ವೀರ ಸಂಗೊಳ್ಳಿರಾಯಣ್ಣನಾಗಿ ದರ್ಶನ್

ಈ ಮುಂಚೆ ಇದೇ ಹೆಸರಿನ ಚಿತ್ರವನ್ನು ಮಾಡುವುದಾಗಿ ತಮಿಳ್ಗನ್ನಡ ನಟ ಅರ್ಜುನ್ ಸರ್ಜಾ ಪ್ರಕಟಿಸಿದ್ದರು. ಆದರೆ, ಕಾರಣಾಂತರದಿಂದ ಅರ್ಜುನ್ ಚಿತ್ರವನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಈ ಸದವಕಾಶ ದರ್ಶನ್ ಗೆ ಒಲಿದು ಬಂದಿದೆ. ಸಂಗೊಳ್ಳಿ ರಾಯಣ್ಣನ ವೀರ ಚರಿತ್ರೆ ಆಧರಿಸಿ ಚಿತ್ರಕಥೆಯನ್ನು ಕೇಶವ ಆದಿತ್ಯ ಅವರು ಬರೆದಿದ್ದಾರೆ. ಆನಂದ್ ಅಪ್ಪುಗೊಳ್ ಅವರು ನಿರ್ಮಾಣದ ಈ ಚಿತ್ರದ ವಿವರಗಳು ಸದ್ಯದಲ್ಲೇ ಸಿಗಲಿದೆ. ರಾಯಣ್ಣನ ಬಗ್ಗೆ ಮಾಹಿತಿ ಕಲೆ ಹಾಕಲು ನಿರ್ದೇಶಕ ನಾಗಣ್ಣ ಅವರ ತಂಡ ಈಗಾಗಲೇ ಬೆಳಗಾವಿಯಲ್ಲಿ ಸಂಶೋಧನೆ ಆರಂಭಿಸಿದೆಯಂತೆ!
ಲಾಂಗ್( ಆಧುನಿಕ ಮಾದರಿಯ ಕತ್ತಿ?!) ಹಿಡಿಯುವಲ್ಲಿ ಪಿಎಚ್ ಡಿ ಮಾಡಿರುವ ದರ್ಶನ್ ಅವರಿಗೆ ಈ ಚಿತ್ರದಲ್ಲಿ ಕತ್ತಿವರಸೆ ಸಲೀಸಾಗಬಹುದು. ಪುಡಿರೌಡಿಗಳ ಕೊಚ್ಚುತ್ತಿದ್ದ ಕತ್ತಿ, ದೇಶಪ್ರೇಮಕ್ಕಾಗಿ ಝಲಪಿಸುತ್ತಿರುವುದು ಸಾರ್ಥಕತೆ ಎನ್ನಬಹುದು. ಆದರೆ, ಐತಿಹಾಸಿಕ ಪಾತ್ರಧಾರಿಗೆ ಬೇಕಾದ ಸಂಭಾಷಣಾ ಚತುರತೆ, ವೈವಿಧ್ಯತೆಯನ್ನು ದರ್ಶನ್ ಎಷ್ಟರಮಟ್ಟಿಗೆ ಅಳವಡಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ದರ್ಶನ್ ಈ ಪಾತ್ರ ಮಾಡಿ ಸೈ ಎನಿಸಿದರೆ, ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ಮಿಂಚಿ ಮರೆಯಾದ ತನ್ನ ತಂದೆಗೆ ನಿಜವಾದ ಕಾಣಿಕೆ ಸಲ್ಲಿಸಿದಂತೆ.
ಶಿವರಾಜ್ ಅವರ ಕುಮಾರರಾಮ, ವಿಜಯ್ ರಾಘವೇಂದ್ರರ ಕಲ್ಲರಳಿ ಹೂವಾಗಿ' ಚಿತ್ರಗಳು ಪ್ರೇಕ್ಷಕರ ಮನಮುಟ್ಟಿದ್ದು ಅಷ್ಟರಲ್ಲೇ ಇತ್ತು.ಇದ್ದುದ್ದರಲ್ಲಿ ಹಿಂದೂ ಮುಸ್ಲಿಂ ಪ್ರೇಮಕಥೆಯುಳ್ಳ 'ಕಲ್ಲರಳಿ ಹೂವಾಗಿ' ಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಆದರೆ, ಎರಡು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋಲುಂಡಿದ್ದವು.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications











