»   » ಕೆಂಗೇರಿ ಬಳಿ ಸಾಹಸಸಿಂಹನಿಗೊಂದು ಗುಡಿ

ಕೆಂಗೇರಿ ಬಳಿ ಸಾಹಸಸಿಂಹನಿಗೊಂದು ಗುಡಿ

Posted By:
Subscribe to Filmibeat Kannada

ತಮಿಳು, ತೆಲುಗು ಚಿತ್ರರಂಗದಲ್ಲಿ ನಟಿಯರಿಗೆ ಅಭಿಮಾನಿಗಳು ಗುಡಿ ಗೊಪುರಗಳನ್ನು ಕಟ್ಟಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಆದರೆ, ನಟನೊಬ್ಬನಿಗೆ ಗುಡಿ ಕಟ್ಟಿಸುತ್ತಿರುವುದು ಕನ್ನಡ ಚಿತ್ರೋದ್ಯಮಕ್ಕಷ್ಟೆ ಅಲ್ಲ ಭಾರತೀಯ ಚಿತ್ರೋದ್ಯಮಕ್ಕೂ ಹೊಸತು. ಈಗ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ನೆನಪಿಗಾಗಿ ಗುಡಿ ಕಟ್ಟುವ ಸಾಹಸಕ್ಕೆ ಕೈಹಾಕಿದ್ದಾರೆ 'ಆಪ್ತರಕ್ಷಕ' ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್!

ಕೆಂಗೇರಿ ಬಳಿಯ ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಲಿದೆ. ಈ ಸ್ಮಾರಕ ಸ್ಥಳದಲ್ಲಿ ಆಳೆತ್ತರ ಕಂಚಿನ ಪ್ರತಿಮೆಯನ್ನು ವಿಷ್ಣು ಅವರ ಮೊದಲ ಪುಣ್ಯ ತಿಥಿಯಂದು (ಡಿಸೆಂಬರ್ 30) ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ ಕೃಷ್ಣ ಪ್ರಜ್ವಲ್. ಕಂಚಿನ ಪ್ರತಿಮೆಯನ್ನು ನಿರ್ಮಿಸಲು ಸೂಕ್ತ ಶಿಲ್ಪಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ವಿಷ್ಣುವರ್ಧನ್ ಅವರ ಧರ್ಮಪತ್ನಿ ಭಾರತಿ ಅವರು ಪ್ರತಿಮೆ ಸ್ಥಾಪನೆಗೆ ಒಪ್ಪಿಗೆಯನ್ನು ನೀಡಿದ್ದಾರೆ. ಎದೆಮಟ್ಟದ ವಿಗ್ರಹ ನಿರ್ಮಿಸುವುದಕ್ಕಿಂತ ಮನುಷ್ಯನಷ್ಟೆ ಎತ್ತರದ ಪ್ರತಿಮೆ ನಿರ್ಮಿಸುವ ಕಲ್ಪನೆ ಭಾರತಿ ಅವರದೆ. ಪ್ರತಿಮೆ ಹೇಗಿರಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎನ್ನುತ್ತಾರೆ ಕೃಷ್ಣ ಪ್ರಜ್ವಲ್.

ಪ್ರತಿಮೆ ಯುವ ವಿಷ್ಣುವರ್ಧನ್ ನೈಜ ರೂಪದಲ್ಲಿರಬೇಕೆ ಅಥವಾ ಅವರ ಯಾವುದಾದರೂ ಚಿತ್ರದ ಭಂಗಿಯಲ್ಲಿರಬೇಕೆ ಎಂಬ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ಭಾರತಿ ವಿಷ್ಣುವರ್ಧನ್ ಅವರ ತೀರ್ಮಾನವೆ ಅಂತಿಮ ಎನ್ನಲಾಗಿದೆ. ಶೀಘ್ರದಲ್ಲೇ ಎಲ್ಲ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ ಕೃಷ್ಣ ಪ್ರಜ್ವಲ್.

ವಿಷ್ಣುವರ್ಧನ್ ಅವರ ಪ್ರತಿಮೆ ಹಾಗೂ ಮಂದಿರಕ್ಕೆ ಅಂದಾಜು ಒಂದು ಕೋಟಿ ರುಪಾಯಿ ಖರ್ಚಾಗಬಹುದು ಎಂದು ಲೆಕ್ಕಹಾಕಲಾಗಿದೆ. ದುಡ್ಡು ಎಷ್ಟೇ ಖರ್ಚಾಗಲಿ ಚಿಂತೆಯಿಲ್ಲ ಎನ್ನುತ್ತಿದ್ದಾರೆ ಕೃಷ್ಣ ಪ್ರಜ್ವಲ್. ಬಾಕ್ಸಾಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವ 'ಆಪ್ತರಕ್ಷಕ' ಚಿತ್ರದ ಲಾಭದಲ್ಲಿ ಕೊಂಚ ಭಾಗವನ್ನು ಮಾತ್ರ ಪ್ರತಿಮೆಗೆ ಕೃಷ್ಣ ಪ್ರಜ್ವಲ್ ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada