜ್ ಪ್ರತಿಮೆಯನ್ನು ಚೆನ್ನಮ್ಮ ಪ್ರತಿಮೆಯ ಪಕ್ಕದಲ್ಲಿ ಸ್ಥಾಪಿಸುವಂತೆ ಬಿಬಿಎಂಪಿಗೆ ಆದೇಶಿಸುವಂತೆ ಕೋರಿ ವಕೀಲ ಬಿ.ವಿ.ಪುಟ್ಟೇಗೌಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಡಾ.ರಾಜ್ ಪ್ರತಿಮೆ ಕುರಿತು ಪಾಲಿಕೆ ತಿಳಿಸಿರುವ ಹಿನ್ನೆಲೆಯಲ್ಲಿ ಅದರಂತೆ ಮುಂದುವರಿಯುವಂತೆ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ಶಾಂತನ ಗೌಡರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

ಈ ಸಂಬಂಧ ಸರಕಾರದ ಅನುಮತಿ ಕೇಳಲಾಗಿದೆ. ಅನುಮತಿ ದೊರೆತ ಬಳಿಕ ಸೂಕ್ತ ಸ್ಥಳ ಆಯ್ಕೆ ಮಾಡಿ ಡಾ.ರಾಜ್ ಪ್ರತಿಮೆ ಸ್ಥಾಪಿಸಲಾಗುತ್ತದೆ ಎಂದು ಪಾಲಿಕೆ ಪರ ವಕೀಲರು ತಿಳಿಸಿದ್ದಾರೆ. ಪ್ರತಿಮೆ ಸ್ಥಾಪನೆ ವಿರೋಧಿಸಿ 2007ರ ಸೆಪ್ಟೆಂಬರ್ ನಲ್ಲಿ ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಸಾಹಿತಿಗಳಾದ ಡಾ.ಜಿ.ಎಸ್.ಶಿವರುದ್ರಪ್ಪ, ಪ್ರೊ.ಎಲ್.ಎಸ್.ಶೇಷಗಿರಿರಾವ್ ಸೇರಿದಂತೆ ಅನೇಕ ಮಂದಿ ಪಾಲಿಕೆ ಮನವಿ ಸಲ್ಲಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada