»   »  'ಪ್ರೀತ್ಸೆ ಪ್ರೀತ್ಸೆ' ಪ್ರಜ್ಞಾ ತಮಿಳು ಸಿನಿಮಾಗೆ ಪಲಾಯನ

'ಪ್ರೀತ್ಸೆ ಪ್ರೀತ್ಸೆ' ಪ್ರಜ್ಞಾ ತಮಿಳು ಸಿನಿಮಾಗೆ ಪಲಾಯನ

Posted By:
Subscribe to Filmibeat Kannada

ಕನ್ನಡದ ಟೀನೇಜ್ ನಟಿ ಪ್ರಜ್ಞಾ (17) ಸದ್ದಿಲ್ಲದಂತೆ ತಮಿಳು ಚಿತ್ರರಂಗಕ್ಕೆ ಹಾರಿದ್ದಾರೆ. ಕನ್ನಡದ 'ಬಾಬಾ' ಚಿತ್ರದ ಮೂಲಕ ಪ್ರಜ್ಞಾ ಗಾಂಧಿನಗರಕ್ಕೆ ಅಡಿಯಿಟ್ಟಿದ್ದರು. ಆಗವರು ಇನ್ನೂ 9ನೇ ತರಗತಿಯಲ್ಲಿ ಓದುತ್ತಿದ್ದರು. ನಂತರ 'ಕೆಂಪ' ಚಿತ್ರ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬಂದವು.

ಫಣಿ ರಾಮಚಂದ್ರ ನಿರ್ದೇಶನದ 'ಮತ್ತೆ ಬಂದ ಗಣೇಶ' ಚಿತ್ರದಲ್ಲಿ ವಿಜಯ ರಾಘವೇಂದ್ರ ಜತೆ ನಟಿಸಿದ್ದರು. ಇತ್ತೀಚೆಗೆ ತೆರೆಕಂಡ 'ಪ್ರೀತ್ಸೆ ಪ್ರೀತ್ಸೆ 'ಚಿತ್ರದಲ್ಲಿ ಲೂಸ್ ಮಾದ ಅಲಿಯಾಸ್ ಯೋಗೇಶ್ ಜತೆ ಪ್ರಜ್ಞಾ ಅಭಿನಯಿಸಿದ್ದಾರೆ. ಇದುವರೆಗೂ ಕನ್ನಡದ ಏಳು ಚಿತ್ರಗಳಲ್ಲಿ ಪ್ರಜ್ಞಾ ನಟಿಸಿರುವುದು ವಿಶೇಷ.

ತಮಿಳಿನ'ಕಾದಲ್' ಖ್ಯಾತಿಯ ನಿರ್ದೇಶಕ ಬಾಲಾಜಿ ಶಕ್ತಿವೇಲ್ ರ ಹೊಸ ಚಿತ್ರಕ್ಕೆ ಪ್ರಜ್ಞಾ ಆಯ್ಕೆಯಾಗಿದ್ದಾರೆ. ಈ ಚಿತ್ರದ ಮೂಲಕ ಹೊಸ ನಾಯಕ ನಟನನ್ನು ಬಾಲಾಜಿ ಪರಿಚಯಿಸಲಿದ್ದಾರೆ. ಆಗಸ್ಟ್ ನಲ್ಲಿ ಈ ಚಿತ್ರ ಸೆಟ್ಟೇರಲಿದೆ. ಏತನ್ಮಧ್ಯೆ ಖಾಸಗಿಯಾಗಿ ಪಿಯುಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ ಪ್ರಜ್ಞಾ.

ಪ್ರಜ್ವಲ್ ದೇವರಾಜ್ ನಟನೆಯ 'ಕೆಂಚ', ವಿಜಯ್ ಜತೆ 'ದೇವ್ರು', ದಿಗಂತ್ ಜತೆ 'ಮಳೆ ಬಿಲ್ಲೆ' ಚಿತ್ರಗಳಲ್ಲಿ ಪ್ರಜ್ಞಾ ನಟಿಸಿದ್ದಾರೆ. ಈ ಎಲ್ಲಾ ಚಿತ್ರಗಳು ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿವೆ. ಒಟ್ಟಿನಲ್ಲಿ ಮೈಸೂರಿನ ಹುಡುಗಿ ಪ್ರಜ್ಞಾ ತಮಿಳಿನತ್ತ ಪಾದ ಬೆಳೆಸಿ ಗಾಂಧಿನಗರಿಯಲ್ಲಿ ಅಚ್ಚರಿ ಮೂಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada