»   » 50ರ ಹರೆಯ ಚಿರ ಕನಸುಗಾರ ರವಿಚಂದ್ರನ್

50ರ ಹರೆಯ ಚಿರ ಕನಸುಗಾರ ರವಿಚಂದ್ರನ್

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚಿತ್ರರಸಿಕರ ಪಾಲಿಗೆ ಇಂದು ಚಿತ್ರರಂಗದ ಮತ್ತೊಬ್ಬ ಸ್ಟಾರ್ ರವಿಚಂದ್ರನ್ ಅವರ ಜನ್ಮದಿನ ಆಚರಣೆಯ ಸಂಭ್ರಮ. 49 ಶಿಶಿರ, ವಸಂತಗಳನ್ನು ಕಂಡ ಕನಸುಗಾರನಿಗೆ ಇಂದು ಹೂ ಮಳೆ.

ಕನ್ನಡದ ಖ್ಯಾತ ನಿರ್ಮಾಪಕ ಹಾಗೂ ವಿತರಕರಾದ ವೀರಾಸ್ವಾಮಿ ಅವರ ಪುತ್ರ ರವಿಚಂದ್ರನ್ ಕೂಡ ಮನಸ್ಸು ಮಾಡಿದ್ದರೆ , ಸುಲಭವಾಗಿ ತಮಿಳು ಚಿತ್ರರಂಗಕ್ಕೆ ಕಾಲಿಡಬಹುದಿತ್ತು. ಆದರೆ, ಕನ್ನಡ ಚಿತ್ರರಂಗವನ್ನು ಬೆಳೆಸಿ, ತಾನು ಬೆಳೆಯುವುದು ಅವರ ಉದ್ದೇಶವಾಗಿತ್ತು. ರಾಜ್‌ಕುಮಾರ್, ವಿಷ್ಣುವರ್ಧನ್, ಪ್ರಭಾಕರ್, ಶ್ರೀನಾಥ್ , ಶಂಕರ್ ನಾಗ್ ಕಾಲದಲ್ಲೇ ಈ ಪ್ರಳಯಾಂತಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು,

ರವಿ ಸುವರ್ಣ ಯುಗ: ಕನ್ನಡ ಚಿತ್ರಗಳಲ್ಲಿ ತಾಂತ್ರಿಕತೆ ಹಾಗೂ ಶ್ರೀಮಂತಿಕೆ ಬಳಕೆ ಹೇಗೆಲ್ಲಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ರವಿ. ಪ್ರೇಮಲೋಕ ಚಿತ್ರದ ಮೂಲಕ ಯುವ ಜನತೆಯ ನಾಡಿ ಮಿಡಿತವನ್ನು ರವಿ ಅರಿತರು. ಹಂಸಲೇಖ ಹಾಗೂ ರವಿಚಂದ್ರನ್ ಕಾಂಬಿಯೇಷನ್ ಚಿತ್ರ ಕ್ಯಾಸೆಟ್ ಲೋಕದಲ್ಲಿ ಹೊಸ ಇತಿಹಾಸ ಬರೆಯಿತು.

ನಟನೆ, ನಿರ್ದೇಶನ, ಸಂಗೀತ, ಚಿತ್ರಕಥೆ, ಕಲೆ, ನಿರ್ಮಾಣ ಹೀಗೆ ಚಿತ್ರರಂಗದ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡ ರವಿ, ಹಲವು ಬಾರಿ ಎಡವಿದ್ದುಂಟು. ಶಾಂತಿ ಕ್ರಾಂತಿ, ಅಹಂ ಪ್ರೇಮಾಸ್ಮಿ, ಏಕಾಂಗಿ ಮುಂತಾದ ಚಿತ್ರಗಳು ಅವರ ನಿರೀಕ್ಷೆಯನ್ನು ಸುಳ್ಳು ಮಾಡಿ ನಷ್ಟ ಉಂಟು ಮಾಡಿದರೂ, ಧೃತಿಗೆಡದೆ ಮತ್ತೆ ಮತ್ತೆ ಹೊಸದನ್ನು ನೀಡುವ ಹುಮ್ಮಸ್ಸಿನಿಂದ ರವಿ ಫೀಲ್ಡ್ ಗೆ ಇಳಿಯುತ್ತಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟಾಗ ಮೊದ ಮೊದಲು ಶ್ರೀನಿವಾಸ ಪ್ರಭು ಅವರ ಕಂಠದ ನೆರವು ಪಡೆದಿದ್ದ ರವಿ ನಂತರ ತಾವೆ ಮಾತನಾಡಲು ಶುರು ಮಾಡಿದರು. ಜೂಹಿ ಚಾವ್ಲಾ, ಖುಷ್ಬೂ, ರಂಭಾ, ಮೀನಾ, ರೋಜಾ, ಮೀರಾ ಜಾಸ್ಮಿನ್ ಹಾಗೂ ಇತ್ತೀಚಿನ ಹೂ ನಮಿತಾ ಸೇರಿದಂತೆ ದಕ್ಷಿಣ ಹಾಗೂ ಉತ್ತರಭಾರತದ ಆಯಾ ಕಾಲದ ಹೆಸರಾಂತ ಹೀರೋಯಿನ್ ಗಳನ್ನು ಕನ್ನಡಕ್ಕೆ ಪರಿಚಯಿಸಿದವರು ಕ್ರೇಜಿ ಸ್ಟಾರ್.

ಕಳೆದೆರಡು ವರ್ಷಗಳಲ್ಲಿ ರವಿ ಅವರ ಚಿತ್ರಗಳಲ್ಲಿ ಬೆಳ್ಳಿತೆರೆಯನ್ನು ಅಪ್ಪಳಿಸದಿದ್ದರೂ, ಸದಾ ಚಿತ್ರಕಥೆ ಹೆಣೆಯುತ್ತಾ, ಲೋಕೆಷನ್ ಹುಡುಕುತ್ತಾ ಇರುವ ಕ್ರೇಜಿಸ್ಟಾರ್ ಅವರ ಹೂ ಚಿತ್ರ ಬಿಡುಗಡೆಗೆ ಚಿತ್ರರಸಿಕರು ಕಾತುರದಿಂದ ಕಾದು ನೋಡುತ್ತಿದ್ದಾರೆ. ಮಂಜಿನ ಹನಿ, ಕೀಚಕ, ದುಷ್ಯಂತ, ನಾ ಚಿತ್ರಗಳು ರವಿ ಅವರ ಘೋಷಿತ ಮುಂದಿನ ಚಿತ್ರಗಳು. ಕನ್ನಡದ ಕ್ರೇಜಿಸ್ಟಾರ್, ಷೋಮ್ಯಾನ್ ರವಿಚಂದ್ರನ್ ಅವರಿಗೆ ದಟ್ಸ್ ಕನ್ನಡ ವತಿಯಿಂದ ಹಾರ್ಧಿಕ ಶುಭಾಶಯಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada