»   »  ಹೊಸ ಸಾಹಸಕ್ಕೆ ಕೈಹಚ್ಚಿದಅಣಜಿ ನಾಗರಾಜ್

ಹೊಸ ಸಾಹಸಕ್ಕೆ ಕೈಹಚ್ಚಿದಅಣಜಿ ನಾಗರಾಜ್

Posted By:
Subscribe to Filmibeat Kannada

ಆರ್ಥಿಕ ಸಂಕಷ್ಟದಲ್ಲೂ ಕನ್ನಡ ಚಿತ್ರರಂಗ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಛಾಯಾಗ್ರಾಹಕ ಅಣಜಿ ನಾಗರಾಜ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. 10 ಮಂದಿ ನಿರ್ದೇಶಕರು ಮತ್ತು12 ಮಂದಿ ಛಾಯಾಗ್ರಹಕರೊಂದಿಗೆ 24 ಗಂಟೆಗಳಲ್ಲಿ ಚಿತ್ರವೊಂದನ್ನು ತೆರೆಗೆ ತರುವ ಸಾಹಸಕ್ಕೆ ಅವರು ಕೈಹಾಕಿದ್ದಾರೆ.

''ಈ ರೀತಿಯ ಯೋಚನೆ ಬಹಳ ದಿನಗಳಿಂದ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಚಿತ್ರೋದ್ಯಮದಲ್ಲಿ ನನಗೆ ಬಹಳಷ್ಟು ಗೆಳೆಯರಿದ್ದಾರೆ. ಅವರೆಲ್ಲರನ್ನೂ ಒಂದೇ ಚಿತ್ರಕ್ಕಾಗಿ ಬಳಸಿಕೊಳ್ಳುತ್ತಿದ್ದೇನೆ. ಗೆಳೆಯರೊಂದಿಗೆ ಕೂಡಿ ಕೆಲಸ ಮಾಡುವುದೆಂದರೆ ನನಗಿಷ್ಟ. ಈ ರೀತಿಯ ಅವಕಾಶವನ್ನು ಯಾರೂ ಬೇಡ ಎನ್ನುವುದಿಲ್ಲ. ಒಂದು ದಿನ ಮುಂಚಿತವಾಗಿ ತಿಳಿಸಿ ಖಂಡಿತ ನಾವೆಲ್ಲಾ ಬರುತ್ತೇವೆ ಎಂದು ಗೆಳೆಯರು ಒಪ್ಪಿದ್ದಾರೆ'' ಎನ್ನುತ್ತಾರೆ ಅಣಜಿ.

ಓಂ ಪ್ರಕಾಶ್ ರಾವ್, ಮಾದೇಶ, ಎ ಪಿ ಅರ್ಜುನ್, ನಾಗಶೇಖರ್, ರಂಗ ಕಿಶೋರ್, ರಾಘವ ಲೋಕಿ ಮತ್ತು ವಿಜಿ ನಿರ್ದೇಶಕರ ತಂಡದಲ್ಲಿದ್ದಾರೆ. ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಇನ್ನೂ ತಮ್ಮ ಒಪ್ಪಿಗೆಯನ್ನು ಸೂಚಿಸಿಲ್ಲವಂತೆ. ಪ್ರಸ್ತುತ ಅವರು 'ರಾಜ್' ಚಿತ್ರೀಕರಣಕ್ಕಾಗಿ ದಕ್ಷಿಣಾ ಆಫ್ರಿಕಾದಲ್ಲಿದ್ದಾರೆ. ಅಣಜಿಯ ಛಾಯಾಗ್ರಾಹಕ ಗೆಳೆಯರಾದ ಕೃಷ್ಣ, ಸತ್ಯ ಹೆಗಡೆ, ಆರ್ ಗಿರಿ, ಪಿಕೆಎಸ್ ದಾಸ್, ಎಂ ಕೆ ಸೀನು, ವೀನಸ್ ಮೂರ್ತಿ ಮತ್ತು ಚಂದ್ರು ಕ್ಯಾಮೆರಾ ಹಿಡಿಯಲು ಒಪ್ಪಿಕೊಂಡಿದ್ದಾರೆ.

ಅದೆಲ್ಲಾ ಸರಿ ಇಷ್ಟು ಮಂದಿ ನಿರ್ದೇಶಕರು, ಛಾಯಾಗ್ರಾಹಕರಿದ್ದರೆ ಗೊಂದಲವಾಗುವುದಿಲ್ಲವೇ? ಎಂದರೆ, ಸಾಧ್ಯವೇ ಇಲ್ಲ ಎನ್ನುತ್ತಾರೆ ಅಣಜಿ. ಒಬ್ಬೊಬ್ಬ ನಿರ್ದೇಶಕನಿಗೂ ತಲಾ ನಾಲ್ಕು ಸನ್ನಿವೇಶಗಳನ್ನು ನಿರ್ದೇಶಿಸಲು ತಿಳಿಸುತ್ತೇವೆ. ಹಾಗಾಗಿ ಎಲ್ಲೂ ಗೊಂದಲ ನಿರ್ಮಾಣವಾಗುವುದಿಲ್ಲ ಎನ್ನುತ್ತಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕ ನಟನಾಗಬೇಕು ಎಂಬುದು ನನ್ನ ಆಸೆ. ನವ್ಯಾ ನಾಯರ್ ಮತ್ತು ಮೀರಾ ಜಾಸ್ಮಿನ್ ರನ್ನೂ ಸಂಪರ್ಕಿಸಲಿದ್ದೇನೆ. ಅಣಜಿ ಅವರೇ ನಿರ್ಮಿಸುತ್ತಿರುವ ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ಒಟ್ಟಿನಲ್ಲಿ ನನ್ನ ಈ ಸಾಧನೆಯನ್ನು ಇಡೀ ಕನ್ನಡ ಚಿತ್ರೋದ್ಯಮ ಕೊಂಡಾಡಲಿದೆ ಎಂಬ ವಿಶ್ವಾಸದಲ್ಲಿ ಅಣಜಿ ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada